ಕೂಡಿಗೆ, ಜೂ. ೧: ಕೂಡುಮಂಗಳೂರು ಗ್ರಾಮದ ಕುಶಾಲನಗರ- ಕೂಡಿಗೆ ರಾಜ್ಯ ಹಾಸನ ಹೆದ್ದಾರಿಯ ಸಮೀಪದಲ್ಲಿರುವ ಗ್ರಾಮ ದೇವತೆಯಾದ ದೊಡ್ಡಮ್ಮ ತಾಯಿಯ ರಥೋತ್ಸವ ಮತ್ತು ಜಾತ್ರೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ದೊಡ್ಡಮ್ಮ ತಾಯಿ ಹಬ್ಬ ಅಂಗವಾಗಿ ಶುಕ್ರವಾರ ಸಂಜೆ ದೇವಾಲಯದ ಆವರಣದಲ್ಲಿ ಕುಶಾಲನಗರದ ಸುಬ್ಬರಾವ್ ನೇತೃತ್ವದ ತಂಡದವರಿAದ ವಿವಿಧ ಹೋಮ ಹವನಗಳು ನಡೆದವು. ದೇವಾಲಯದ ಪೂಜಾ ಕೈಂಕರ್ಯಗಳನ್ನು ಪ್ರಧಾನ ಅರ್ಚಕ ಕರಿಯಪ್ಪ ನೆರವೇರಿಸಿದರು.
ಕೂಡುಮಂಗಳೂರು ಮತ್ತು ಕೂಡ್ಲೂರು ಗ್ರಾಮದ ದೇವಾಲಯಗಳಿಂದ ರಾತ್ರಿ ೧೨ ಗಂಟೆಗೆ ಪೂಜಾ ಕೈಂಕರ್ಯಗಳು ನಡೆದು ನಂತರ ಅಲಂಕೃತವಾದ ಭವ್ಯ ರಥದಲ್ಲಿ ತಾಯಿಯ ವಿಗ್ರಹ ವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ, ಗ್ರಾಮದ ಪ್ರಮುಖ ರಸ್ತೆಯಲ್ಲಿ ರಥ ಎಳೆದುಕೊಂಡು ಬಂದು ದೊಡ್ಡಮ್ಮ ತಾಯಿ ಸನ್ನಿಧಿಯಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಸಿ, ದೊಡ್ಡಮ್ಮ ತಾಯಿ ದೇವಾಲಯ ಮುಂಭಾಗದ ಹಾಕಲಾಗಿದ್ದ ಬೆಂಕಿ ಕೆಂಡೋತ್ಸವದಲ್ಲಿ ಆಗಮಿಸಿದ ಭಕ್ತರು ಭಾಗವಹಿಸಿ ಭಕ್ತಿ ಮೆರೆದರು. ನಂತರ ದೇವಾಲಯದ ಆವರಣದಲ್ಲಿ ಜಾತ್ರೋತ್ಸವ ಕಾರ್ಯಕ್ರಮಗಳು ನಡೆಯಿತು. ಹಬ್ಬದ ಅಂಗವಾಗಿ ಕೂಡುಮಂಗಳೂರು, ಕೂಡ್ಲೂರು ಗ್ರಾಮದ ಪ್ರಮುಖ ಬೀದಿಗಳು ಹಾಗೂ ಹಾಸನ ಹೆದ್ದಾರಿಯ ರಸ್ತೆಯ ಎರಡೂ ಬದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರಗೊAಡಿದ್ದವು. ರಥೋತ್ಸವದ ಪೂಜೋತ್ಸವದಲ್ಲಿ ಕೂಡಿಗೆ, ಕೂಡುಮಂಗಳೂರು, ಕೂಡ್ಲೂರು, ಸುಂದರನಗರ, ಬಸವತ್ತೂರು, ವಿಜಯನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೊಡ್ಡಮ್ಮ ತಾಯಿ ದೇವಾಲಯ ಸಮಿತಿಯ ಅಧ್ಯಕ್ಷ ಪವನ್ ಕುಮಾರ್, ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಹರೀಶ್, ಸುರೇಶ್, ಸಮಿತಿ ನಿರ್ದೇಶಕರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.