ಸುಂಟಿಕೊಪ್ಪ, ಮೇ ೩೧: ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ, ಕಂಬಿಬಾಣೆ, ೭ನೇ ಹೊಸಕೋಟೆ, ಮತ್ತಿಕಾಡು, ಭೂತನಕಾಡು ಹಾಗೂ ಮೀನುಕೊಲ್ಲಿ ವ್ಯಾಪ್ತಿಯಲ್ಲಿ ಕಾಡಾನೆಗಳು ಹಗಲು-ರಾತ್ರಿಯ ಪರಿವೇ ಇಲ್ಲದೆ ಕಾಫಿ ತೋಟಗಳಲ್ಲಿ ಸಂಚಾರ ಉಪಟಳ ಮುಂದುವರೆಸಿದ್ದು, ಅನೇಕ ನಿವಾಸಿಗಳ ಮನೆಯಂಗಳಕ್ಕೆ ಬಂದು ಹೋಗುತ್ತಿರುವುದಲ್ಲದೆ ಮನೆಯ ಬಾಗಿಲಿಗೆ ಬಂದು ನಿಲ್ಲುತ್ತಿರುವುದು ಜನವಸತಿ ಪ್ರದೇಶದಲ್ಲಿ ಎಗ್ಗಿಲ್ಲದೆ ನಡೆದಾಡುತ್ತಿರುವುದು ಆತಂಕ ಉಂಟುಮಾಡಿದೆ.
ಕಳೆದ ೧೫ ದಿನಗಳಿಂದ ಕೊಡಗರಹಳ್ಳಿ ಉಪ್ಪುತೋಡು, ೭ನೇ ಹೊಸಕೋಟೆ, ಕಂಬಿಬಾಣೆ, ಅತ್ತೂರು-ನಲ್ಲೂರು, ತೊಂಡೂರು ವ್ಯಾಪ್ತಿಯಲ್ಲಿ ಒಂದು ದೈತ್ಯ ಸಲಗ, ಒಂದು ಮರಿ, ತಾಯಿಯಾನೆ ಹಾಗೂ ಕುಳ್ಳಗಿನ ಆನೆಯೊಂದು ದಿನನಿತ್ಯ ಈ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು, ಸಾಮಾನ್ಯವಾಗಿ ತಡರಾತ್ರಿ ಆನೆಕಾಡಿಗೆ ತೆರಳುತ್ತಿದ್ದ ಈ ಆನೆಗಳು ಇತ್ತೀಚೆಗೆ ಕೊಡಗರಹಳ್ಳಿ, ಉಪ್ಪುತೊಡು, ಕಂಬಿಬಾಣೆ ವ್ಯಾಪ್ತಿಯಲ್ಲಿ ಕಾಫಿ ತೋಟಗಳಲ್ಲೇ ವಾಸ್ತವ್ಯ ಹೂಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇದೇ ರೀತಿ ಹೊರೂರು, ಕೆದಕಲ್, ಕಾರೆಕೊಲ್ಲಿ, ಮತ್ತಿಕಾಡು, ಭೂತನಕಾಡು, ಮಹಾಲಕ್ಷಿö್ಮ, ಉಲುಗುಲಿ, ಶಾಂಗೀರಿ, ಅಂದಗೋವೆ, ಕಲ್ಲೂರು, ಹೇರೂರು, ೭ನೇ ಹೊಸಕೋಟೆ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ತೀವ್ರವಾಗಿದ್ದು, ಜನರು ಬೇಸತ್ತು ಹೋಗಿರುವುದಲ್ಲದೆ, ಮುಂದೇನು ಎಂಬ ಯಕ್ಷ ಪ್ರಶ್ನೆ ಅವರನ್ನು ಕಾಡಲಾರಂಭಿಸಿದೆ.
ಈಗಾಗಲೇ ವರದಿಯಾಗಿರುವಂತೆ ಆನೆಗಳು ವಾಹನಗಳನ್ನು ಪುಡಿಗಟ್ಟುತ್ತಿರುವುದು ಹೊಸ ವಿದ್ಯಮಾನವಾಗಿದ್ದು, ಆನೆ ದಾಳಿಗೆ ಸಿಲುಕಿದ ಕಾರನ್ನು ರಿಪೇರಿಗೊಳಿಸಿ ತಂದು ಇಟ್ಟ ದಿನವೇ ಮತ್ತೆ ಕಾಡಾನೆ ದಾಳಿ ನಡೆಸಿ ಕಾರನ್ನು ಪುಡಿಗಟ್ಟಿದೆ. ಇದರೊಂದಿಗೆ ಕಾಫಿ ತೋಟಗಳಲ್ಲಿ ನೆಟ್ಟಿರುವ ಹಣ್ಣಿನ ಗಿಡಗಳನ್ನು ಕಿತ್ತು ಬಿಸಾಡುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಕಾರು ಮಾಲೀಕ ಹರಿನಾಥ ರೈ ನೋವನ್ನು ತೋಡಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು ರೈತರು ಗದ್ದೆಯತ್ತ ಮುಖ ಮಾಡಿದ್ದಾರೆ. ಕಾಫಿ ಬೆಳೆಗಾರರು ತೋಟದಲ್ಲಿ ಗೊಬ್ಬರ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ ಕಾಡಾನೆಗಳು ತೋಟದಿಂದ ತೋಟಕ್ಕೆ ಸಂಚರಿಸುತ್ತಿದ್ದು, ಕೆಲಸದ ಹೊತ್ತಿನಲ್ಲಿ ದಾಳಿ ನಡೆಸುವ ಪ್ರಕರಣಗಳು ಆಗಿಂದಾಗೆ ಮರುಕಳಿಸುತ್ತಿವೆ.
ಕೆಲವು ದಿನಗಳ ಹಿಂದೆ ಕಂಬಿಬಾಣೆ-ಮತ್ತಿಕಾಡು ಮುಖ್ಯ ರಸ್ತೆಯಲ್ಲಿ ಭಾರೀ ಗಾತ್ರದ ಒಂಟಿ ಸಲಗವೊಂದು ಜನವಸತಿ ದಟ್ಟಣೆ ಇರುವ ಪ್ರದೇಶದಲ್ಲೇ ಓಡಾಡಿ ಭೀತಿಯನ್ನು ಹುಟ್ಟಿಸಿತ್ತು. ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಇದ್ದ ಹಿನ್ನಲೆಯಲ್ಲಿ ಮಕ್ಕಳು ಮಹಿಳೆಯರು ಬಚಾವಾಗಿದ್ದು, ಶಾಲಾ ದಿನಗಳ ಆರಂಭದ ಬಳಿಕ ಪರಿಸ್ಥಿತಿ ಏನು ಎಂಬ ಚಿಂತೆ ಕಾಡಲಾರಂಭಿಸಿದೆ.
ಜಿಲ್ಲಾದ್ಯಂತ ಕಾಡಾನೆಗಳ ಹಾವಳಿ, ಮೇವು ಮತ್ತು ನೀರಿನ ಕೊರತೆಯಿಂದ ಹೆಚ್ಚಾಗುತ್ತಿದ್ದು, ಉಪಶಮನ ಮತ್ತು ಪರಿಹಾರ ನೀಡುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಮಾನವ ಜೀವ ಹಾನಿಗೆ ರೂ. ೧೫ ಲಕ್ಷ ಪರಿಹಾರ, ಆಸ್ತಿ ಫಸಲು ನಷ್ಟಕ್ಕೆ ಪರಿಹಾರ ನೀಡುತ್ತಿದ್ದು, ಇದರ ಬಗ್ಗೆ ಜನತೆಯಲ್ಲಿ ಅಸಮಾಧಾನವಿದೆ. ಆನೆಗಳನ್ನು ಕಾಲ ಕಾಲಕ್ಕೆ ಹಿಡಿಯುವುದು, ಸ್ಥಳಾಂತರಿಸಿ ಕಾಡಿನಿಂದ ನಾಡಿನತ್ತ ಬಾರದಂತೆ ನೋಡಿಕೊಳ್ಳುವುದು ಅರಣ್ಯ ಇಲಾಖೆಯ ಆದ್ಯತೆಯಾಗಬೇಕೆಂದು ಜನರು ಆಗ್ರಹಿಸಿದ್ದಾರೆ.
ಕಳೆದ ಕೆಲವು ಸಮಯದಿಂದ ಇಲ್ಲವಾಗಿದ್ದ ಕಾಡಾನೆಗಳ ಸಂಚಾರ ಈ ವ್ಯಾಪ್ತಿಯಲ್ಲಿ ಹಠಾತ್ತಾಗಿ ಕಾಣಿಸಿಕೊಂಡಿದ್ದು, ಕಳೆದ ಹಲವು ದಿನಗಳಿಂದ ೨ ರಿಂದ ೪ ಆನೆಗಳ ಗುಂಪು ಸಂಚಾರ ಮಾಡುತ್ತಿವೆ. ಇದರಿಂದಾಗಿ ಬೆಳ್ಳಂಬೆಳಿಗ್ಗೆ ವಾಯು ವಿಹಾರ, ದೂರದ ಊರುಗಳಿಗೆ ಸ್ವಂತ ವಾಹನ ಅಥವಾ ಬಾಡಿಗೆ ವಾಹನಗಳಲ್ಲಿ ತೆರಳುವವರಿಗೆ ಬ್ರೇಕ್ ಬಿದ್ದಿದೆ.
ಅನಿವಾರ್ಯ ಸಂದರ್ಭಗಳಲ್ಲಿ ಕಾಡಾನೆಗಳು ದಾರಿಯಲ್ಲೇ ಮುಖಾಮುಖಿ ಎದುರಾಗಿ ಕೆಲವು ಕಾರ್ಮಿಕರು ಹಾಗೂ ದ್ವಿಚಕ್ರ ವಾಹನ ಸವಾರರ ಮೇಲೆ ದಾಳಿ ನಡೆಸಿದ ಪ್ರಕರಣಗಳು ಜನಮಾನಸದಲ್ಲಿ ಇನ್ನು ಹಸಿಯಾಗಿರುವಾಗಲೇ ಕಾಡಾನೆಗಳ ಉಪಟಳದಿಂದಾಗಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ ಘಟನೆಗಳು ಸಂಭವಿಸಿವೆೆ.
ಕಾಫಿ ಜೊತೆಗೆ ಅಡಿಕೆ, ಬಾಳೆ ಕೃಷಿ, ಕಿತ್ತಳೆ, ಬೆಣ್ಣೆ ಹಣ್ಣಿನ ಗಿಡಗಳನ್ನು ನೆಟ್ಟವರಿಗೆ ಇದೀಗ ಏಕಾಏಕಿ ರಕ್ತದೊತ್ತಡ ಏರಲು ಕಾರಣವಾಗಿದ್ದು “ಕುಂಬಾರನಿಗೆ ವರುಷ-ದೊಣ್ಣೆಗೆ ನಿಮಿಷ” ಎಂಬAತಾಗಿದೆ. ಈ ಸಂದರ್ಭದಲ್ಲಿ ಹೆಚ್ಚು ವನ್ಯಜೀವಿ-ಮಾನವ ಸಂಘರ್ಷ ಜೊತೆಗೆ ಕೃಷಿಕರ ಆಸ್ತಿಪಾಸ್ತಿ ಫಸಲು ನಷ್ಟಗೊಳ್ಳುವುದರೊಂದಿಗೆ ಮಾನವ ಪ್ರಾಣ ಹಾನಿ ಸಂಭವಿಸುವುದಕ್ಕೆ ಮುನ್ನುಡಿ ಬರೆದಂತಾಗಿದೆ.
ಈಗಾಗಲೇ ರಾಜ್ಯ ಸರಕಾರ ಆನೆ ಹಾವಳಿ ತಡೆ ಕ್ಷಿಪ್ರಪಡೆಯನ್ನು ರಚಿಸಿದ್ದು, ಜೊತೆಗೆ ಮಾನವ ಪ್ರಾಣಹಾನಿ ಬೆಳೆ ಮತ್ತು ಕೃಷಿ ಹಾನಿಗೆ ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸಿದರೂ ಕೂಡ ಇದು ಕೃಷಿಕನ ಖರ್ಚು ವೆಚ್ಚಗಳಿಗೆ ಸರಿಸಾಟಿಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಆನೆ ಹಾವಳಿ ತಡೆಯಲು ಆನೆ ಹಿಡಿದು ಸ್ಥಳಾಂತರ ಮಾಡುವುದು ಏಕೈಕ ಪರಿಹಾರ ಎಂದು ಬೆಳೆಗಾರರು ಅಭಿಪ್ರಾಯಿಸಿದ್ದಾರೆ.
ದುರಾದೃಷ್ಟವಶಾತ್ ಈ ರೀತಿಯ ಪರಿಹಾರ ಕಾರ್ಯಕ್ರಮಗಳಿಗೆ ಸರಕಾರ ಮುಂದಾಗದಿರುವುದು ಅಥವಾ ಸಂಬAಧಿತ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ಹೊತ್ತವರಿಗೆ ಮಾರ್ಗದರ್ಶನ ಮಾಡದಿರುವುದು ಕಾರಣ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಾದ್ಯಂತ ಆನೆಯೊಂದಿಗೆ ಹುಲಿಗಳು, ಕಾಡೆಮ್ಮೆ ಹಾಗೂ ಮಂಗಗಳ ಹಾವಳಿಯಿಂದ ಒಂದಲ್ಲ ಒಂದು ರೀತಿಯಲ್ಲಿ ಕೃಷಿಕರು ಆತಂಕಕ್ಕೆ ಒಳಗಾಗಿರುವುದು ವಿಷಾದದ ಸಂಗತಿ.
- ರಾಜು ರೈ, ಸುಂಟಿಕೊಪ್ಪ