ಪೊನ್ನಂಪೇಟೆ, ಜೂ. ೨: ಮಡಿಕೇರಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ತಾಲೂಕು ಯೋಜನಾ ಕಛೇರಿಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಕೋರ್ ಕಮಿಟಿ ಸಭೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಅವರು ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ೨೦೧೭ ರಿಂದ ಅನಿಕ್ಷಿತವಾಗಿ, ನೈಸರ್ಗಿಕವಾಗಿ ಉಂಟಾಗುತ್ತಿರುವ ಅತಿವೃಷ್ಟಿ, ಪ್ರವಾಹ, ಭೂಕುಸಿತ, ದುರಂತ ಅಪಘಾತಗಳು ಹೆಚ್ಚಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಪೀಡಿತ ಪ್ರದೇಶಗಳಲ್ಲಿ ಸಮಸ್ಯೆಗಳಿಗೆ ಒಳಗಾದ ಜನರಿಗೆ ತುರ್ತು ಸಹಾಯವನ್ನು ಒದಗಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಯಂಸೇವಕರನ್ನು ಒಳಗೊಂಡ ಶೌರ್ಯ ಎಂಬ ವಿಪ್ಪತ್ತು ನಿರ್ವಹಣಾ ಸಮಿತಿಯನ್ನು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಾರಂಭಿಸಿದರು. ನಮ್ಮ ಶೌರ್ಯ ಸ್ವಯಂಸೇವಕರು ಪ್ರತಿ ತಾಲೂಕು ಮಟ್ಟದಲ್ಲಿ ಸ್ವಯಂಸೇವಕರು ಪ್ರಾಕೃತಿಕ ಹಾಗೂ ಇನ್ನಿತರ ಅವಘಡಗಳ ಸಮಯಗಳಲ್ಲಿ ಸರ್ಕಾರದ ಇಲಾಖೆಗಳ ಜೊತೆ ಸೇರಿ ಅತ್ಯಮೂಲ್ಯ ವಾದ ಸೇವೆಯನ್ನು ನೀಡಬೇಕು ಎಂದರು. ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ನಿರ್ದೇಶಕರಾದ ಲೀಲಾವತಿ, ವಿಪತ್ತು ನಿರ್ವಹಣಾ ಕಾರ್ಯಕ್ರಮ ಯೋಜನಾಧಿಕಾರಿ ಗಳಾದ ಜೈವಂತ್ ಪಟಗಾರ, ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಮಡಿಕೇರಿ ತಾಲೂಕಿನ ಯೋಜನಾಧಿಕಾರಿ ಪುರುಷೋತ್ತಮ, ವೀರಾಜಪೇಟೆ ತಾಲೂಕಿನ ಯೋಜನಾಧಿಕಾರಿ ದಿನೇಶ್, ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕರಾದ ನಿತೇಶ್ ಕೆ. ಹಾಗೂ ಎರಡು ತಾಲೂಕಿನ ವಲಯದ ಮೇಲ್ವಿಚಾರಕರು, ಸಂಯೋಜಕರು, ಘಟಕ ಪ್ರತಿನಿಧಿಗಳು ಭಾಗವಹಿಸಿದ್ದರು.