ಮಡಿಕೇರಿ, ಜೂ. ೨: ಸಿದ್ದಾಪುರದ ೨೪೦೦ ಎಕರೆ ಬಿಬಿಟಿಸಿ ಕಾಫಿ ತೋಟದ ಭೂಪರಿವರ್ತನೆ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಭೂಪರಿವರ್ತನೆಗಳ ವಿರುದ್ಧ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ತಾ. ೩ ರಿಂದ (ಇಂದಿನಿAದ) ಜಿಲ್ಲಾವ್ಯಾಪಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಸೋಮವಾರ ಬಿರುನಾಣಿಯಿಂದ ಜನಜಾಗೃತಿ ಕಾರ್ಯಕ್ರಮವನ್ನು ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಮಡಿಕೇರಿ, ಸುಂಟಿಕೊಪ್ಪ, ಮಾದಾಪುರ, ಚೆಟ್ಟಳ್ಳಿ, ಚೇರಂಬಾಣೆ, ಮೂರ್ನಾಡು, ಕಕ್ಕಬೆ, ನಾಪೋಕ್ಲು, ವೀರಾಜಪೇಟೆ, ಸಿದ್ದಾಪುರ, ಗೋಣಿಕೊಪ್ಪ, ತಿತಿಮತಿ, ಬಾಳೆಲೆ, ಪೊನ್ನಂಪೇಟೆ, ಹುದಿಕೇರಿ, ಕುಟ್ಟ, ಶ್ರೀಮಂಗಲ, ಟಿ. ಶೆಟ್ಟಿಗೇರಿ ಮತ್ತಿತರೆಡೆ ಕೂಡ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಕಾಫಿ ತೋಟಗಳ ಭೂಪರಿವರ್ತನೆಯಿಂದ ಕೊಡಗಿನ ಎಲ್ಲಾ ಗ್ರಾಮಗಳು ನಾಶವಾಗುತ್ತಿವೆ. ಮಣ್ಣು ಅಗೆಯುವ ಕೆಲಸದಿಂದ ಬಹುವಾರ್ಷಿಕ ಜಲಮೂಲಗಳ ನರ ಕೇಂದ್ರಗಳು ಈಗಾಗಲೇ ಮುಚ್ಚಿವೆ. ಈ ಬಗ್ಗೆ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಇದರೊಂದಿಗೆ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ. ಟ್ಯಾಗ್, ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳನ್ನು ಮಾನ್ಯ ಮಾಡಬೇಕು ಸೇರಿದಂತೆ ಇಡೀ ಕೊಡವ ಜನಾಂಗದ ಪರವಾಗಿ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ತಿಳಿಸಿದ್ದಾರೆ.