ಪೊನ್ನಂಪೇಟೆ, ಜೂ. ೧: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದ ಶ್ರೀ ಭದ್ರಕಾಳಿ ದೇವರ ಬೇಡು ಹಬ್ಬವು ಶ್ರದ್ಧಾಭಕ್ತಿಯಿಂದ ನಡೆಯಿತು. ಮೂರು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಭದ್ರಕಾಳಿ ದೇವರ ಬೇಡು ಹಬ್ಬವನ್ನು ಊರಿನ ತಕ್ಕ ಮುಖ್ಯಸ್ಥರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಮುಂದಾಳತ್ವದಲ್ಲಿ ಎರಡು ದಿನಗಳ ಕಾಲ ಆಚರಿಸಲಾಯಿತು. ಬೇಡು ಹಬ್ಬದ ಮೊದಲ ದಿನವಾದ ಮಂಗಳವಾರದAದು ಗ್ರಾಮಸ್ಥರೆಲ್ಲ ಬಗೆಬಗೆಯ ವೇಷಗಳನ್ನು ಧರಿಸಿ, ಮೂತ್ತಕಲ್ಲು ಅಂಬಲದಲ್ಲಿ ಸೇರಿದರು. ಬಳಿಕ ಒಂದು ತಂಡವು ಶ್ರೀ ಭದ್ರಕಾಳಿ ದೇವರ ಸಮ್ಮುಖದಲ್ಲಿ ಚೆಪ್ಪುಡಿರ ಕುಟುಂಬಸ್ಥರ ಮೊಗ ಮನೆಗೂ, ಮತ್ತೊಂದು ವೇಷಧಾರಿಗಳ ತಂಡ ಗ್ರಾಮದ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಕೋದೆಂಗಡ ಕುಟುಂಬಸ್ಥರ ಮೊಗ ಮನೆಗೂ, ಕುಣಿಯುತ್ತ ಮೆರವಣಿಗೆಯ ಮೂಲಕ ತೆರಳಿ, ಬುಧವಾರ ಬೆಳಗಿನವರೆಗೂ ಒಂದು ತಂಡ ಗ್ರಾಮದ ಕೋಪಟ್ಟೀರ, ಗಾಂಡAಗಡ, ಕೊಕ್ಕೆಂಗಡ, ಅಲೆಮಾಡ ಕುಟುಂಬಸ್ಥರ ಮನೆಗೆ ಸಾಗಿ ಚೆಪ್ಪುಡಿರ ಕುದುರೆ ಮನೆಯಲ್ಲಿ ಸೇರಿದರು. ಮತ್ತೊಂದು ತಂಡವು ಚೆಪ್ಪುಡಿರ ಕುಟುಂಬಸ್ಥರ ಮೊಗ ಮನೆಗೂ, ಚಿರಿಯಪ್ಪಂಡ, ಪೆಮ್ಮಂಡ ಕುಟುಂಬಸ್ಥರ ಮನೆ ಹಾಗೂ ಗ್ರಾಮದ ಅರ್ಚಕ ಸುದರ್ಶನ್ ಭಟ್ ಅವರ ಮನೆವರೆಗೆ ಸಾಗಿ ಬಳಿಕ ಚೆಪ್ಪುಡಿರ ಮೊಗ ಮನೆಯಲ್ಲಿ ಸೇರಿದರು.
ನಂತರ ಚೆಪ್ಪುಡಿರ ಕುಟುಂಬಸ್ಥರ ಮನೆಯಿಂದ ಅಲಂಕರಿಸಿದ ಒಂದು ಕುದುರೆ ಹಾಗೂ ಚಿರಿಯಪ್ಪಂಡ ಕುಟುಂಬಸ್ಥರ ಮನೆಯಿಂದ ಮತ್ತೊಂದು ಕುದುರೆಯನ್ನು ಮೂತ್ತಕಲ್ಲು ಅಂಬಲದಲ್ಲಿ ಗ್ರಾಮಸ್ಥರು ಹಾಗೂ ನೆಂಟರಿಷ್ಟರು ಸೇರಿ ಅಯ್ಯಪ್ಪ ದೇವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕಿರುಗೂರು ಗ್ರಾಮದ ಗುಮ್ಮತ್ ಮಾಡ್ ಮುಖ್ಯ ರಸ್ತೆಯಲ್ಲಿರುವ ತಡಲೇ ಅಂಬಲದಲ್ಲಿ ಶ್ರೀ ಮಹದೇಶ್ವರ ದೇವಸ್ಥಾನದ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ವಿಧಿ ವಿಧಾನಗಳ ಪ್ರಕಾರ ಪೂಜೆ ಸಲ್ಲಿಸಿದರು. ನಂತರ ಊರಿನ ದೇವರ ತೆರೆ ಅಂಬಲದಲ್ಲಿ ಸೇರಿ ದೇವರ ಕೆರೆಯಲ್ಲಿ ಸ್ನಾನ ಮಾಡಿ ಕುದುರೆಯನ್ನು ಕಳಚಲಾಯಿತು. ಬುಧವಾರ ಮಧ್ಯಾಹ್ನದ ಬಳಿಕ ಊರಿನ ತಕ್ಕ ಮುಖ್ಯಸ್ಥರು ಹಾಗೂ ಗ್ರಾಮಸ್ಥರು ಸೇರಿ ಕೋದೆಂಗಡ ಕುಟುಂಬಸ್ಥರ ಮನೆಯಿಂದ ಅಲಂಕರಿಸಿದ ಒಂದು ಮೊಗ ಹಾಗೂ ಚೆಪ್ಪುಡಿರ ಕುಟುಂಬಸ್ಥರ ಮನೆಯಿಂದ ಮತ್ತೊಂದು ಮೊಗ ತಂದು ಅಯ್ಯಪ್ಪ ದೇವರ ಕೋಟದಲ್ಲಿ ಬೇಲೆಕಾರರು ಹಾಗೂ ಗ್ರಾಮಸ್ಥರು ಕುಣಿದು, ಭಕ್ತಾದಿಗಳು ಹರಕೆ ಮತ್ತು ಕಾಣಿಕೆಗಳನ್ನು ಒಪ್ಪಿಸಿ, ಭದ್ರಕಾಳಿ ದೇವರ ಸ್ಥಾನದಲ್ಲಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.