ಚಿಕ್ಕಮಗಳೂರು, ಜೂ. ೨: ಇಲ್ಲಿಗೆ ಸಮೀಪದ ಕುರುಬರಹಳ್ಳಿಯಲ್ಲಿ ಇರುವ ಕಾಫಿ ಕ್ಯೂರಿಂಗ್ ವರ್ಕ್ಸ್ ನಲ್ಲಿ ಕೆಲಸ ಮಾಡುತಿದ್ದ ಕೊಡಗಿನ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ವರದಿ ಆಗಿದೆ. ಮೃತನನ್ನು ಕುಶಾಲನಗರದ ಜನತಾ ಕಾಲೋನಿ ನಿವಾಸಿ ಉದಯ್ (೨೮) ಎಂದು ಗುರುತಿಸಲಾಗಿದೆ.

ನಗರದ ಹೊರವಲಯದ ಕುರುಬರಹಳ್ಳಿ ಬಳಿ ಇರುವ ವಿದ್ಯಾ ಕಾಫಿ ಕ್ಯೂರಿಂಗ್ ವರ್ಕ್ಸ್ನಲ್ಲಿ ಈ ದುರ್ಘಟನೆ ನಡೆದಿದ್ದು ಇನ್ಸ್ಟಂಟ್ (ಕರಗುವ) ಕಾಫಿ ತಯಾರಿಕೆಯ ಪ್ರಕ್ರಿಯೆಯಲ್ಲಿ ಬಳಸಲಾಗುವ ಬಾಯ್ಲರ್ ನಲ್ಲಿ ಏಕಾಏಕಿ ೩೪೦ ಡಿಗ್ರಿಗಳಷ್ಟು ಶಾಖ ಹೊರಬಂದದ್ದರಿAದಾಗಿ ಅದರ ತೀವ್ರತೆಗೆ ಯುವಕನ ದೇಹ ಬೆಂದು ಹೋಗಿದೆ. ಈ ಘಟನೆಯು ಶನಿವಾರ ಬೆಳಿಗ್ಗೆ ಸುಮಾರು ೧೦ ಗಂಟೆಯ ಸಮಯದಲ್ಲಿ ನಡೆದಿದೆ ಎಂದು ತಿಳಿಸಿದ ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ಸಚಿನ್ ಅವರು ಘಟನೆ ನಡೆದಾಗ ಉದಯ್ ಬಾಯ್ಲರ್ ರಿಪೇರಿ ಮಾಡುತಿದ್ದ ಎಂದು ತಿಳಿಸಿದರು.

ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಶಾಲನಗರಕ್ಕೆ ಶನಿವಾರ ರಾತ್ರಿ ಮೃತದೇಹವನ್ನು ರವಾನೆ ಮಾಡಲಾಗಿದೆ. ಮೃತನು ಕಳೆದ ಐದು ವರ್ಷಗಳಿಂದ ಕ್ಯೂರಿಂಗ್ ವರ್ಕ್ಸ್ನಲ್ಲಿ ಕೆಲಸ ಮಾಡುತಿದ್ದ ಅಲ್ಲದೆ ಆತನ ತಾಯಿ ಚಿಕ್ಕಮಗಳೂರಿನ ನರ್ಸಿಂಗ್ ಹೋಮ್‌ನಲ್ಲಿ ಡಿ ದರ್ಜೆ ನೌಕರರಾಗಿ ಕೆಲಸ ಮಾಡುತಿದ್ದರು.

ವಿಷಯ ತಿಳಿಯುತ್ತಿದ್ದಂತೆ ಶವಗಾರದ ಬಳಿ ಕಾಫಿ ಕ್ಯೂರಿಂಗ್ ವರ್ಕ್ಸ್ನ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕ್ಯೂರಿಂಗ್ ವರ್ಕ್ಸ್ ನಿರ್ಲಕ್ಷö್ಯದ ಕುರಿತು ಆಡಳಿತ ಮಂಡಳಿಯ ವಿರುದ್ದ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

-ಕೋವರ್ ಕೊಲ್ಲಿ ಇಂದ್ರೇಶ್