ವೀರಾಜಪೇಟೆ, ಜೂ. ೧: ವೀರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ಮಹಾಸಭೆ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಅವರ ಅಧ್ಯಕ್ಷತೆಯಲ್ಲಿ ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಗೌರವ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ತಪ್ಪಡಕ ಕಟ್ಟಿ, ಸ್ವಾಗತಿಸಿ, ವಾರ್ಷಿಕ ವರದಿಯನ್ನು ಮಂಡಿಸಿದರು.

ಖಜಾAಚಿ ತಾತಂಡ ಯಶು ಕಬೀರ್ ವಾರ್ಷಿಕ ಲೆಕ್ಕ ಪತ್ರ ವರದಿ ಮಂಡಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್, ಒಕ್ಕೂಟ ನಡೆದು ಬಂದ ಹಾದಿಯನ್ನು ಮೆಲುಕು ಹಾಕಿ ಎಲ್ಲರಿಗೂ ಅವಕಾಶ ಸಿಗಬೇಕು ಎಂಬ ದೃಷ್ಟಿಯಿಂದ ಸ್ವಇಚ್ಛೆಯಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿಯವರಿಗೆ ನೀಡಿದರು. ಆದರೆ ಮಹಾಸಭೆಯಲ್ಲಿ ಅವರ ರಾಜಿನಾಮೆಯನ್ನು ಸ್ವೀಕರಿಸದೆ, ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಸಭೆ ತೀರ್ಮಾನಿಸಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಖ್ಯಾತ ಜ್ಯೋತಿಷಿ ಕರವಟ್ಟಿರ ಶಶಿ ಸುಬ್ರಮಣಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕರವಟ್ಟಿರ ಶಶಿ ಸುಬ್ರಮಣಿ ಅವರು ಕೊಡವ ಸಂಪ್ರದಾಯ ಆಚಾರ, ವಿಚಾರದ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಸಲಹಾ ಸಮಿತಿ ಸದಸ್ಯರಾಗಿರುವ ಬಿದ್ದಂಡ ರಾಣಿ ಉತ್ತಯ್ಯ ಹಾಗೂ ನಾಯಕಂಡ ಬೇಬಿ ಚಿಣ್ಣಪ್ಪ, ಚಪ್ಪಂಡ ಲಲಿತ ಉಪಸ್ಥಿತರಿದ್ದರು. ನಂತರ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.