ಡಾ. ಡೆವೀನ್
ವೀರಾಜಪೇಟೆ, ಮೇ ೩೧: ಹದಿಹರೆಯದವರಲ್ಲಿ ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದು, ಇದು ತುಂಬಾ ಗಂಭೀರ ಸಮಸ್ಯೆ ಯಾಗಿದೆ ಎಂದು ಮನೋವೈದ್ಯ ಡಾ. ಡೆವೀನ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದ ಡಾ. ಡೆವೀನ್ ಇದೊಂದು ಮಾನಸಿಕ ಸಮಸ್ಯೆಯಾಗಿದ್ದು, ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿ ಇತರೊಂದಿಗೆ ಬೆರೆಯಲು ಹಾಗೂ ಮಾತನಾಡಲು ಸಾಕಷ್ಟು ಹೆದರುತ್ತಾರೆ. ನಡವಳಿಕೆಯಲ್ಲಿ ಬಹಳ ಬದಲಾವಣೆ ಕಂಡುಬರುತ್ತದೆ.
ಈ ಮಾನಸಿಕ ಕಾಯಿಲೆಗೆ ಸ್ಪಷ್ಟವಾದ ಕಾರಣವಿಲ್ಲದಿದ್ದರೂ ಅತಿಯಾದ ಡ್ರಗ್ಸ್ ಹಾಗೂ ಮದ್ಯಪಾನ ಸೇವನೆ, ಹೆಚ್ಚಿನ ಒತ್ತಡ, ಜೆನೆಟಿಕ್ ಸಮಸ್ಯೆಗಳು, ಮೆದುಳು ಸಂಬAಧಿ ಕಾಯಿಲೆಗಳಿಂದ ಈ ಮಾನಸಿಕ ರೋಗ ಕಂಡುಬರುತ್ತದೆ.
ಈ ಕಾಯಿಲೆಗೆ ಒಳಗಾದ ಜನರು ಹೆಚ್ಚಾಗಿ ಒಂಟಿಯಾಗಿ ಬದುಕುವುದು, ಜನಸಂದಣಿಯ ಸ್ಥಳಕ್ಕೆ ಹೋಗಲು ಇಚ್ಚಿಸದಿರುವುದು, ಅತಿಯಾದ ಭಯ, ವಿಚಿತ್ರವಾದ ಭಾವನೆಗಳು, ತೂಕದಲ್ಲಿ ವ್ಯತ್ಯಾಸ ದಿನನಿತ್ಯದ ಕೆಲಸಗಳನ್ನು ಸರಿಯಾಗಿ ಮಾಡದಿರುವುದು, ಮಾಡಿದಂತಹ ಕೆಲಸಗಳನ್ನು ಪದೇಪದೇ ಮಾಡಲು ಇಚ್ಚಿಸುವಂಥದ್ದು ಈ ರೋಗದ ಪ್ರಮುಖ ಲಕ್ಷಣವಾಗಿದೆ. ಆರಂಭಿಕ ಹಂತದಲ್ಲಿ ಈ ರೋಗವನ್ನು ಗುರುತಿಸಿ ಅದಕ್ಕೆ ಸೂಕ್ತವಾದಂತಹ ಮಾನಸಿಕ ಆಪ್ತ ಸಮಾಲೋಚಕ ರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಔಷಧಿಗಳನ್ನು ತೆಗೆದುಕೊಂಡಲ್ಲಿ ಈ ಕಾಯಿಲೆಯನ್ನು ಕ್ರಮೇಣ ನಿಯಂತ್ರಣಕ್ಕೆ ತಂದು ಸಮಸ್ಯೆಯಿಂದ ಮುಕ್ತರಾಗಬಹುದು ಎಂದರು.
ಸಮಸ್ಯೆಯಿರುವ ರೋಗಿಗಳು ನಿಮ್ಮ ಸುತ್ತಮುತ್ತಲಿದ್ದಲ್ಲಿ ಟೋಲ್ ಫ್ರೀ ಸಂಖ್ಯೆ ೧೪೪೧೬ ಸಂಖ್ಯೆಗೆ ಕರೆ ಮಾಡಿ ಆಪ್ತ ಸಮಾಲೋಚಕರೊಂದಿಗೆ ನೇರವಾಗಿ ಮಾತನಾಡಬಹುದು ಎಂದು ಮಾಹಿತಿ ನೀಡಿದರು.
ಕಾಲೇಜಿನ ಉಪಪ್ರಾಂಶುಪಾಲ ಬೆನಡಿಕ್ಟ್ ಆರ್ ಸಾಲ್ಡಾನ ಮಾತನಾಡಿ, ಈ ರೀತಿಯ ಸಮಸ್ಯೆಯಿಂದ ಬಳಲುತ್ತಿರುವಂತಹ ವ್ಯಕ್ತಿಗಳು ನಿಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಇದ್ದರೆ ಅವರಿಗೆ ಸೂಕ್ತ ಮಾಹಿತಿಯನ್ನು ನೀಡಿ ಚಿಕಿತ್ಸೆ ಪಡೆಯುವಂತೆ ನೋಡಿಕೊಳ್ಳಬೇಕು.
ಆದಷ್ಟು ಹೆಚ್ಚು ಜನರಿಗೆ ಈ ಮಾನಸಿಕ ಕಾಯಿಲೆ ಬಗ್ಗೆ ತಿಳಿಸುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.