ಟಿ ಹೆಚ್.ಜೆ. ರಾಕೇಶ್

ಮಡಿಕೇರಿ, ಜೂ. ೧: ಹುಸಿ ಕರೆ ಮಾಡುವ ಮೂಲಕ ಕೊಡಗಿನ ಬೆಳೆಗಾರನಿಗೆ ಬೆದರಿಕೆಯೊಡ್ಡಿ ರೂ. ೨.೨೦ ಕೋಟಿ ಹಣ ವರ್ಗಾವಣೆಗೊಳಿಸಿಕೊಂಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ತನಿಖೆ ಚುರುಕುಗೊಂಡಿದೆ. ಆದರೆ, ನಕಲಿ ವಿಳಾಸ, ಯಾರದ್ದೊ ಮೊಬೈಲ್ ಸಂಖ್ಯೆ ಬಳಸಿಕೊಂಡು ಕೃತ್ಯವೆಸಗಿರುವುದರಿಂದ ವಂಚಕರ ಜಾಲ ಪತ್ತೆಗೆ ತೊಡಕು ಉಂಟಾಗಿದೆ.

ಕರಡಿಗೋಡು ಗ್ರಾಮದ ಬೆಳೆಗಾರ ದೇವಯ್ಯ (೭೦) ಎಂಬವರಿಗೆ ಮೇ ೧೧ ರಂದು ಫೆಡೆಕ್ಸ್ ಪಾರ್ಸೆಲ್ ಸರ್ವಿಸ್ ಸೆಂಟರ್ ಸಂಸ್ಥೆಯ ಹೆಸರು ಹೇಳಿಕೊಂಡು ವ್ಯಕ್ತಿಯೋರ್ವ ಕರೆ ಮಾಡಿ ‘ನಿಮ್ಮ ವಿಳಾಸಕ್ಕೆ ಮಾದಕ ವಸ್ತುಗಳಿರುವ ಪಾಸೆÀðಲ್ ಬಂದಿದ್ದು, ಈ ವಿಚಾರ ಪೊಲೀಸರಿಗೆ ಹೇಳಿದರೆ ನಿಮ್ಮನ್ನು ಬಂಧಿಸುತ್ತಾರೆ.’ ಎಂದು ಬೆದರಿಕೆಯೊಡ್ಡಿ ರೂ. ೨.೨೦ ಕೋಟಿ ಹಣ ನೀಡಿದರೆ ಯಾರಿಗೂ ವಿಷಯ ಹೇಳುವುದಿಲ್ಲ ಎಂದು ನಂಬಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ನಂತರ ಇದೊಂದು ಮೋಸ ಎಂದು ಅರಿತ ದೇವಯ್ಯ ಅವರು ೩ ದಿನಗಳ ಹಿಂದೆ ಮಡಿಕೇರಿ ಸೈಬರ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಉತ್ತರ ಪ್ರದೇಶ ರಾಜ್ಯದ ಮೀರತ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಬ್ಯಾಂಕ್‌ನ ಖಾತೆಗೆ ದೇವಯ್ಯ ಅವರು ತಮ್ಮ ಉಳಿತಾಯ ಖಾತೆಯಿಂದ ರೂ. ೨.೨೦ ಕೋಟಿ ಹಣ ವರ್ಗಾವಣೆ ಮಾಡಿದ್ದಾರೆ. ಮಹಾರಾಷ್ಟçದ ವ್ಯಕ್ತಿಯ ಮೊಬೈಲ್ ನಂಬರ್ ಬಳಸಿಕೊಂಡು ‘ವಾಟ್ಸಾö್ಯಪ್’ ಮೂಲಕ ವಂಚಕರು ಕರೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ನಕಲಿ ವಿಳಾಸ

ಪ್ರಾಥಮಿಕ ತನಿಖೆಯಿಂದ ಬ್ಯಾಂಕ್ ಇ.ಕೆ.ವೈ.ಸಿ.ಗೆ ನೀಡಿರುವ ವಿಳಾಸ ಹಾಗೂ ಮಾಹಿತಿ ನಕಲಿ ಎಂದು ದೃಢಪಟ್ಟಿದೆ. ಕಂಪೆನಿಯೊAದರ ಹೆಸರಿನಲ್ಲಿ ಮೀರತ್ ಎಸ್.ಬಿ.ಐ.ನಲ್ಲಿ ಚಾಲ್ತಿ ಖಾತೆ (ಕರೆಂಟ್ ಅಕೌಂಟ್) ತೆರೆದು ಕೊಡÀಗಿನ ಬೆಳೆಗಾರ ದೇವಯ್ಯ ಅವರಿಂದ ರೂ. ೨.೨೦ ಕೋಟಿ ಪಡೆದ ನಂತರ ಖಾತೆ ನಿಷ್ಕಿçಯಗೊಳಿಸಿರುವ ವಂಚಕರ ಜಾಲ ತಾಂತ್ರಿಕವಾಗಿಯೂ ನುರಿತರೆಂದು ಈ ಕೃತ್ಯದಿಂದ ಕಂಡುಬರುತ್ತಿದೆ.

ಕೇವಲ ಬ್ಯಾಂಕ್ ಖಾತೆಗೆ ನಕಲಿ ವಿಳಾಸ ನೀಡಿದ್ದಲ್ಲದೆ ಕರೆ ಬಂದ ಮೊಬೈಲ್ ಸಂಖ್ಯೆ ಬೇರೊಬ್ಬರಿಗೆ ಸೇರಿದ್ದಾಗಿದೆ. ಸದ್ಯ ಮೊಬೈಲ್ ‘ಸ್ವಿಚ್ಛ್ ಆಫ್’ ಆಗಿದ್ದು, ಮಹಾರಾಷ್ಟçದ ವ್ಯಕ್ತಿಯೊಬ್ಬರಿಗೆ

(ಮೊದಲ ಪುಟದಿಂದ) ಸೇರಿದ್ದಾಗಿದೆ ಎಂದು ಹೇಳಲಾಗುತ್ತಿದೆ. ‘ವಾಟ್ಸಾö್ಯಪ್’ ಮೂಲಕ ಕರೆ ಮಾಡುವ ವಂಚಕರು ‘ಕಾಲ್ ರೆಕಾರ್ಡ್’ ಆಗದಂತೆ ಮುಂಜಾಗ್ರತೆ ವಹಿಸುತ್ತ್ತಾರೆ. ಅಷ್ಟೆ ಅಲ್ಲದೆ ವಾಟ್ಸಾö್ಯಪ್ ಕರೆ ಮಾಡುವ ಸಂಖ್ಯೆಯನ್ನು ಸಿಮ್ ಖರೀದಿಸಿದ ಮೂಲ ವ್ಯಕ್ತಿ ಬಳಸುತ್ತಿರುತ್ತಾರೆ. ಅವರ ಗಮನಕ್ಕೆ ಬಾರದೆ ವಂಚಕರು ಕೇವಲ ವಾಟ್ಸಾö್ಯಪ್ ಅಪ್ಲಿಕೇಷನ್ ಮಾತ್ರ ಅಳವಡಿಸಿಕೊಂಡು ತಮ್ಮ ಸುಳಿವು ಸಿಗದಂತೆ ದುಷ್ಕೃತ್ಯ ಎಸಗುತ್ತ ತಮ್ಮ ಚಹರೆ ಬಹಿರಂಗವಾಗದAತೆ ನೋಡಿ ಕೊಳ್ಳುತ್ತಿದ್ದಾರೆ. ವಾಟ್ಸಾö್ಯಪ್‌ನಲ್ಲಿ ಕರೆ ಮಾಡುವುದರಿಂದ ‘ನೆಟ್‌ವರ್ಕ್ ಟ್ರೇಸಿಂಗ್’ ಕೂಡ ಕಷ್ಟದಾಯಕ ಎಂಬ ವಿಷಯ ತಿಳಿದಿರುವ ವಂಚಕರು ಪೊಲೀಸರ ಕೈಗೆ ಸಿಗದೆ ಹಣ ಲಪಟಾಯಿಸಲು ರಾಜಮಾರ್ಗ ಅನುಸರಿಸುತ್ತಿದ್ದಾರೆ.

ಈ ಹಿಂದೆ ನಡೆದ ಪ್ರಕರಣಗಳ ಆಧಾರದಲ್ಲಿ ಗ್ರಾಮೀಣ ಭಾಗದ ಜನರು ಬಳಸುವ ಸಿಮ್ ಕಾರ್ಡ್ಗಳ ಮೂಲಕ ‘ವಾಟ್ಸಾö್ಯಪ್’ ಅಪ್ಲಿಕೇಷನ್ ಅನ್ನು ವಂಚಕರು ತಮ್ಮ ಮೊಬೈಲ್‌ಗೆ ಅಳವಡಿಸಿಕೊಂಡು ಈ ರೀತಿ ಬೆದರಿಸಿ ಹಣ ಪಡೆಯುತ್ತಿರುವುದಾಗಿ ಹೇಳಬಹುದಾಗಿದೆ.

ತಾಂತ್ರಿಕ ತೊಡಕು

ಈ ಪ್ರಕರಣದಲ್ಲಿ ಕೆಲವೊಂದು ತಾಂತ್ರಿಕ ತೊಡಕುಗಳು ತಲೆದೋರಿವೆ. ಬ್ಯಾಂಕ್‌ಗೆ ನೀಡಿರುವ ವಿಳಾಸ, ಹೆಸರು, ಮೊಬೈಲ್ ಸಂಖ್ಯೆ ಎಲ್ಲವೂ ನಕಲಿಯಾಗಿದ್ದು, ಕರೆ ಬಂದ ಮೊಬೈಲ್ ಸಂಖ್ಯೆಯೂ ಬೇರೊಬ್ಬರಿಗೆ ಸೇರಿದೆ. ಇದರಿಂದ ಪ್ರಕರಣ ಬೇಧಿಸಲು ಸವಾಲು ಸೃಷ್ಟಿಯಾಗಿದೆ.

ಈಗಾಗಲೇ ಇ-ಮೇಲ್ ಮೂಲಕ ಮೀರತ್ ಬ್ಯಾಂಕ್‌ನ ಸಂಪರ್ಕ ಸಾಧಿಸುತ್ತಿರುವ ಪೊಲೀಸರು ಮಾಹಿತಿಯನ್ನು ಪಡೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕರೆ ಬಂದ ಮೊಬೈಲ್ ಸಂಖ್ಯೆ ‘ಐಪಿ ಅಡ್ರೆಸ್’ ಪತ್ತೆ ಕಾರ್ಯವೂ ನಡೆಯುತ್ತಿದೆ.

ಈ ರೀತಿ ಎಷ್ಟೇ ಪ್ರಕರಣ ಸಂಭವಿಸಿದರೂ ನಾಗರಿಕರು ಎಚ್ಚರವಹಿಸದೆ, ಪೊಲೀಸರ ನೆರವು ಪಡೆಯದೆ ವಂಚಕರ ಹುಸಿ ಮಾತಿಗೆ ಮರುಳಾಗಿ ಹಣ ಕಳೆದು ಕೊಳ್ಳುತ್ತಿರುವುದು ವಿಪರ್ಯಾಸ ವಾಗಿದೆ. ತಪ್ಪು ಇಲ್ಲದೆ ಇದ್ದಲ್ಲಿ ಹೆದರದೆ ಸುಮ್ಮನಿರಿ ಎಂದು ಸೈಬರ್ ಠಾಣೆಯ ನಿರೀಕ್ಷಕ ಶ್ರೀಕಾಂತ್ ತಿಳಿಸಿದ್ದಾರೆ.