ಕೋವರ್ ಕೊಲ್ಲಿ ಇಂದ್ರೇಶ್

ಮುAಬೈ, ಜೂ. ೩: ಶನಿವಾರ ಕೊನೆ ಹಂತದ ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ದೇಶದ ಬಹುತೇಕ ಮಾಧ್ಯಮ ಮತ್ತು ಸಮೀಕ್ಷಾ ಸಂಸ್ಥೆಗಳು ಪ್ರಕಟಿಸಿದ ಸಮೀಕ್ಷಾ ವರದಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ೩೫೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ ಬೆನ್ನಲ್ಲೇ ಸೋಮವಾರ ದೇಶದ ಷೇರು ಮಾರುಕಟ್ಟೆಗಳಲ್ಲಿ ಸಂಭ್ರಮ ಕಂಡು ಬಂದಿತು. ಬೆಳಿಗ್ಗೆಯಿಂದಲೇ ಏರುತ್ತಲೇ ಸಾಗಿದ ಮುಂಬೈ ಷೇರು ಪೇಟೆ ಬರೋಬ್ಬರಿ ೨೫೦೪ ಅಂಶಗಳ ಏರಿಕೆಯನ್ನೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ ೭೫೦ ಅಂಶಗಳ ಭರ್ಜರಿ ಏರಿಕೆ ದಾಖಲಿಸಿತು. ಇದರಿಂದಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ೧೪ ಲಕ್ಷ ಕೋಟಿ ರೂಪಾಯಿ ಹೆಚ್ಚಳಗೊಂಡಿತು.

ಸರ್ಕಾರಿ ಸ್ವಾಮ್ಯದ ಕಂಪೆನಿಗಳು, ಬ್ಯಾಂಕ್‌ಗಳು, ಅದಾನಿ ಕಂಪನಿಗಳು ಸೇರಿದಂತೆ ಬಹುತೇಕ ಕಂಪೆನಿಗಳ ಷೇರು ಬೆಲೆ ಏರಿಕೆ ಕಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ೩೫೦ ಕ್ಕೂ ಅಧಿಕ ಸ್ಥಾನ ಗಳಿಸಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿದ್ದ ಹಿನ್ನೆಲೆಯಲ್ಲಿ ಹೂಡಿಕೆದಾರರು ಭಾರೀ ಹೂಡಿಕೆ ಮಾಡಿದ್ದರಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡವು. ಮೇ ತಿಂಗಳಲ್ಲಿ ೧.೭೩ ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಇದು ಶೇ.೧೦ರಷ್ಟು ಹೆಚ್ಚಳವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ದೇಶೀಯ ಹೂಡಿಕೆದಾರರು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರುಮಾರುಕಟ್ಟೆಯಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ಹೂಡಿಕೆದಾರರ ಉತ್ಸಾಹದಿಂದ ಸಂಚಾರ ದಟ್ಟಣೆ ಹೆಚ್ಚಾಗಿ ಪ್ರಮುಖ ಬ್ರೋಕರೇಜ್ ಸಂಸ್ಥೆಗಳ ಸರ್ವರ್‌ಗಳು ಕೆಲ ಕಾಲ ಸ್ಥಗಿತಗೊಂಡವು. ಲಕ್ಷಾಂತರ ಹೂಡಿಕೆದಾರರು ಒಮ್ಮೆಗೇ ಷೇರು ಖರೀದಿಗೆ ಮತ್ತು ಮಾರಾಟಕ್ಕೆ ಮುಗಿ ಬಿದ್ದಿದ್ದರಿಂದ ಬ್ರೋಕರೇಜ್ ಸಂಸ್ಥೆಗಳಾದ ಝೆರೋಧಾ, ಗ್ರೋವ್ ಸೇರಿದಂತೆ ಹಲವು ಕಂಪನಿಗಳ ಸರ್ವರ್ ಡೌನ್ ಆಗಿತ್ತು. ಇದರಿಂದಾಗಿ ಷೇರು ಮಾರಾಟಗಾರರು ಮತ್ತು ಖರೀದಿದಾರರು ಪರದಾಡಿದರು.

ಮಾರುಕಟ್ಟೆ ತಜ್ಞರ ಪ್ರಕಾರ ಹೂಡಿಕೆದಾರರು ಎನ್‌ಡಿಏ ೩೫೦ ಕ್ಕೂ ಅಧಿಕ ಸ್ಥಾನ ಮತ್ತು ಬಿಜೆಪಿ ೩೦೦ ಸ್ಥಾನ ಪಡೆಯುವ ನಿಟ್ಟಿನಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ ಬಿಜೆಪಿ ೨೫೦-೨೭೦ ಸ್ಥಾನ ಗಳಿಸಿದರೆ ಮಂಗಳವಾರ ಮತ್ತೆ ಷೇರುಪೇಟೆ ಕುಸಿಯಲಿದೆ. ಬಿಜೆಪಿ ೨೦೦-೨೨೦ ಸ್ಥಾನಗಳಿಸಿದರೆ, ಕನಿಷ್ಟ ೨೦೦೦ ಅಂಶ ಕುಸಿಯಲಿದೆ. ಒಂದು ವೇಳೆ ಬಿಜೆಪಿಯೇ ಏಕಾಂಗಿಯಾಗಿ ೩೦೦-೩೩೦ ಸ್ಥಾನ ಗಳಿಸಿದರೆ ಇಂದೂ ಕೂಡ ಷೇರು ಪೇಟೆ ಕನಿಷ್ಟ ೫೦೦ ಅಂಶ ಏರಿಕೆ ದಾಖಲಿಸಲಿದೆ.