ವೀರಾಜಪೇಟೆ, ಜೂ. ೨: ಪಟ್ಟಣದ ಸಂತ ಅನ್ನಮ್ಮ ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಪದಾಧಿಕಾರಿಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ ಅವರು, ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಹಿಂದೆ ನೀಡಿದ ಭರವಸೆಯಂತೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ಸರಕಾರ ಖಂಡಿತವಾಗಿ ಕ್ರಮವಹಿಸಲಿದೆ. ಸಂಘದ ಕೆಲವು ಬೇಡಿಕೆಗಳನ್ನು ಶಿಕ್ಷಣ ಸಚಿವರ ಹಂತದಲ್ಲೇ ಬಗೆಹರಿಸಬಹು ದಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ಶಿಕ್ಷಣ ಸಚಿವರ ಭೇಟಿಗೆ ದಿನ ನಿಗದಿಪಡಿಸ ಲಾಗುವುದು. ಕೆಲವು ಬೇಡಿಕೆಗಳನ್ನು ಸರಕಾರದ ಹಂತದಲ್ಲಿ ಕ್ರಮಕೈಗೊಳ್ಳ ಬೇಕಿರುವುದರಿಂದ ಈ ಬಗ್ಗೆಯೂ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಮದೆನಾಡಿದ ಮಲೆ ಮಹಾದೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಮಾತನಾಡಿ, ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಹಾಗೂ ಜನಸಂಖ್ಯೆಯೂ ಕಡಿಮೆಯಿರುವುದರಿಂದ ಅನುದಾನಿತ ವಿದ್ಯಾಸಂಸ್ಥೆಗಳಿಗೆ ನಿಗದಿಪಡಿಸಿರುವ ಕನಿಷ್ಟ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ೨೦ಕ್ಕೆ ನಿಗದಿಗೊಳಿಸಬೇಕು. ೨೦೦೬ ನಂತರ ನೇಮಕಾತಿ ವೇತನಾನುದಾನಕ್ಕೆ ಒಳಪಟ್ಟ ಎಲ್ಲಾ ಅನುದಾನಿತ ವಿದ್ಯಾಸಂಸ್ಥೆಗಳ ಸಿಬ್ಬಂದಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಕಾರ್ಯಭಾರ ಕೊರತೆಯಿರುವ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಕಾರ್ಯಭಾರವನ್ನು ಸರಿದೂಗಿಸಲು ಸರಕಾರಿ ಪದವಿ ಪೂರ್ವ ಕಾಲೇಜುಗಳಿಗೆ ನಿಯೋಜಿಸಬೇಕು. ವೇತನಾನುದಾನಕ್ಕೆ ಒಳಪಟ್ಟ ವಿದ್ಯಾಸಂಸ್ಥೆಗಳಲ್ಲಿ ೨೦೧೫ ಹಾಗೂ ಅದಕ್ಕೂ ಪೂರ್ವದಲ್ಲಿ ಖಾಲಿಯಾದ ಹುದ್ದೆಗಳನ್ನು ಮಾತ್ರ ತುಂಬಿಕೊಳ್ಳಲು ಅನುಮತಿಯಿದ್ದು, ಇದನ್ನು ಕನಿಷ್ಟ ೨೦೨೦ರವರೆಗೆ ವಿಸ್ತರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮದಲೈ ಮುತ್ತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕೊಡಗು ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಹಾಗೂ ಮೂರ್ನಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದೇವಕಿ, ಭಾಗಮಂಡಲದ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿವಾಕರ್ ಉಪಸ್ಥಿತರಿದ್ದರು.
ಮಾದಾಪುರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂದಪ್ಪ, ಚೇರಂಬಾಣೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.