ಮಡಿಕೇರಿ, ಜೂ. ೧: ಕೊಡಗು ಜಿಲ್ಲೆಯ ಏಕೈಕ ನಗರಸಭೆ ಆಗಿರುವ ಮಡಿಕೇರಿ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರಾವಧಿ ಏಪ್ರಿಲ್ ೨೯ಕ್ಕೆ ಪೂರ್ಣಗೊಂಡಿದ್ದು, ಎರಡನೇ ಅವಧಿಗೆ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆಗೆ ಇನ್ನೂ ಮೀಸಲಾತಿ ಪ್ರಕಟಗೊಂಡಿಲ್ಲ. ಕಳೆದ ನಗರಸಭಾ ಸದಸ್ಯರ ಚುನಾವಣೆಯಲ್ಲಿ ಬಿಜೆಪಿಗೆ ೧೬, ಎಸ್.ಡಿ.ಪಿ.ಐ.ಗೆ ೫, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ತಲಾ ಒಂದೊAದು ಸ್ಥಾನಗಳು ಲಭಿಸಿದ್ದವು.

ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂಎ ಮಹಿಳೆಗೆ ಮೀಸಲಾಗಿತ್ತು. ಆ ಸಂದರ್ಭ ಬಹುಮತ ಹೊಂದಿದ್ದ ಬಿಜೆಪಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಲವು ಮಂದಿ ಆಕಾಂಕ್ಷಿಗಳಾಗಿದ್ದರೂ ಅಂತಿಮವಾಗಿ ಪಕ್ಷ ಅಧ್ಯಕ್ಷ ಸ್ಥಾನಕ್ಕೆ ಅನಿತಾ ಪೂವಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸವಿತಾ ರಾಕೇಶ್ ಅವರುಗಳನ್ನು ಆಯ್ಕೆ ಮಾಡಿತ್ತು. ಆದರೆ, ವಿಪಕ್ಷ ಸ್ಥಾನದಲ್ಲಿದ್ದ ಎಸ್‌ಡಿಪಿಐ ಅಧ್ಯಕ್ಷ ಸ್ಥಾನಕ್ಕೆ ಮೇರಿ ವೇಗಸ್, ಉಪಾಧ್ಯಕ್ಷ ಸ್ಥಾನಕ್ಕೆ ನೀಮಾ ಅರ್ಷದ್ ಇವರುಗಳನ್ನು ಕಣಕ್ಕಿಳಿಸಿತ್ತು. ಈ ಹಿನ್ನೆಲೆಯಲ್ಲಿ ೨೦೨೧ರ ಅ. ೨೯ರಂದು ಚುನಾವಣೆ

(ಮೊದಲ ಪುಟದಿಂದ) ನಡೆದಾಗ ಪ್ರಬಲ ಬಹುಮತ ಹೊಂದಿದ್ದ ಬಿಜೆಪಿ ಅಭ್ಯರ್ಥಿಗಳಾದ ಅನಿತಾ ಪೂವಯ್ಯ ಹಾಗೂ ಸವಿತಾ ರಾಕೇಶ್, ಬಿಜೆಪಿಯ ೧೬ ಸದಸ್ಯರು ಸೇರಿದಂತೆ ಸಂಸದ ಪ್ರತಾಪ್ ಸಿಂಹ, ಆಗಿನ ಶಾಸಕರುಗಳಾದ ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ ಇವರುಗಳ ಮತದೊಂದಿಗೆ ತಲಾ ೧೯ ಮತ ಪಡೆದು ಜಯಗಳಿಸಿದ್ದರು. ಐದು ಸದಸ್ಯರನ್ನು ಹೊಂದಿದ್ದ ಎಸ್‌ಡಿಪಿಐನ ಮೇರಿ ವೇಗಸ್ ಹಾಗೂ ನೀಮಾ ಅರ್ಷದ್ ಐದೈದು ಮತಗಳನ್ನು ಪಡೆದು ಸೋಲನುಭವಿಸಿದ್ದರು. ಕಾಂಗ್ರೆಸ್‌ನ ರಾಜೇಶ್ ಯಲ್ಲಪ್ಪ, ಜೆಡಿಎಸ್‌ನ ಮುಸ್ತಫ ಮತ ಚಲಾಯಿಸದೆ ತಟಸ್ಥರಾಗಿದ್ದರು. ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಚುನಾವಣೆಗೆ ಗೈರಾಗಿದ್ದರು. ಈ ಚುನಾವಣೆ ಅ.೧೧ಕ್ಕೆ ನಿಗದಿಯಾಗಿತ್ತಾದರೂ ವೀಣಾ ಅಚ್ಚಯ್ಯ ಅವರಿಗೆ ನೋಟೀಸ್ ನೀಡಿಲ್ಲ ಎಂಬ ಕಾರಣಕ್ಕಾಗಿ ಅ.೨೯ಕ್ಕೆ ಮುಂದೂಡಲ್ಪಟ್ಟಿತ್ತು. ಆದರೆ, ಅಂದಿನ ಚುನಾವಣೆಗೂ ವೀಣಾ ಅಚ್ಚಯ್ಯ ಹಾಜರಾಗಿರಲಿಲ್ಲ. ನಂತರ ೨೦೨೧ರ ಅಕ್ಟೋಬರ್ ೨೯ರಿಂದ ಎರಡೂವರೆ ವರ್ಷಗಳ ಕಾಲ ಮೊದಲ ಅವಧಿಯಲ್ಲಿ ಅಧಿಕಾರ ನಡೆಸಿದ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಉಪಾಧ್ಯಕ್ಷೆ ಸವಿತಾ ರಾಕೇಶ್ ಇವರುಗಳ ಅಧಿಕಾರಾವಧಿ ಏಪ್ರಿಲ್ ೨೯ಕ್ಕೆ ಮುಕ್ತಾಯಗೊಂಡಿದ್ದು, ೩೦ ತಿಂಗಳ ಆಡಳಿತಾವಧಿ ಮುಗಿದಿದೆ. ಅವಧಿ ಮುಗಿದು ಒಂದು ತಿಂಗಳು ಕಳೆದರೂ, ಎರಡನೇ ಅವಧಿಗೆ ಇನ್ನೂ ಕೂಡ ಮೀಸಲಾತಿ ಪ್ರಕಟಗೊಂಡಿಲ್ಲ. ಲೋಕಸಭಾ ಚುನಾವಣೆ, ವಿಧಾನಪರಿಷತ್ ಚುನಾವಣೆಗಳ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಕಟ ವಿಳಂಬವಾಗಿದೆ ಎನ್ನಲಾಗುತ್ತಿದ್ದು, ಚುನಾವಣೆ ಪ್ರಕ್ರಿಯೆಗಳ ಬಳಿಕ ಮೀಸಲಾತಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

ಅನಿತಾ - ಸವಿತಾ ಪ್ರತಿಕ್ರಿಯೆ

‘ಶಕ್ತಿ’ಯೊಂದಿಗೆ ಮಾತನಾಡಿದ ಅನಿತಾ ಪೂವಯ್ಯ, ಅಧಿಕಾರಿ - ಸಿಬ್ಬಂದಿಗಳ ಕೊರತೆಯ ನಡುವೆಯೂ ನಗರಸಭೆಯಲ್ಲಿ ಹಲವಾರು ಉತ್ತಮ ಕೆಲಸಗಳನ್ನು ಮಾಡಿದ ತೃಪ್ತಿಯಿದೆ ಎಂದು ನುಡಿದರು. ಸವಿತಾ ರಾಕೇಶ್ ಮಾತನಾಡಿ, ತನ್ನ ಅವಧಿಯಲ್ಲಿ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದೇನೆ. ತನ್ನಿಂದಾಗ ಬೇಕಾದ ಕೆಲಸಗಳನ್ನು ಉತ್ತಮವಾಗಿ ಮಾಡಿರುವ ಸಂತೃಪ್ತಿ ಇದೆ ಎಂದರು.

ಎರಡನೇ ಅವಧಿಗೆ ಮೀಸಲಾತಿ ಪ್ರಕಟಗೊಂಡು ಮತ್ತೊಮ್ಮೆ ಮೀಸಲಾತಿ ಆಧಾರದಲ್ಲಿ ಅಧ್ಯಕ್ಷ - ಉಪಾಧ್ಯಕ್ಷರ ಸ್ಥಾನಕ್ಕೇರಲು ಅವಕಾಶಗಳಿದ್ದಲ್ಲಿ ನಾವುಗಳೂ ಆಕಾಂಕ್ಷಿಗಳಾಗಿರುತ್ತೇವೆಯಾದರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ಅನಿತಾ ಹಾಗೂ ಸವಿತಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. - ಉಜ್ವಲ್