ಐಗೂರು, ಮೇ ೩೦ : ಸೋಮವಾರಪೇಟೆ - ಮಡಿಕೇರಿ ಹೆದ್ದಾರಿಯಲ್ಲಿನ ಪ್ರಮುಖ ಸ್ಥಳ ಹಾಗೂ ಅತಿ ಸೂಕ್ಷö್ಮವಾಗಿರುವ ಐಗೂರಿನ ಕಬ್ಬಿಣ ಸೇತುವೆಗೆ ಪರ್ಯಾಯವಾಗಿ ನೂತನ ಸೇತುವೆ ನಿರ್ಮಿಸುವ ಸಲುವಾಗಿ ಮೀಸಲಾಗಿರುವ ರೂ.೧೦ ಕೋಟಿ ಅನುದಾನ, ಕಾಮಗಾರಿಯೇ ಪ್ರಾರಂಭವಾಗದ ಕಾರಣ ಬಳಕೆಯಾಗದೆ ಮೂಲೆ ಗುಂಪಾದAತಿದೆ. ಕಳೆೆದ ವರ್ಷವಷ್ಟೆ ದುರಸ್ತಿಗೊಂಡ ಪ್ರಸ್ತುತ ಇರುವ ಹಳೆಯ ಕಬ್ಬಿಣ ಸೇತುವೆಯ ಮೇಲೆ ನಿಯಂತ್ರಣವಿಲ್ಲದೆ ಭಾರಿ ಸರಕು ವಾಹನಗಳು ಚಲಿಸುತ್ತಿದ್ದು, ಸೇತುವೆ ದುಸ್ಥಿತಿ ತಲುಪಿದಲ್ಲಿ ಹೊಸ ಸೇತುವೆಯೂ ನಿರ್ಮಾಣವಾಗದ ಕಾರಣ ಸಂಪರ್ಕ ಕಡಿತಗೊಳ್ಳುವ ಭೀತಿ ಇದೆ.

ಕಳೆದ ಸಾಲಿನ ನವೆಂಬರ್ ತಿಂಗಳಿನಲ್ಲಿ ಸೋಮವಾರಪೇಟೆ - ಮಡಿಕೇರಿ ಹೆದ್ದಾರಿ ರಸ್ತೆಯ ಐಗೂರಿನ ಕಬ್ಬಿಣ ಸೇತುವೆಯ ಎಡಭಾಗದಲ್ಲಿ ಬೃಹದಾಕಾರದ ಗುಂಡಿಯಾಗಿದ್ದು ಸೇತುವೆಯ ತಳ ಭಾಗದಲ್ಲಿ ಅಳವಡಿಸಿದ ಕಬ್ಬಿಣದ ರಾಡುಗಳು ತುಂಡಾಗಿ ಸೇತುವೆ ಬಿರುಕು ಬಿಟ್ಟ ಪರಿಣಾಮ ಸಂಚಾರಕ್ಕೆ ತೊಡಕುಂಟಾಗಿತ್ತು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಮತ್ತು ಜಿಲ್ಲಾ ಪಂಚಾಯಿತಿ ಅಭಿಯಂತರರು ಸ್ಥಳ ಪರಿಶೀಲನೆ ಮಾಡಿ ಗುಂಡಿಮಯವಾಗಿದ್ದ ರಸ್ತೆಯನ್ನು ಮುಚ್ಚಿಸಿ ತುಂಡಾದ ರಾಡುಗಳನ್ನು ವೆಲ್ಡಿಂಗ್ ಮಾಡಿಸಿ ಗಟ್ಟಿಗೊಳಿಸುವಂತೆಯೂ ಮತ್ತು ಬಿರುಕುಬಿಟ್ಟ ರಸ್ತೆಯನ್ನು ಡಾಂಬರೀಕರಣಗೊಳಿಸುವAತೆ ಸ್ಥಳದಲ್ಲಿದ್ದ ಅಭಿಯಂತರರಿಗೆ ಸೂಚಿಸಿದ ಪರಿಣಾಮ ಒಂದೆರಡು ದಿನಗಳಲ್ಲಿ ಈ ಎಲ್ಲಾ ಕೆಲಸವನ್ನು ಪೂರೈಸಿ, ಸೇತುವೆಯನ್ನು ಗಟ್ಟಿಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ನಂತರದ ದಿನಗಳಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಎದುರು ಶಿಥಿಲಾವಸ್ಥೆಯ ಸೇತುವೆ ಬಗ್ಗೆ ವಿಷಯ ಪ್ರಸ್ತಾಪಿಸಿದ ಶಾಸಕ ಮಂತರ್ ಗೌಡ ಇಲಾಖೆಯ ಮೂಲಕ ಈ ಹಿಂದೆಯೇ ಬಿಡುಗಡೆಯಾಗಿ ಯಾವುದೇ ಕಾಮಗಾರಿಗೆ ಬಳಕೆಯಾಗದೇ ಇದ್ದ ರೂ ೧೦ ಕೋಟಿ ಅನುದಾನವನ್ನು ಪ್ರಸ್ತುತ ಇರುವ ಇಕ್ಕಟ್ಟಿನ ಸಂಚಾರ ಮಾರ್ಗ ಹೊಂದಿರುವ ಕಬ್ಬಿಣ ಸೇತುವೆಯ ಸಮೀಪದಲ್ಲಿಯೇ ನೂತನ ಸೇತುವೆ ನಿರ್ಮಾಣ ಮಾಡುವ ಸಲುವಾಗಿ ಹಣ ಮೀಸಲಿಡಲು ಸಫಲರಾದರು. ಆದರೆ ಕಾಮಗಾರಿ ಮಾತ್ರ ಇನ್ನೂ ಕೂಡ ಪ್ರಾರಂಭಗೊಳ್ಳದೆ ಇರುವ ಕಾರಣ ಮುಂಬರುವ ಮಳೆಗಾಲ ಸೇರಿದಂತೆ ಭಾರೀ ವಾಹನಗಳ ನಿರಂತರ ಓಡಾಟದಿಂದ ಪ್ರಸ್ತುತ ಇರುವ ಸೇತುವೆ ಮತ್ತೆ ದುಸ್ಥಿತಿ ತಲುಪುವ ಲಕ್ಷಣಗಳು ಕಾಣುತ್ತಿವೆ.

ಕಳೆದ ನವೆಂಬರ್‌ನಲ್ಲಿ ಸೇತುವೆಯ ತಾತ್ಕಾಲಿಕ ದುರಸ್ತಿ ಕಾರ್ಯ ನಡೆದಿದ್ದು, ಇದಾದ ಬಳಿಕ ಭಾರ ಹೊತ್ತ ಟೆನ್‌ವೀಲ್ ವಾಹನಗಳು, ಟಿಂಬರ್ ವಾಹನಗಳು ಎಗ್ಗಿಲ್ಲದೆ ಸಂಚರಿಸುತ್ತಿದ್ದು, ತಾತ್ಕಾಲಿಕ ದುರಸ್ತಿಗೊಂಡ ಸೇತುವೆಗೆ ಇದನ್ನು ತಡೆದುಕೊಳ್ಳುವ ಶಕ್ತಿ ಇಲ್ಲದಂತೆ ಗೋಚರಿಸುತ್ತಿದೆ. ಪುನಃ ಮೊದಲಿನ ಸ್ಥಿತಿಯಂತೆ ಗುಂಡಿಮಯವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಕಳೆದ ನವೆಂಬರ್‌ನಲ್ಲಿ ಸೇತುವೆಯ ಮೇಲ್ಭಾಗದ ರಸ್ತೆಯಲ್ಲಿ ಏಳೆಂಟು ಕಡೆಗಳಲ್ಲಿ ಬಿರುಕು ಕಾಣಿಸಿದ್ದು, ರಸ್ತೆಗೆ ಡಾಂಬರ್ ಹಾಕಿ ಮುಚ್ಚಲಾಗಿತ್ತು. ಆದರೆ ಈಗ ಭಾರೀ ವಾಹನಗಳ ಸಂಚಾರದಿAದ ನಿಧಾನವಾಗಿ ರಸ್ತೆಯ ಬಿರುಕುಗಳು ಬಾಯಿ ತೆರೆಯುತ್ತಿವೆ. ಜೂನ್ ತಿಂಗಳಿನಿAದ ಮಳೆಗಾಲವು ಪ್ರಾರಂಭವಾಗಿ ಸೇತುವೆಯ ಮೇಲ್ಭಾಗದ ರಸ್ತೆಯಲ್ಲಿ ನೀರು ನಿಲ್ಲುವುದರಿಂದ ನೀರಿನ ತೇವಾಂಶ ಹೆಚ್ಚಾಗಿ ಇಡೀ ಸೇತುವೆಯಲ್ಲಿ ಬಿರುಕು ದೊಡ್ಡದಾಗಿ ವಾಹನ ಸಂಚಾರಕ್ಕೆ ಅಡಚಣೆ ಆಗುವ ಸಾಧ್ಯತೆಗಳಿವೆ. ನೂತನ ಸೇತುವೆಯ ಕೆಲಸವು ಸದ್ಯಕ್ಕೆ ಪ್ರಾರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲವಾದರೂ ಸೋಮವಾರಪೇಟೆ ಮತ್ತು ಮಡಿಕೇರಿ ಕಡೆಯಿಂದ ಆಗಮಿಸುವ ಭಾರಿ ವಾಹನಗಳಿಗೆ ಕಡಿವಾಣ ಹಾಕಿ ವಾಹನಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡುವುದು ಸೂಕ್ತವಾಗಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೆದ್ದಾರಿ ಸಂಪೂರ್ಣವಾಗಿ ಬಂದ್ ಆಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

- ಎಂ.ಎ. ಸುಕುಮಾರ