ನಾಪೋಕ್ಲು, ಮೇ ೩೦: ಸಮೀಪದ ನೆಲಜಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ತೋಟಗಳಿಗೆ ದಾಳಿ ಮಾಡಿ ನಷ್ಟ ಸಂಭವಿಸಿದೆ.
ಬಲ್ಲಮಾವಟಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ನೆಲಜಿ ಗ್ರಾಮದ ಮೊಣ್ಣಂಡ ಸೀತಮ್ಮ ಮತ್ತು ಅಪ್ಪಯ್ಯ ಅವರ ತೋಟದಲ್ಲಿ ಬುಧವಾರ ರಾತ್ರಿ ಅಡ್ಡಾಡಿರುವ ಕಾಡಾನೆಗಳು ಬಾಳೆ, ತೆಂಗು, ಅಡಿಕೆ ಸೇರಿದಂತೆ ವಿವಿಧ ಕೃಷಿ ಗಿಡಗಳನ್ನು ನಾಶಪಡಿಸಿವೆ. ಸುತ್ತಮುತ್ತಲ ಕಾಫಿ ಬೆಳೆಗಾರರ ತೋಟಗಳಿಗೂ ಹಾನಿಯಾಗಿದೆ.೩-೪ ಕಾಡಾನೆಗಳ ಹಿಂಡು ನಿರಂತರ ಅಡ್ಡಾಡುತ್ತಿದ್ದು, ನಷ್ಟ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಗ್ರಾಮದಲ್ಲಿ ಅಡ್ಡಾಡುತ್ತಿದ್ದು ಸಮಸ್ಯೆ ಸೃಷ್ಟಿಸುತ್ತಿವೆ. ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.