ಸೋಮವಾರಪೇಟೆ, ಜೂ. ೩: ಕಳೆದ ಅನೇಕ ದಶಕಗಳಿಂದ ಅರಣ್ಯದಂಚಿನ ಸಜ್ಜಳ್ಳಿಯಲ್ಲಿ ನೆಲೆ ಕಂಡುಕೊAಡಿರುವ ಆದಿವಾಸಿಗಳಿಗೆ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಸಮಸ್ಯೆ ತಲೆದೋರಿದ್ದು, ಕಾಡಾನೆಗಳು ಹಾಡಿಯ ಒಳಗೆ ಬಂದು ರಾದ್ಧಾಂತ ಮಾಡುತ್ತಿರುವ ಹಿನ್ನೆಲೆ ಕಂಗೆಡುವAತಾಗಿದೆ. ಕಳೆದ ಮೇ. ೨೩ರಂದು ಹಾಡಿಗೆ ಲಗ್ಗೆಯಿಟ್ಟ ಕಾಡಾನೆ, ಗುಡಿಸಲು ಸೇರಿದಂತೆ ಬೈಕ್, ಡ್ರಮ್, ಕೊಟ್ಟಿಗೆ ಮೇಲೆ ಧಾಳಿ ಮಾಡಿತ್ತು. ಈ ಹಿನ್ನೆಲೆ ಡಿಸಿಎಫ್ ಭಾಸ್ಕರ್ ಅವರು ಸಜ್ಜಳ್ಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.

ಹಾಡಿಗೆ ಲಗ್ಗೆಯಿಟ್ಟ ಕಾಡಾನೆ ಕರಿಯಪ್ಪ ಅವರ ಗುಡಿಸಲಿನ ಮೇಲೆ ಧಾಳಿ ನಡೆಸಿತ್ತು. ಅದೃಷ್ಟವಶಾತ್ ಕರಿಯಪ್ಪ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದರು. ಜೇನು ಕುರುಬರ ಶಿವು ಅವರ ಬೈಕ್ ತುಳಿದು ಜಖಂಗೊಳಿಸಿತ್ತು. ಇದರೊಂದಿಗೆ ಶಾಮ್ ಅವರಿಗೆ ಸೇರಿದ ನೀರಿನ ಟ್ಯಾಂಕ್ ಒಡೆದು ನಷ್ಟಗೊಳಿಸಿತ್ತು. ನಷ್ಟ ಪರಿಹಾರ ಹಾಗೂ ಕಾಡಾನೆಗಳ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದರು.

ಈ ಹಿನ್ನೆಲೆ ಹಾಡಿಗೆ ಭೇಟಿ ನೀಡಿದ ಡಿಸಿಎಫ್ ಭಾಸ್ಕರ್ ಅವರು, ಸಜ್ಜಳ್ಳಿ ಗಿರಿಜನ ಹಾಡಿಯ ನಿವಾಸಿಗಳಿಗೆ ವ್ಯವಸಾಯ ಮಾಡಲು ಹಕ್ಕು ಪತ್ರ ನೀಡಲಾಗಿದೆ. ಕಾನೂನಿನ ಪ್ರಕಾರ ಜಾಗದ ಆರ್‌ಟಿಸಿ ಇದ್ದರೆ ಮಾತ್ರ ಪರಿಹಾರ ನೀಡಲು ಸಾಧ್ಯ. ಕಾಡಾನೆಗಳ ಕಾಟವನ್ನು ತಪ್ಪಿಸಲು ಇಲಾಖೆಯಿಂದ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಡಾನೆಗಳು ರೈಲ್ವೇ ಬ್ಯಾರಿಕೇಡ್ ದಾಟಿ ಒಳಬರುತ್ತಿವೆ. ಕೋಟ್ಯಾಂತರ ರೂಪಾಯಿ ವೆಚ್ಚದ ಯೋಜನೆ ನಿರುಪಯೋಗಿಯಾಗಿದೆ. ಹಾಡಿಯಲ್ಲಿ ಮಹಿಳೆಯರು, ಮಕ್ಕಳು, ವೃದ್ಧರಿದ್ದಾರೆ. ಒಂದು ವೇಳೆ ಮಲಗಿರುವ ಸಂದರ್ಭ ಜೀವಹಾನಿಯಾದರೆ ಏನು ಮಾಡಲು ಸಾಧ್ಯ ಎಂದು ತಾಲೂಕು ಜೇನುಕುರುಬ ಯುವ ಸೇವಾ ಸಮಿತಿ ಅಧ್ಯಕ್ಷ ಶಾಮ್ ಪ್ರಶ್ನಿಸಿದರು.

ಕಾಜೂರಿನಿಂದ ಹಾರಂಗಿ ಹಿನ್ನೀರು ಪ್ರದೇಶದವರೆಗೆ ೭ ಕಿ.ಮೀ. ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಉಳಿದ ಕಾಮಗಾರಿಯನ್ನು ಶೀಘ್ರ ಪೂರೈಸಲಾಗುವುದು. ಬ್ಯಾರಿಕೇಡ್‌ನ ಗೇಟ್‌ಗಳನ್ನು ಮುಚ್ಚಲಾಗುವುದು ಎಂದು ಡಿಸಿಎಫ್ ಹೇಳಿದರು.

ಬ್ಯಾರಿಕೇಡ್‌ನ ಮುಂದುವರೆದ ಕಾಮಗಾರಿ ಕಳಪೆಯಾದರೆ ಕಾಡಾನೆಗಳು ಬ್ಯಾರಿಕೇಡ್ ಮುರಿದು ಒಳಬರುತ್ತವೆ. ಈ ಹಿನ್ನೆಲೆ ಕಾಮಗಾರಿ ಕಳಪೆಯಾಗದಂತೆ ಎಚ್ಚರ ವಹಿಸಬೇಕೆಂದು ಸ್ಥಳೀಯರಾದ ಮಚ್ಚಂಡ ಅಶೋಕ್, ಕೆ.ಪಿ. ರಾಯ್, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗಮನ ಸೆಳೆದರಲ್ಲದೆ, ಈವರೆಗೆ ಈ ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು.

ನಂತರ ಡಿಸಿಎಫ್ ಭಾಸ್ಕರ್ ಅವರು ಈಗಾಗಲೇ ಮುಕ್ತಾಯಗೊಂಡಿರುವ ಬ್ಯಾರಿಕೇಡ್ ಕಾಮಗಾರಿ, ಅರಣ್ಯದೊಳಗೆ ಇರುವ ಕೆರೆಗಳನ್ನು ಪರಿಶೀಲಿಸಿದರು. ಆರ್‌ಎಫ್‌ಓ ಚೇತನ್, ಡಿಆರ್‌ಎಫ್‌ಓ ಜಗದೀಶ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.