ಕುಶಾಲನಗರ, ಜೂ.೨: ಪ್ರವಾಹ, ಪ್ರಕೃತಿ ವಿಕೋಪ ಸಂದರ್ಭ ನಾಗರಿಕರನ್ನು ರಕ್ಷಣೆ ಮಾಡುವ ಸಂಬAಧ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಕುಶಾಲನಗರ ಸಮೀಪ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಪೊಲೀಸರಿಗೆ ತರಬೇತಿ ನಡೆಯಿತು. ಹೇರೂರು ಗ್ರಾಮ ಬಳಿ ಹಿನ್ನೀರಿನಲ್ಲಿ ಜಿಲ್ಲೆಯ ಮೂರು ಉಪ ವಿಭಾಗಗಳ ಪೊಲೀಸರ ತಂಡ ಮತ್ತು ಜಿಲ್ಲಾ ಸಶಸ್ತ್ರ ಪೊಲೀಸರ ತಂಡ ಸೇರಿದಂತೆ ಸುಮಾರು ೬೦ಕ್ಕೂ ಅಧಿಕ ಸಿಬ್ಬಂದಿಗಳು ವಿಶೇಷ ಯಾಂತ್ರಿಕ ದೋಣಿಗಳ ಸಹಾಯದೊಂದಿಗೆ ಅಣಕು ಕಾರ್ಯಾಚರಣೆ ನಡೆಸಿದರು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮತ್ತು vಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ನೇತೃತ್ವದಲ್ಲಿ ತರಬೇತಿ ಕಾರ್ಯಾಚರಣೆ ನಡೆಯಿತು. ಮುಂಬರುವ ಮಳೆಗಾಲದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಕಡೆ ನೆರೆ ಹಾವಳಿ ಅಥವಾ ಪ್ರಕೃತಿ ವಿಕೋಪಗಳು ಸಂಭವಿಸಿದಲ್ಲಿ ತಕ್ಷಣ ಸಾರ್ವಜನಿಕರ ಸಹಾಯಕ್ಕೆ ಧಾವಿಸಲು ಜಿಲ್ಲಾ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ತಿಳಿಸಿದ್ದಾರೆ.

ಜಿಲ್ಲೆಯ ಮೂರು ಉಪ ವಿಭಾಗ ಮತ್ತು ಡಿಎಆರ್ ವಿಭಾಗದಿಂದ ತಲಾ ೧೫ ಸಿಬ್ಬಂದಿಗಳನ್ನು ಒಳಗೊಂಡAತೆ ನಾಲ್ಕು ತಂಡವನ್ನು ರಚಿಸಲಾಗಿದೆ. ಈ ತಂಡಗಳಿAದ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ರಕ್ಷಣಾ ಕಾರ್ಯಾಚರಣೆ ಯ ಅಭ್ಯಾಸವನ್ನು ನಡೆಸಲಾಯಿತು ಎಂದು ಅವರು ಮಾಹಿತಿ ನೀಡಿದರು.

ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ ತಲುಪುವ ಮುನ್ನ ಸ್ಥಳೀಯ ಪೊಲೀಸರು ಎಲ್ಲಾ ರೀತಿಯಲ್ಲೂ ಸನ್ನದ್ಧರಾಗಿರುತ್ತಾರೆ ಎಂದ ರಾಮರಾಜನ್ ವಿಶೇಷ ಬೋಟ್ ವ್ಯವಸ್ಥೆಗಳು ಮತ್ತು ಸಾಮಗ್ರಿಗಳನ್ನು ಈಗಾಗಲೇ ತರಿಸಲಾಗಿದೆ, ಕಳೆದ ಬಾರಿ ಕೂಡ ಹಾರಂಗಿ ಜಲಾಶಯದಲ್ಲಿ ತರಬೇತಿ ನೀಡಲಾಗಿತ್ತು.

ಜಲಾಶಯದಲ್ಲಿ ಸುಮಾರು ೫೦ರಿಂದ ೮೦ ಅಡಿಗಳಷ್ಟು ಆಳವಿರುವ ಪ್ರದೇಶದಲ್ಲಿ ಈಜು ತರಬೇತಿ ನೀಡಲಾಗುತ್ತಿದ್ದು, ಸುಮಾರು ೨ ಕಿ.ಮೀ. ದೂರಕ್ಕೆ ತೆರಳಿ ಕಾರ್ಯಾಚರಣೆ ಮಾಡುವಂತಹ ಸಾಮರ್ಥ್ಯವನ್ನು ಸ್ಥಳೀಯ ಪೊಲೀಸರು ಹೊಂದಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲಾ ಸಶಸ್ತçದಳ ತಂಡದಲ್ಲಿ ಈಗಾಗಲೇ ೨೫ ರಿಂದ ೩೦ ರಷ್ಟು ನುರಿತ ಈಜುಗಾರರು ಇರುವುದಾಗಿ ಅವರು ತಿಳಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಂದರ್ ರಾಜ್ ಅವರು ಈ ಬಗ್ಗೆ ಮಾಹಿತಿ ನೀಡಿ ಕೊಡಗು ಜಿಲ್ಲಾ ಪೊಲೀಸ್ ತಂಡಗಳು ಮಳೆಗಾಲದ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿವೆ. ಸಾರ್ವಜನಿಕರು ಮಾಹಿತಿ ನೀಡಿದ ತಕ್ಷಣ ಅದನ್ನು ಆದರಿಸಿ ನಾಗರಿಕರ ಸಹಕಾರ ಪಡೆದು ಎಲ್ಲಾ ರೀತಿಯ ರಕ್ಷಣಾ ಕಾರ್ಯ ಮಾಡಲು ಈ ತರಬೇತಿ ಕಾರ್ಯಾಚರಣೆ ಸಹಕಾರಿಯಾಗಲಿದೆ ಎಂದರು. ಈ ಸಂದರ್ಭ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕೆ ರಾಜೇಶ್ ಕೊಟ್ಯಾನ್ ಮತ್ತು ಇತರೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

-ಚಂದ್ರಮೋಹನ್