ವೀರಾಜಪೇಟೆ, ಮೇ ೩೦: ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸುವುದರೊಂದಿಗೆ ವೃತ್ತಿ ಬಗ್ಗೆ ಹೆಮ್ಮೆ ಹಾಗೂ ದೃಢವಾದ ಆತ್ಮ ವಿಶ್ವಾಸವನ್ನು ಹೊಂದಿರಬೇಕು ಎಂದು ಬೆಂಗಳೂರಿನ ಆರ್.ವಿ. ಶಿಕ್ಷಕರ ತರಬೇತಿ ಕಾಲೇಜಿನ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಪಿ.ಬಿ.ಕೆ. ಕಿಶೋರ್ ಅಭಿಪ್ರಾಯಪಟ್ಟರು.
ವೀರಾಜಪೇಟೆಯ ಸರ್ವೋದಯ ಶಿಕ್ಷಕರ ತರಬೇತಿ ಸಂಸ್ಥೆಯ ಪೂರ್ವ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರಿಗೆ ವೃತ್ತಿಯ ಮೇಲೆ ಬದ್ಧತೆ ಅತಿ ಅಗತ್ಯ. ಶಿಕ್ಷಕರು ಜ್ಞಾನವನ್ನು ಕ್ರಿಯಾತ್ಮಕವಾಗಿ ಹಂಚುವವರಾಗಬೇಕು. ಶಿಕ್ಷಕರ ವೃತ್ತಿ ಜೀವನ ನಿವೃತ್ತಿಯೊಂದಿಗೆ ಕೊನೆಗೊಳ್ಳುವುದಿಲ್ಲ. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಸದಾ ಆಶಾವಾದ ಇಟ್ಟುಕೊಳ್ಳಬೇಕು ಎಂದರು.
ವಿಶೇಷ ಅತಿಥಿಯಾಗಿ ಮೈಸೂರಿನ ಆರ್.ಐ.ಇ. ಕಾಲೇಜಿನ ಪ್ರಾಧ್ಯಾಪಕÀ ಡಾ. ಸೋಮಶೇಖರ್ ಮಾತನಾಡಿ, ಶಿಕ್ಷಕ ವೃತ್ತಿಯಲ್ಲಿ ಹೊಸ ಆವಿಷ್ಕಾರಗಳು ತುಂಬಿರಬೇಕು. ನೂತನ ವಿನ್ಯಾಸಗಳೊಂದಿಗೆ ವೃತ್ತಿಯನ್ನು ವಿನೂತನಗೊಳಿಸಲು ಶಿಕ್ಷಕರುಗಳು ಪ್ರಯತ್ನಿಸಬೇಕು. ಶಿಕ್ಷಕನು ತಾನೊಬ್ಬ ಸಂಘಟನಾ ಚಾತುರ್ಯವಿರುವ ನಾಯಕ ಎಂಬ ಪ್ರಜ್ಞೆ ಇಟ್ಟುಕೊಳ್ಳಬೇಕು ಎಂದರು.
ಸರ್ವೋದಯ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ವಾಸಂತಿ ಶರತ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷೆ ಸಿ.ಜಿ. ಸೂರ್ಯಕುಮಾರಿ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಡಾ. ಎಂ. ವಾಣಿ ಸ್ವಾಗತಿಸಿದರು. ವಿಮಲ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಸುಜಾತ ನಿರೂಪಿಸಿ, ನಾಝಿಯಾ ವಂದಿಸಿದರು.