ಊಟದ ಅನಂತರ ಆರಾಮ ಕುರ್ಚಿಯಲ್ಲಿ ಕುಳಿತುಕೊಂಡು ರಂಗಣ್ಣನು ಸಿಗರೇಟನ್ನು ಆಳವಾಗಿ ಸೇದಿ, ಅದರಿಂದ ಹೊಗೆಯ ಸುರುಳಿಗಳನ್ನು ಬಾಯಿಯಿಂದ ಹೊರಗೆ ಉರುಳಿಸುತ್ತ ಆನಂದಿಸುತ್ತಿರುವ ದೃಶ್ಯವನ್ನು ಪಕ್ಕದ ಕೋಣೆಯಲ್ಲಿದ್ದ ರಂಗಣ್ಣನ ಮಗ ಸೋಮಣ್ಣನಿಗೆ ನೋಡಿ ಆಶ್ಚರ್ಯವೂ, ಕುತೂಹಲವೂ ಉಂಟಾಯಿತು. ಬಹುಶ ಹೀಗೆ ಸಿಗರೇಟನ್ನು ಸೇದಿ ಹೊಗೆಯನ್ನು ಹೊರಗೆ ಬಿಟ್ಟರೆ ಬಹಳ ಆನಂದಿಸಬಹುದು ಎನ್ನುವ ಸಂಶಯವನ್ನು ಅವನಿಗೆ ಖಾತ್ರಿಗೊಳಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಸೋಮಣ್ಣನು ಅಪ್ಪನ ಜೇಬಿನಲ್ಲಿದ್ದ ಸಿಗರೇಟೊಂದನ್ನು ಕದ್ದು, ಮನೆಯ ಹಿಂಬದಿಯ ಮರದ ಮೇಲೆ ಹತ್ತಿಕುಳಿತು ಗುಟ್ಟಾಗಿ ಅದನ್ನು ಸೇದಿ ಹೊಗೆ ಬಿಟ್ಟಾಗ ಅವನಿಗೆ ಖಷಿಯಾಗುವ ಬದಲು ಖೊಕ್-ಖೊಕ್ ಎಂದು ಕೆಮ್ಮು ಬರತೊಡಗಿತಲ್ಲದೆ ಕಣ್ಣುಗಳಿಂದ ಕಣ್ಣೀರೂ ಒಸರತೊಡಗಿತು. ಅಪ್ಪನಿಗೆ ಕೆಮ್ಮು ಬರುವುದಿಲ್ಲವಾದರೂ ತನಗೇಕೆ ಬಂತು ಎಂದು ಪುನಃ ಮರು ದಿವಸವೂ ಅವನು ಹೀಗೆ ಸಿಗರೇಟನ್ನು ಕದ್ದು ಸೇದಿ ಸುರುಳಿ ಹೊಗೆಯನ್ನು ಬಿಡತೊಡಗಿದಾಗ ಕೆಮ್ಮು ಬರದಿದ್ದರೂ ಅವನಿಗೆ ಸಿಗರೇಟಿನ ಹೊಗೆಯ ಒಗರು ರುಚಿಯು ತುಸು ಉನ್ಮಾದವನ್ನು ಕೊಟ್ಟಿತಲ್ಲದೆ ಸಿಗರೇಟನ್ನು ಸೇದುವ ಅಭ್ಯಾಸವನ್ನೂ ಅಂಟಿಸಿಬಿಟ್ಟಿತು. ಅಂದು ಕುತೂಹಲಕ್ಕೆಂದು ಸೇದಿದ ಆ ಒಂದು ಸಿಗರೇಟು ಕೆಲವೇ ತಿಂಗಳುಗಳಲ್ಲಿ ಅವನನ್ನು ಸರಣಿಸೇದುಗನನ್ನಾಗಿಯೂ ಮಾಡಿಬಿಟ್ಟಿತು. ಈಗ ಅವನಿಗೆ ಒಂದೆರಡು ಗಂಟೆ ಸಿಗರೇಟು ಸೇದದಿದ್ದರೂ ಏನೋ ಕಳೆದುಕೊಂಡAತಹ ತಳಮಳ, ನಿರುತ್ಸಾಹವು ಉಂಟಾಗತೊಡಗಿತು.

ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲಿಯೂ ಧೂಮಪಾನವು ಒಂದು ದುಶ್ಚಟವಾಗಿ ಬೆಳೆಯತೊಡಗಿದ್ದು, ಇದರ ಹಿಡಿತಕ್ಕೆ ಸಿಲುಕಿದ ಎಲ್ಲರೂ ಈ ಧೂಮಪಾನಕ್ಕಾಗಿ ಹಣವನ್ನು ಕಳೆದುಕೊಳ್ಳುವುದರ ಜೊತೆಯಲ್ಲಿ ತಮ್ಮ ಆರೋಗ್ಯವನ್ನು ಸಹ ಕೆಡಿಸಿಕೊಳ್ಳುತ್ತಿದ್ದಾರೆ. ಸಿಗರೇಟಿನಲ್ಲಿರುವ ತಂಬಾಕು ಎನ್ನುವ ಸಂಸ್ಕರಿಸಿದ ಹೊಗೆಸೊಪ್ಪಿನ ಎಲೆಯನ್ನು ಕೇವಲ ಬೀಡಿ ಸಿಗರೇಟುಗಳಲ್ಲಿ ಮಾತ್ರವಲ್ಲ, ಮೂಗಿಗೆ ತುರುಕಿಕೊಳ್ಳುವ ನಶ್ಯ ಎನ್ನುವ ಪುಡಿಗಳಲ್ಲಿ, ವೀಳ್ಯದ ಎಲೆಯೊಂದಿಗೆ ನೇರವಾಗಿ ತಿನ್ನುವ ತುಣುಕುಗಳಲ್ಲಿ, ಬಾಯಿಯ ತುಟಿಗಳ ನಡುವೆ ಇರಿಸಿಕೊಳ್ಳುವ ಖೈನಿ ಎನ್ನುವ ಮಸಾಲೆಯಲ್ಲಿ ಬಳಸಲಾಗುತ್ತಿದ್ದು ಅವು ಅಂತಿಮವಾಗಿ ಹಲವು ರೋಗಗಳ ಆಹ್ವಾನಕ್ಕೆ ಕಾರಣವಾಗುತ್ತಿವೆ. ಒಂದು ಅಧ್ಯಯನದ ಪ್ರಕಾರ ಸಿಗರೇಟು ಸೇದುವವರಲ್ಲಿ ಶೇಕಡಾ ತೊಂಬತ್ತರಷ್ಟು ಜನರು ಶ್ವಾಸಕೋಶದ ಕ್ಯಾನ್ಸರ್ ರೋಗಕ್ಕೆ ಸಿಲುಕುತ್ತಾರೆ. ಖೈನಿಯನ್ನು ಬಳಸುವವರು ಬಾಯಿಯ ಕ್ಯಾನ್ಸರ್‌ನಿಂದ ತೊಂದರೆಗೊಳಗಾಗುವರು. ಈ ಹೊಗೆಸೊಪ್ಪಿನ ಬಳಕೆಯಿಂದ ಸಾಯುವವರು ಕೇವಲ ವೃದ್ಧರಲ್ಲ, ಮಧ್ಯವಯಸ್ಸಿನವರು, ಜೊತೆಯಲ್ಲಿ ಮೂವತ್ತನ್ನೂ ಮೀರದವರೂ ಇದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ದೃಢಪಡಿಸುತ್ತಿರುವುದು ಆರೋಗ್ಯಕರ ಸಮಾಜವನ್ನು ನಿರೀಕ್ಷಿಸುವವರಿಗೆ ಗಾಬರಿಯನ್ನು ಹುಟ್ಟಿಸುತ್ತದೆ.

ಹೊಗೆಸೊಪ್ಪಿನಲ್ಲಿ ನಿಕೋಟಿನ್ ಎನ್ನುವ ವಿಷಕಾರಿ ರಾಸಾಯನಿಕ ವಸ್ತುವಿದ್ದು ಇದರ ಜೊತೆಯಲ್ಲಿ ಇನ್ನೂ ಸುಮಾರು ಇನ್ನೂರಕ್ಕೂ ಹೆಚ್ಚು ಅಲ್ಪ ಪ್ರಮಾಣದ ಆದರೆ ತೀವ್ರ ಆಘಾತವನ್ನು ನೀಡುವ ವಿಷಕಾರೀ ರಾಸಾಯನಿಕ ಪದಾರ್ಥಗಳಿವೆ. ನಿಕೋಟಿನಾ ಟುಬೇಕಮಾ ಎಂಬ ಹೆಸರನ್ನು ಹೊಂದಿದ ನಿಕೋಟಿನ್ ವಿಷದ ಒಂದು ತೊಟ್ಟನ್ನು ಚರ್ಮಕ್ಕೆ ಒಂದು ಬಾರಿ ಸೋಕಿಸಿದರೆ ಕೆಲವೇ ಗಂಟೆಗಳಲ್ಲಿ ಆ ಚರ್ಮವು ಅರ್ಬುದ ರೋಗಕ್ಕೆ ತುತ್ತಾಗುತ್ತದೆಯೆಂತೆ. ಅಂತಿರುವಾಗ ನಿತ್ಯವೂ ಸಿಗರೇಟನ್ನು ಸೇದುವವರಿಗೆ ಕೇವಲ ಶ್ವಾಸಕೋಶವು ಮಾತ್ರವಲ್ಲ, ತುಟಿ, ಬಾಯಿ, ಗಂಟಲು ಎಲ್ಲವೂ ಈ ಅರ್ಬುದ ರೋಗಕ್ಕೆ ಆಹ್ವಾನವನ್ನು ಈಯಬಹುದು. ಅದರ ಜೊತೆಯಲ್ಲಿ ಸಿಗರೇಟು, ಬೀಡಿಯನ್ನು ಸೇದುವವರ ಬಾಯಿಯು ಯಾವಾಗಲೂ ದುರ್ಗಂಧವನ್ನು ಬೀರುತ್ತಿರುತ್ತದೆ.

ಸಾಮಾಜಿಕವಾಗಿಯೂ ಹೊಗೆಸೊಪ್ಪಿನ ಬಳಕೆಯು ಹಲವು ಇರಿಸುಮುರಿಸುಗಳಿಗೆ ಕಾರಣವಾಗಬಹುದು. ಮದುವೆ ಮುಂಜಿಗಳಲ್ಲಿ ಆಹ್ವಾನಿತರು ಸೇರಿದಾಗ ಅವರೆದುರು ಮುಖಕೊಟ್ಟು ಮಾತನಾಡಲಾಗದ ಸ್ಥಿತಿಯು ಬರಬಹುದು. ಬಾಯಿಯಿಂದ ಹೊರಡುವ ದುರ್ವಾಸನೆಯು ಗೌರವಾನ್ವಿತರ ಸಂಪರ್ಕವನ್ನು ಕಡಿತಗೊಳಿಸಬಹುದು. ನಶ್ಯವನ್ನು ಮೂಗಿನ ಹೊಳ್ಳೆಗಳಲ್ಲಿ ತುಂಬಿಸಿ ಆನಂದಿಸಿ, ಅನಂತರ ದೀರ್ಘದೂರದವರೆಗೂ ಎಂಜಲು ಚಿಮ್ಮುವಂತೆ ಸೀನುವವರನ್ನು ಜನರು ದೂರವಿರಿಸಬಹುದು. ಕೆಲವು ಸಮಾರಂಭಗಳಲ್ಲಿ, ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ “ದಯವಿಟ್ಟು ಇಲ್ಲಿ ಬೀಡಿ ಸಿಗರೇಟುಗಳನ್ನು ಸೇದಬಾರದು” ಎನ್ನುವ ಫಲಕಗಳನ್ನು ಹಾಕಿರುವಾಗ ಸಿಗರೇಟು ಸೇದುವ ತೆವಲಿರುವವರು ಅಲ್ಲಿಂದ ಕೆಲವು ನಿಮಿಷ ಹೊರಗೆಹೋಗಿ ತೆವಲು ತೀರಿಸಿಕೊಂಡು ಮತ್ತೆ ಒಳಗೆ ಬರಬೇಕಾದಂತಹ ಇರಿಸುಮುರಿಸಿನ ಪ್ರಸಂಗಗಳಿಗೂ ಈ ಹೊಗೆಸೊಪ್ಪಿನ ಬಳಕೆಯು ಕಾರಣವಾಬಹುದು. ಹೊಗೆಸೊಪ್ಪಿನ ಬಳಕೆಯಿಂದ ಕಾಲಿನ ಹಿಂಬಾಗಗಳಲ್ಲಿ ಸದಾ ನೋವು ನೀಡುವ ಬಗರ‍್ಸ್ ಡಿಸೀಸ್ ಎಂಬ ವ್ಯಾಧಿಯು ಸೇದುವವರನ್ನು ಬಳಲಿಸಬಹುದು.

ಕೇವಲ ಕುತೂಹಲಕ್ಕೆ ಒಂದು ಸಿಗರೇಟಿನ ಸೇವನೆಯಿಂದ ಆರಂಭವಾಗುವ ಈ ಅಭ್ಯಾಸವು ಬದುಕನ್ನು ಬರ್ಬರಗೊಳಿಸುವುದಲ್ಲದೆ ಮನೆಯವರ ಮನಶಾಂತಿ ಯನ್ನೂ ಕೆಡಿಸಬಹುದು. ರಾತ್ರಿಯಿಡೀ ಎದ್ದು ಕೆಮ್ಮುತ್ತಿರುವ ಗಂಡನಿAದ ಮಡಿದಿಗೆ ನೆಮ್ಮದಿಯಾದರೂ ಸಿಗುವುದು ಹೇಗೆ? ಸಿಗರೇಟಿಗಾಗಿ ಆಗುವ ಖರ್ಚನ್ನು ಬರೆದು ಪಟ್ಟಿಮಾಡಿ ನೋಡಿದರೆ ಎಂತಹ ಮಧ್ಯಮವರ್ಗದವರೂ ಬೆಚ್ಚಿ ಬೀಳಬಹುದಲ್ಲದೆ ಆಸ್ಪತ್ರೆಯ ಖರ್ಚೂ ಸೇದುವವರ, ಮನೆಯವರ ಮನಸ್ಸನ್ನು ಹಿಂಡಿ ಹಿಪ್ಪೆಗೊಳಿಸಬಹುದು.

ಸರಕಾರವು ಸಿಗರೇಟು ಸೇದುವುದು ಹಾನಿಕರ ಎಂದು ಸಣ್ಣ ಅಕ್ಷರದಲ್ಲಿ ಕೇವಲ ಮುದ್ರಿಸಿ ತನ್ನ ಕರ್ತವ್ಯದಿಂದ ನುಣುಚಿಕೊಂಡರೆ ಹೊಗೆಸೊಪ್ಪಿನ ಬಳಕೆಯನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಹೊಗೆಸೊಪ್ಪನ್ನು ಬೆಳೆಸುವುದನ್ನೂ ನಿರ್ಬಂಧಿಸಬೇಕಲ್ಲದೆ ಇದನ್ನು ಸಂಗ್ರಹಿಸುವವರು, ಸಾಗಣೆ ಮಾಡುವವರು, ಮಾರಾಟ ಮಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಬೇಕು. ಆದರೆ, ತೆರಿಗೆಯ ರೂಪದಲ್ಲಿ ಚಿನ್ನದ ಮೊಟ್ಟೆಯನ್ನು ಇಡುವ ಈ ಹೊಗೆಸೊಪ್ಪೆಂಬ ಕೋಳಿಯನ್ನು ಹುಟ್ಟುವುದಕ್ಕೆ ಬಿಡದಂತೆ ಮಾಡಲು ಯಾವ ಸರ್ಕಾರವೂ ಸಿದ್ಧವಿರುವುದಿಲ್ಲ.

ಖಜಾನೆಗೆ ಬಂದು ಸೇರುವ ಹಣಕ್ಕಿಂತಲೂ ಜನರ ಆರೋಗ್ಯವೇ ಮುಖ್ಯ ಎಂದು ಸರಕಾರವು ಭಾವಿಸಿ ಹೊಗೆಸೊಪ್ಪಿನ ಉತ್ಪನ್ನವನ್ನೇ ನಿಷೇಧಿಸಿದಾಗ ಮಾತ್ರ ಹೊಗೆಸೊಪ್ಪಿನ ಸೇವನೆಗೆ ಇತಿಶ್ರೀಯನ್ನು ಹಾಕಬಹುದು. ರಾಷ್ಟçದ ಭವಿಷ್ಯವನ್ನೂ ಬಲಗೊಳಿಸ ಬಹುದು.

- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು ೯೧೪೧೩ ೯೫೪೨೬