ವೀರಾಜಪೇಟೆ, ಮೇ ೩೦: ಬುರ್ಖಾ ಹಾಗೂ ಮಹಿಳೆಯ ಚಪ್ಪಲಿ ಧರಿಸಿ ವೇಷಮರೆಸಿಕೊಂಡು ಮನೆಗೆ ನುಗ್ಗಿ ವೃದ್ಧೆಯ ಕೊರಳಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ವೀರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತನ್ನ ಸೋದರತ್ತೆಯ ಸರವನ್ನೇ ಕದ್ದೊಯ್ದ ವೀರಾಜಪೇಟೆ-ಅಮ್ಮತ್ತಿ ರಸ್ತೆಯ ಕೊಮ್ಮೆತೋಡುವಿನ ನಿವಾಸಿ ಕೆ. ಹ್ಯಾರಿಸ್ (೫೩) ಬಂಧಿತ ಆರೋಪಿ.
ಘಟನೆ ಹಿನ್ನೆಲೆ
ತಾ. ೨೧ ರಂದು ವೀರಾಜಪೇಟೆ ನಗರದ ಇಬ್ರಾಹಿಂ ಎಂಬವರ ಮನೆಯಲ್ಲಿ ೯೭ ವರ್ಷದ ಅವರ ಅತ್ತೆ ಖತೀಜಾ ಒಬ್ಬಂಟಿಯಾಗಿದ್ದ ಸಂದರ್ಭ ಬುರ್ಖಾ ಧರಿಸಿಕೊಂಡು, ಕೈಯಲ್ಲಿ ಕೊಡೆ ಹಿಡಿದುಕೊಂಡು ಅಪರಿಚಿತರೊಬ್ಬರು ಬಂದು ೨೦ ಗ್ರಾಂ ತೂಕದ ಚಿನ್ನದ ಸರವನ್ನು ನಯವಾಗಿ ತೆಗೆದು, ಬಳಿಕ ಕಿವಿಯಲ್ಲಿದ್ದ ಓಲೆಯನ್ನು ಕೀಳಲು ಪ್ರಯತ್ನಿಸಿದ್ದು, ಈ ಸಂದರ್ಭ ವೃದ್ಧೆ ಬೊಬ್ಬೆ ಹಾಕಿದ ಸಂದರ್ಭ ಕಳ್ಳ ಪರಾರಿಯಾಗಿರುವುದಾಗಿ ಮನೆ ಮಾಲೀಕ ಇಬ್ರಾಹಿಂ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಖತೀಜಾಗೆ ಕಣ್ಣಿನ ಸಮಸ್ಯೆಯಿದ್ದು, ಸರವನ್ನು ಕಳವು ಮಾಡುವ ಸಂದರ್ಭ ಗಮನಕ್ಕೆ ಬಂದಿರುವುದಿಲ್ಲ. ಕಿವಿಓಲೆ ಕೀಳುವಾಗ ಕಳ್ಳತನವಾಗುತ್ತಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿ ಕ್ಯಾಮರ ದೃಶ್ಯಾವಳಿಗಳನ್ನು ಕಲೆಹಾಕಿದ ಸಂದರ್ಭ ಹ್ಯಾರಿಸ್ ತನ್ನ ಸ್ವಂತ ಸಹೋದರ ಇಬ್ರಾಹಿಂನ ಮನೆಗೆ ನುಗ್ಗಿ ತನ್ನ ಅತ್ತೆಯ (ತಂದೆಯ ತಂಗಿ) ಕೊರಳಿನಲ್ಲಿದ್ದ ಸರವನ್ನು ಕದ್ದೊಯ್ದಿ ರುವುದು ಬಯಲಾಗಿದೆ. ೨ ದಿನಗಳಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದಾರೆ.
(ಮೊದಲ ಪುಟದಿಂದ) ಕೃತ್ಯ ಎಸಗಿದ ನಂತರ ಮನೆಯ ಅನತಿ ದೂರದಲ್ಲಿ ನಿಲ್ಲಿಸಿದ್ದ ತನ್ನ ಕಾರಿನತ್ತ (ಕೆಎ-೧೨-ಪಿ-೮೩೩೫) ನಡೆದುಕೊಂಡು ಹೋದ ಆರೋಪಿ ಅಲ್ಲಿಂದ ತೆರಳಿ ಧರಿಸಿದ್ದ ಬುರ್ಖಾ, ಚಪ್ಪಲಿಯನ್ನು ಮಾರ್ಗಮಧ್ಯೆ ಎಸೆದು ತನ್ನ ಮನೆಯತ್ತ ತೆರಳಿ ಕೇರಳದ ಇರಿಟ್ಟಿಗೆ ಕದ್ದ ಚಿನ್ನವನ್ನು ಕೊಂಡೊಯ್ದು ಅಲ್ಲಿನ ಚಿನ್ನಾಭರಣ ಮಳಿಗೆಯೊಂದರಲ್ಲಿ ಮಾರಿ ಆ ಹಣದಲ್ಲಿ ಎರಡು ಚಿನ್ನದ ಹೊಸ ಓಲೆಯನ್ನು ಖರೀದಿಸಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಆರೋಪಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.