ಭವಾನಿ ರೇವಣ್ಣ ಜಾಮೀನು ಅರ್ಜಿ ವಜಾ

ಬೆಂಗಳೂರು, ಮೇ ೩೧: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ದಲ್ಲಿ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬAಧಿಸಿದAತೆ ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ಜಾಮೀನು ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇಂದು ಆದೇಶ ನೀಡಿದೆ. ಈ ಹಿನ್ನೆಲೆ ಭವಾನಿ ರೇವಣ್ಣ ಅವರಿಗೂ ಬಂಧನದ ಭೀತಿ ಎದುರಾಗಿದೆ. ಮೈಸೂರಿನ ಕೆ.ಆರ್. ಪೇಟೆಯಲ್ಲಿ ದಾಖಲಾಗಿರುವ ಕಿಡ್ನಾö್ಯಪ್ ಕೇಸ್‌ನಲ್ಲಿ ಬಂಧನದ ಭೀತಿ ಎದುರಾದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಇಂದಿಗೆ ಜಾಮೀನು ಆದೇಶ ಕಾಯ್ದಿರಿಸಿತ್ತು. ಇದೀಗ ಕೋರ್ಟ್, ಭವಾನಿ ರೇವಣ್ಣ ಅವರಿಗೆ ಜಾಮೀನು ತಿರಸ್ಕರಿಸಿದೆ.

ಪ್ರಾಣಿ ಬಲಿ ಆರೋಪ ತಳ್ಳಿಹಾಕಿದ ಸಚಿವೆ

ತಿರುವನಂತಪುರ, ಮೇ ೩೧: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಾಣಿ ಬಲಿ ಆರೋಪವನ್ನು ಕೇರಳದ ಸಚಿವೆ ನಿರಾಕರಿಸಿದ್ದಾರೆ. ತಮ್ಮ ಹಾಗೂ ಸಿಎಂ ಸಿದ್ದರಾಮಯ್ಯ ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಉತ್ತರ ಕೇರಳದ ದೇವಸ್ಥಾನದಲ್ಲಿ ಪ್ರಾಣಿ ಬಲಿ ನೀಡಲಾಗಿದೆ ಎಂಬ ಡಿ.ಕೆ.ಶಿ. ಆರೋಪವನ್ನು ಕೇರಳದ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವೆ ಆರ್. ಬಿಂದು ಶುಕ್ರವಾರ ತಳ್ಳಿ ಹಾಕಿದ್ದಾರೆ. ಇಂತಹ ಕೃತ್ಯಗಳು ಕೇರಳದಲ್ಲಿ ನಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದೇಶದ ಇತರೆ ಭಾಗಗಳಲ್ಲಿ ಸಮಾಜವನ್ನು ಕರಾಳ ಯುಗಕ್ಕೆ ಎಳೆಯುವ ಪ್ರಯತ್ನಗಳು ನಡೆಯುತ್ತಿವೆ. ಹಾಗಿದ್ದರೂ, ಅಂಥ ಪ್ರಯತ್ನಗಳು ಕೇರಳದಲ್ಲಿ ನಡೆದಿವೆಯೇ ಎಂಬುದರ ಕುರಿತು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು. ಕೇರಳದ ದೇವಸ್ಥಾನವೊಂದರಲ್ಲಿ ಪ್ರಾಣಿ ಬಲಿ ನೀಡುವ ‘ಶತ್ರು ಭೈರವಿ ಯಾಗ' ಕೈಗೊಳ್ಳಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಗುರುವಾರ ಆರೋಪಿಸಿದ್ದರು. ಯಾರ ಹೆಸರನ್ನು ಬಹಿರಂಗಪಡಿಸದೇ ರಾಜ್ಯದ ಕೆಲವು ರಾಜಕೀಯ ವ್ಯಕ್ತಿಗಳು ಈ ಕೃತ್ಯ ನಡೆಸಿದ್ದರು ಎಂದಿದ್ದರು. ಅಘೋರಿಗಳ ಮೂಲಕ ಈ ಯಾಗ ನಡೆಸಲಾಗಿದೆ ಎಂದೂ ಆರೋಪಿಸಿದ್ದರು. ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಬಳಿ ಶತ್ರು ಸಂಹಾರಕ್ಕಾಗಿ ‘ಶತ್ರು ಭೈರವಿ ಯಾಗ' ನಡೀತಿದೆ. ಈ ಯಾಗಕ್ಕೆ ‘ಪಂಚ ಬಲಿ' ನೀಡಲಾಗುತ್ತದೆ. ೨೧ ಮೇಕೆ, ಮೂರು ಎಮ್ಮೆ, ೨೧ ಕಪ್ಪು ಕುರಿ, ಐದು ಹಂದಿಗಳ ಬಲಿ ಕೊಡಲಾಗುತ್ತದೆ ಎಂದು ಅವರು ಹೇಳಿದ್ದರು.

ಅಧಿಕಾರಿ ಆತ್ಮಹತ್ಯೆ ಪ್ರಕರಣ - ಎಸ್‌ಐಟಿ ರಚನೆ

ಬೆಂಗಳೂರು, ಮೇ ೩೧: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಹಾಗೂ ನಿಗಮದಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರಗಳ ಬಗ್ಗೆ ತನಿಖೆಗೆ ಐಪಿಎಸ್ ಅಧಿಕಾರಿ ಮನೀಷ್ ಖರ್ಬೀಕರ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್ ಪಿ. (೫೨) ಅವರು ಶಿವಮೊಗ್ಗದ ವಿನೋಬ ನಗರದ ಕೆಂಚಪ್ಪ ಲೇಔಟ್ ಬಳಿಯಿರುವ ತಮ್ಮ ನಿವಾಸದಲ್ಲಿ ಮೇ ೨೬ರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾದವರ ಹೆಸರು ಮತ್ತು ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಡೆತ್‌ನೋಟ್‌ನಲ್ಲಿ ಚಂದ್ರಶೇಖರ್ ಅವರು ವಿವರವಾಗಿ ಉಲ್ಲೇಖಿಸಿದ್ದರು.

ಬಿಸಿಲಿನ ತಾಪಕ್ಕೆ ೧೪ ಮಂದಿ ಸಾವು

ಪಾಟ್ನಾ, ಮೇ ೩೧: ಬಿಹಾರದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕಳೆದ ೨೪ ಗಂಟೆಗಳಲ್ಲಿ ೧೦ ಮತಗಟ್ಟೆ ಸಿಬ್ಬಂದಿ ಸೇರಿದಂತೆ ೧೪ ಜನ ಬಿಸಿಲಿನ ಶಾಖದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ ತಿಳಿಸಿದ್ದಾರೆ. ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ, ಭೋಜ್‌ಪುರದಲ್ಲಿ ಹೆಚ್ಚಿನ ಸಾವು-ನೋವುಗಳು ವರದಿಯಾಗಿವೆ. ಅಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಐವರು ಅಧಿಕಾರಿಗಳು ಶಾಖದಿಂದ ಸಾವನ್ನಪ್ಪಿದ್ದಾರೆ. ರೋಹ್ತಾಸ್‌ನಲ್ಲಿ ಮೂವರು ಚುನಾವಣಾ ಅಧಿಕಾರಿಗಳು ಮತ್ತು ಕೈಮೂರ್ ಹಾಗೂ ಔರಂಗಾಬಾದ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಚುನಾವಣಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹಲವೆಡೆ ತಾಪಮಾನ ೪೪ ಡಿಗ್ರಿ ಸೆಲ್ಸಿಯಸ್ ದಾಟಿದ್ದರಿಂದ ಜನ ಬಿಸಿಲಿನ ಬೇಗೆಯಿಂದ ತತ್ತರಿಸಿದ್ದಾರೆ. ಗುರುವಾರ, ಬಕ್ಸರ್‌ನಲ್ಲಿ ೪೭.೧ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳು, ಕೋಚಿಂಗ್ ಸಂಸ್ಥೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಜೂನ್ ೮ ರವರೆಗೆ ರಜೆ ಘೋಷಿಸಲಾಗಿದೆ.

ಅಪಹರಣ ಪ್ರಕರಣ-ರೇವಣ್ಣಗೆ ನೋಟೀಸ್ ಜಾರಿ

ಬೆಂಗಳೂರು, ಮೇ ೩೧: ಮೈಸೂರಿನ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬAಧಿಸಿದAತೆ ವಿಶೇಷ ನ್ಯಾಯಾಲಯ ನೀಡಿರುವ ಜಾಮೀನು ಪ್ರಶ್ನಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಶುಕ್ರವಾರ ಆರೋಪಿ ಶಾಸಕ ಹೆಚ್.ಡಿ. ರೇವಣ್ಣ ಅವರಿಗೆ ತುರ್ತು ನೋಟೀಸ್ ಜಾರಿ ಮಾಡಿದೆ. ಮಹಿಳೆ ಅಪಹರಣ ಆರೋಪದಡಿ ತಮ್ಮ ವಿರುದ್ಧ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ರೇವಣ್ಣ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಎಸ್‌ಐಟಿ ಮತ್ತು ದೂರುದಾರರಿಗೆ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ. ಎಸ್‌ಐಟಿ ಹಾಗೂ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ನೋಟೀಸ್ ಜಾರಿ ಮಾಡಿದೆ.