ಪೊನ್ನಂಪೇಟೆ, ಜೂ. ೨: ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆದಾಗ ಮಾತ್ರ ಯಶಸ್ವಿ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಹೇಳಿದರು.
ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ಕಾಲೇಜು ಶಿಕ್ಷಣದ ಅವಧಿಯಲ್ಲಿ ಒಂದು ಗುರಿ ಹಾಗೂ ಮುಂದಾಲೋಚನೆ ಇಟ್ಟುಕೊಂಡು ಮುಂದುವರೆಯಬೇಕು. ಸೂಕ್ತ ಅವಕಾಶಗಳು ಬರುವ ಸಂದರ್ಭ ಪೂರ್ವ ಸಿದ್ಧತೆಯನ್ನು ಮಾಡಿಕೊಂಡು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಮತ್ತೊಬ್ಬ ಅತಿಥಿ ವಿಧಾನ ಪರಿಷತ್ ಸದಸ್ಯ ಮಂಡೆಪAಡ ಸುಜಾ ಕುಶಾಲಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಕೂಡ ಮುಖ್ಯವಾಗಿದ್ದು, ತಮ್ಮ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡು ಜೀವನ ರೂಪಿಸಿಕೊಳ್ಳಬೇಕು. ದುಶ್ಚಟಗಳಿಗೆ ಆಸ್ಪದ ಕೊಡದೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕುಲ್ಲಚಂಡ ಪಿ. ಬೋಪಣ್ಣ ಮಾತನಾಡಿ ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ಸಾಧನೆಯ ಮೆಟ್ಟಿಲೇರಲು ಪ್ರಯತ್ನಿಸಬೇಕು. ಕಾಲೇಜಿನ ಎಲ್ಲಾ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದರು. ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಪ್ಪ ಕಾಲೇಜು ವರದಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಪ್ಪ, ಹಿಂದಿ ಉಪನ್ಯಾಸಕಿ ಡಾ. ಸವಿತಾ, ಕನ್ನಡ ಉಪನ್ಯಾಸಕಿ ಡಾ. ರೇವತಿ ಪೂವಯ್ಯ, ಎನ್ಸಿಸಿ ವಿಭಾಗದಲ್ಲಿ ಸಾಧನೆ ಮಾಡಿದ ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ, ಝೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಾಯಕ ವಿದ್ಯಾರ್ಥಿ ಅನ್ವಿತ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶೈಕ್ಷಣಿಕ, ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಅಜಯ್ ಕುಮಾರ್, ಐ ಕ್ಯೂ ಎ ಸಿ ಸಂಚಾಲಕಿ ಡಾ. ನಯನ ತಮ್ಮಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಿ.ಎಂ. ಧ್ಯಾನ್ ದೇವಯ್ಯ, ಪದಾಧಿಕಾರಿಗಳಾದ ತಷ್ಮ ದೇಚಮ್ಮ, ಎಂ.ಪಿ. ಯಶೋಧ, ಜಗತ್ ಬೆಳ್ಳಿಯಪ್ಪ, ಸಾಮುಯಲ್ ಜೋನತನ್ ಜಾಷ್ಪ, ಟಿ. ಆರ್. ರಿಯಾನ, ಆಡಳಿತ ಮಂಡಳಿ ನಿರ್ದೇಶಕರು, ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಅನ್ವಿತ್ ಕುಮಾರ್ ತಂಡ ಪ್ರಾರ್ಥಿಸಿ, ಉಪ ಪ್ರಾಂಶುಪಾಲೆ ಪ್ರೊ. ಎಂ. ಎಸ್. ಭಾರತಿ ಸ್ವಾಗತಿಸಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸ್ನಾತಕೋತ್ತರ ವಿಭಾಗ ಸಂಚಾಲಕಿ ಎನ್. ಪಿ. ರೀತಾ ವಂದಿಸಿದರು.