ವಿಶ್ವದ ಯಾವುದೇ ಭಾಗಕ್ಕೆ ಹೋದರೂ ಅತಿ ಅಗ್ಗವಾಗಿ ಹಾಗೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಪ್ರಯಾಣಕ್ಕೆ ಬಳಕೆಯಾಗುತ್ತಿರುವ ವಾಹನವೆಂದರೆ ಅದು ಬೈಸಿಕಲ್. ಯಾವುದೇ ಇಂಧನವನ್ನು ಬಳಸದ ಹಾಗೂ ಅತಿ ಕಡಿಮೆ ನಿರ್ವಹಣಾ ವೆಚ್ಚವಿರುವ ಬೈಸಿಕಲ್‌ನ ಚಾಲನೆಗೆ ಯಾವುದೇ ಚಾಲನಾ ಪ್ರಮಾಣ ಪತ್ರವೂ ಬೇಕಾಗಿಲ್ಲ, ಇದಕ್ಕೆ ನೋಂದಣಿ ಸಂಖ್ಯೆಯ ಅಗತ್ಯವೂ ಇಲ್ಲ. ಇದರ ಬಿಡಿಭಾಗಗಳೂ ಅತೀ ಕಡಿಮೆ ಬೆಲೆಯಲ್ಲಿ ಎಲ್ಲಾ ಕಡೆಯಲ್ಲಿಯೂ ಸಿಗುವುದರಿಂದ ಇದರ ಮಾಲೀಕನಾಗುವವರಿಗೆ ಸೈಕಲ್ ಎಂದಿಗೂ ಹೊರೆಯಾಗುವುದಿಲ್ಲ. ಹೀಗೆ ಶತಮಾನಗಳ ಹಿಂದಿನಿAದಲೂ ಬಳಕೆಯಾಗುತ್ತಿರುವ ಬೈಸಿಕಲ್‌ಗೆ ಗೌರವವನ್ನು ನೀಡಲು ಜೂನ್ ತಿಂಗಳ ಮೂರರಂದು ವಿಶ್ವ ಸೈಕಲ್ ದಿನವನ್ನಾಗಿ ಗುರುತಿಸಲಾಗಿದೆ.
ಶ್ರೀಸಾಮಾನ್ಯನ ವಾಹನವೆಂದೇ ಹೆಸರನ್ನು ಪಡೆದ ಸೈಕಲ್‌ನ ಆವಿಷ್ಕಾರವೂ ಒಂದು ಕುತೂಹಲಭರಿತ ವಿಷಯವಾಗಿದೆ. ೧೮೧೮ರಲ್ಲಿ ಸೈಕಲ್ ಮೊದಲು ಬಳಕೆಗೆ ಬಂದಿತು. ಎರಡು ಚಕ್ರಗಳಿರುವ ಒಂದು ಆಯತಾಕಾರದ ಪಟ್ಟಿಯ ಮೇಲ್ಬಾಗಕ್ಕೆ ಒಂದು ಮೃದುವಾದ ಆಸನವನ್ನು ಕೂರಿಸಲಾಗಿತ್ತು. ಆಗಿನ ಸೈಕಲ್‌ಗೆ ಪೆಡಲ್ ಆಗಲೀ ಚೈನ್ ಆಗಲೀ ಇರಲಿಲ್ಲ. ಸೈಕಲ್ ಸವಾರನು ವಾಹನದಲ್ಲಿ ಕುಳಿತು ಕಾಲಿನಿಂದ ನೆಲವನ್ನು ತಳ್ಳುವ ಮೂಲಕ ಮುಂದೆ ಸಾಗಬೇಕಾಗುತ್ತಿತ್ತು. ೧೮೬೦ರಲ್ಲಿ ಮಿಕಾ ಮತ್ತು ಲಾಲೆಮೆಂಠ್ ಎಂಬ ಹೆಸರಿನ ಫ್ರೆಂಚ್ ಪ್ರಜೆಗಳು ಪೆಡಲ್ ಇರುವ ಸೈಕಲ್ ಅನ್ನು ನಿರ್ಮಿಸಿದರು. ಈ ಸೈಕಲ್‌ನ ಚಕ್ರಗಳಿಗೆ ನೇರವಾಗಿ ಪೆಡಲ್‌ಗಳನ್ನು ಇರಿಸಲಾಗಿತ್ತು. ಪೆಡಲನ್ನು ತುಳಿದಾಗ ಮಾತ್ರ ಸೈಕಲ್ ಮುಂದೆ ಹೋಗುತ್ತಿತ್ತು. ಆದರೆ ಇಳಿಜಾರಿನಲ್ಲಿಯೂ ಈ ಪೆಡಲ್‌ಗಳು ತಿರುಗುತ್ತಲೇ ಇದ್ದವು! ಆದರೆ ೧೮೮೫ರಲ್ಲಿ ಈಗಿನ ರೂಪಕ್ಕೆ ಸಾಮೀಪ್ಯವುಳ್ಳ ಸೈಕಲ್‌ಗಳು ಬಳಕೆಗೆ ಬಂದವು. ೧೮೮೮ರಲ್ಲಿ ಗಾಳಿಯನ್ನು ತುಂಬಿದ ಚಕ್ರಗಳನ್ನು ಸೈಕಲ್‌ಗೆ ಅಳವಡಿಸಲಾಯಿತು. ಆರಂಭದ ದಿನಗಳಲ್ಲಿ ಸೈಕಲ್‌ನ ಮುಂದಿನ ಚಕ್ರವು ಸಣ್ಣದಾಗಿದ್ದು ಹಿಂದಿನ ಚಕ್ರವು ದೊಡ್ಡದಾಗಿದ್ದು ಅವನ್ನು ಡೇಂಡಿ ಸೈಕಲ್ ಎಂದು ಕರೆಯುತ್ತಿದ್ದರು. ಆದರೆ, ಮುಂದಿನ ದಿನಗಳಲ್ಲಿ ಎರಡು ಚಕ್ರಗಳೂ ಸಮಾನ ಗಾತ್ರವಾಗಿರುವಂತೆ ನಿರ್ಮಿಸಲಾಯಿತು.
ದಿನಗಳು ಉರುಳುತ್ತಿದ್ದಂತೆ ಸೈಕಲ್‌ನ ವಿನ್ಯಾಸದಲ್ಲಿ ಬಹಳಷ್ಟು ಬದಲಾವಣೆಗಳೂ ಆಗತೊಡಗಿದವು. ಸವಾರನು ಸೈಕಲನ್ನು ಅತ್ತಿತ್ತ ತಿರುಗಿಸಲು ಬಳಸುವ ಹ್ಯಾಂಡಲ್ ಬಾರ್‌ನ ಇಕ್ಕೆಲಗಳಲ್ಲಿಯೂ ಬ್ರೇಕ್ ಎನ್ನುವ ಸಾಧನವನ್ನು ಜೋಡಿಲಾಯಿತು. ಸೈಕಲ್‌ನ ಹಿಂಭಾಗದಲ್ಲಿ ಸಾಮಗ್ರಿಗಳನ್ನು ಒಯ್ಯಲು ಅನುಕೂಲವಾಗುವಂತೆ ಕ್ಯಾರಿಯರ್ ಅನ್ನು ಇರಿಸಲಾಯಿತು. ಸೈಕಲ್‌ನ ಮುಂಭಾಗಕ್ಕೆ ಟ್ರಿಣ್ ಎಂದು ಶಬ್ದ ಮಾಡುವ ಬೆಲ್‌ಗಳೂ ಬಂದುವು. ಇದರಜೊತೆಯಲ್ಲಿ ಕಳ್ಳರು ಸುಲಭದಲ್ಲಿ ಸೈಕಲನ್ನು ಕದಿಯಲಾಗದಂತೆ ಹಿಂದಿನ ಚಕ್ರಕ್ಕೆ ಬೀಗವನ್ನು ಜೋಡಿಲಾಯಿತು. ರಾತ್ರಿಯ ಕಾಲದಲ್ಲಿಯೂ ಸೈಕಲ್ ಓಡಿಸಲು ಅನುಕೂಲವಾಗುವಂತೆ ಸೈಕಲ್‌ಗಳಿಗೆ ಡೈನಮೋ ಎನ್ನುವಂತಹ ಸಾಧನವನ್ನು ಅಳವಡಿಸಿ, ಹಿಂದಿನ ಚಕ್ರವು ತಿರುಗುವಾಗ ಈ ಡೈನಮೋ ತಿರುಗುವಂತೆ ಮಾಡಿ ಅದರ ಮೂಲಕ ಮುಂಗಡೆಯಲ್ಲಿ ವಿದ್ಯುತ್ ದೀಪವು ಉರಿಯುವಂತೆ ಮಾಡಲಾಯಿತು.
ಹೀಗೆ ನಾನಾ ಪರಿಷ್ಕರಣೆಯನ್ನು ಮಾಡಿಕೊಂಡು ಬೆಳೆದುಬಂದ ಸೈಕಲ್ ಈಗಲೂ ಬಳಕೆದಾರರ ಅನುಕೂಲತೆಗಳಿಗೆ ತಕ್ಕಂತೆ ಹಲವಾರು ಬದಲಾವಣೆಯನ್ನು ಮಾಡಿಕೊಂಡು ಬೆಳೆಯುತ್ತಿದೆ. ಯುವಪೀಳಿಗೆಯ ಹೆಚ್ಚಿನ ಸೈಕಲ್‌ಗಳಿಗೆ ಗೇರ್ ಬಾಕ್ಸ್ ಒಂದನ್ನು ಅಳವಡಿಸಲಾಗಿದ್ದು, ದಿಣ್ಣೆಯನ್ನು ಏರುವ ಸಮಯದಲ್ಲಿ ಆಗುವ ಶ್ರಮವನ್ನು ಕಡಿಮೆಗೊಳಿಸಲಾಗಿದೆ. ಮುಂದುವರಿದು ಇದೀಗ ಇಲೆಕ್ಟಿçಕಲ್ ಸೈಕಲ್‌ಗಳು ಬಂದಿದ್ದು, ತ್ರಾಸವಿಲ್ಲದೆ ಚಾಲಿಸಬಹುದಾಗಿದೆ. ಸಣ್ಣಮಗುವನ್ನು ಕೂರಿಸಿಕೊಳ್ಳುವ ಸೈಕಲ್‌ನ ಮುಂಭಾಗದಲ್ಲಿ ಬುಟ್ಟಿಯನ್ನೂ ವಿನ್ಯಾಸಗೊಳಿಸಲಾಗಿದೆ. ಧರಿಸಿದ ಪ್ಯಾಂಟ್‌ಗೆ ಪೆಡಲ್ ಮಾಡುವಾಗ ಎಣ್ಣೆ ತಾಗಬಾರದೆಂದು ಚೈನ್ ಗಾರ್ಡ್ ಅಳವಡಿಸಲಾಗಿದೆ. ಹೀಗೆ ಮಾಡಿಕೊಳ್ಳಬಹುದಾದ ಯಾವುದೇ ಬದಲಾವಣೆಗಳಿಂದ ಸೈಕಲ್‌ನ ಚಾಲನೆಯು ಇನ್ನಷ್ಟು ಸುರಕ್ಷಿತವೂ ಆರಾಮದಾಯಕವೂ ಆಗಿದೆ.
ಪೆಡಲ್ ಸೈಕಲ್ ಎನ್ನುವ ಸಾರಿಗೆಯ ವಾಹನವು ಮಾನವನ ಏಳಿಗೆಯ, ತಾಳ್ಮೆಯ, ಆರೋಗ್ಯ ರಕ್ಷಣೆಯ ಹಾಗೂ ಪರಿಸರಸ್ನೇಹಿಯಾದ ವಾಹನವಾಗಿದ್ದು ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ದೂರವನ್ನು ಕ್ರಮಿಸಬಹುದಾದ ವಾಹನವಾಗಿದೆ. ಇಂಧನ ಬಳಸಿ ಚಾಲನೆಗೆ ತೊಡಗಿಕೊಳ್ಳುವ ವಾಹನಗಳಿಂದ ಹೆಚ್ಚುತ್ತಿರುವ ವಾಯುಮಾಲಿನ್ಯ, ಕುಸಿಯುತ್ತಿರುವ ದ್ರವ ಇಂಧನದ ಲಭ್ಯತೆ, ಹೆಚ್ಚುತ್ತಿರುವ ಇಂಧನದ ಬೇಡಿಕೆ, ಎಷ್ಟೇ ಪಥಗಳನ್ನು ನಿರ್ಮಿಸಿದರೂ ನಿಯಂತ್ರಣಕ್ಕೆ ಸಿಲುಕದ ವಾಹನಗಳ ದಟ್ಟಣೆ, ವಾಹನ ನಿಲುಗಡೆಗೆ ಆಗುತ್ತಿರುವ ಸಂಕಷ್ಟ ಇವನ್ನೆಲ್ಲ ಗಮನಿಸಿದಾಗ ಸೈಕಲ್ ಬಳಸಲು ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಈ ವಿಶ್ವ ಸೈಕಲ್ ದಿವಸವು ಹೆಚ್ಚಿನ ಮಹತ್ವವನ್ನು ಪಡೆಯುತ್ತದೆ. ಪೆಡಲ್ ಸೈಕಲ್‌ನಿಂದ ಸಂಚಾರ, ಸರಕು ಸಾಗಣೆ, ಮನೋರಂಜನೆಯ ಜೊತೆಗೆ ವ್ಯಾಯಾಮವೂ ಆಗುವುದು. ಮಧುಮೇಹರೋಗವು ಬರದಂತೆ ಇರಬೇಕಾದರೆ ಪ್ರತಿ ದಿವಸ ಹತ್ತು ಕಿಲೋಮೀಟರ್ ದೂರ ಸೈಕಲ್ ಓಡಿಸಬೇಕು. ಇದು ದೇಹದ ತೂಕ, ಸೊಂಟದ ಗಾತ್ರವನ್ನು ತಗ್ಗಿಸುವುದಲ್ಲದೆ, ಕಾಲುಗಳಿಗೆ ಉತ್ತಮ ಶಕ್ತಿಯನ್ನೂ ನೀಡುತ್ತದೆ.
ಹಿಂದೆ ಶಾಲೆಗೆ ಹೋಗುವ ಸಮಯದಲ್ಲಿ ತಂದೆತಾಯಿಯರನ್ನು ಪೀಡಿಸಿ ನಾಲ್ಕಾಣೆಯೋ ಎಂಟಾಣೆಯೋ ಪಡೆದು ಅದನ್ನು ಪಾವತಿಸಿ ಬಾಡಿಗೆಯ ಸೈಕಲ್ ಅನ್ನು ಪಡೆದು ಅದರಲ್ಲಿ ಸೈಕಲ್ ಚಾಲನೆಯ ಪರಿಣತಿಯನ್ನು ಪಡೆಯುತ್ತಿದ್ದರು. ಈಗ ಬಹುತೇಕ ಶಿಶುವಾಗಿರುವಾಗಲೇ ಮನೆಗೊಂದು ಮಕ್ಕಳ ಸೈಕಲ್ ಬರತೊಡಗಿದ್ದು ಆ ಸೈಕಲ್‌ನ ಹಿಂದಿನ ಚಕ್ರದ ಇಕ್ಕೆಲಗಳಲ್ಲಿಯೂ ಒಂದೊAದು ಹೆಚ್ಚಿನ ಚಕ್ರವನ್ನು ಜೋಡಿಸಿ ಮಗುವಿಗೆ ಸೈಕಲ್‌ನ ಸಮತೋಲನವನ್ನು ಕಾಯ್ದುಕೊಳ್ಳಲು ಅನುಕೂಲವನ್ನು ಮಾಡಲಾಗುತ್ತದೆ. ಮಗುವು ಬೆಳೆದು ದೊಡ್ಡದಾಗುತ್ತಿದ್ದಂತೆ ತುಸು ದೊಡ್ಡ ಸೈಕಲ್ ಅನ್ನು ಕೊಡಿಸಲಾಗುತ್ತಿದೆ.
ಸಣ್ಣ ಪ್ರಾಯದಲ್ಲಿ ಸೈಕಲನ್ನು ಕಲಿತು ಓಡಿಸಿದಾಗ ಸಿಗುತ್ತಿದ್ದ ಸಂತೋಷ, “ಥ್ರಿಲ್” ದೊಡ್ಡವರಾದ ಮೇಲೆ ಬೈಕ್ ಓಡಿಸುವಾಗಲಾಗಲೀ ಕಾರುಗಳನ್ನು ಚಾಲನೆ ಮಾಡುವಾಗಲಾಗಲೀ ಸಿಕ್ಕುವುದಿಲ್ಲ ಎನ್ನುವುದೊಂದು ಕಟು ವಾಸ್ತವವಾಗಿದೆ. ಇಳಿಜಾರು, ದಿಣ್ಣೆಗಳು ಕಡಿಮೆ ಇರುವ ಸ್ಥಳಗಳಲ್ಲಿ ಸೈಕಲ್ ಬಳಕೆಯು ಸುಲಭವೆನ್ನಿಸುತ್ತದೆ.
ಒಟ್ಟಿನಲ್ಲಿ ಅಗ್ಗದ ವಾಹನವೂ, ಪರಿಸರಸ್ನೇಹಿ ವಾಹನವೂ, ಸುಲಭದ ನಿರ್ವಹಣೆಯ ವಾಹನವೂ ಆಗಿರುವ ಪೆಡಲ್ ಸೈಕಲ್ ಬರುವ ದಿನಗಳಲ್ಲಿ ಇನ್ನಷ್ಟು ಬದಲಾವಣೆಗಳೊಂದಿಗೆ ರಸ್ತೆಗಿಳಿದು ಎಲ್ಲಾ ವರ್ಗದವರ ಮನವನ್ನು ಸೆಳೆಯುವುದು ಶತಸಿದ್ಧವಾಗಿದೆ.
-ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು
ಮೊ.೯೧೪೧೩ ೯೫೪೨೬