ಮಡಿಕೇರಿ, ಜೂ. ೩: ಮುಂದಿನ ಐದು ವರ್ಷಗಳ ಕಾಲ ಭಾರತವನ್ನು ಆಳುವವರು ಯಾರು..? ಎಂಬ ಈ ಬಾರಿಯ ಕುತೂಹಲಕ್ಕೆ ಮಂಗಳವಾರ (ಇಂದು) ಉತ್ತರ ಸಿಗಲಿದೆ. ಶತಕೋಟಿ ಭಾರತೀಯರು ಈ ಬಗ್ಗೆ ಕುತೂಹಲ ದಲ್ಲಿದ್ದಾರೆ. ಲೋಕಸಭೆಗೆ ಒಟ್ಟು ೭ ಹಂತಗಳಲ್ಲಿ ನಡೆದಿರುವ ಚುನಾವಣೆಯ ಮತ ಎಣಿಕೆ ಮಂಗಳವಾರ ದಂದು ನಡೆಯಲಿದ್ದು, ಅಪರಾಹ್ನದ ವೇಳೆಗೆ ದೇಶದ ಮುಂದಿನ ಭವಿಷ್ಯವೇನು ಎಂಬುದು ಬಹುತೇಕ ನಿರ್ಧಾರವಾಗಲಿದೆ.

ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿ ಪಟ್ಟವನ್ನು ನರೇಂದ್ರ ಮೋದಿ ಅವರು ಅಲಂಕರಿಸಲಿದ್ದಾರೆ ಎಂಬ ಬಹುತೇಕ ಸಮೀಕ್ಷೆಗಳು ನೀಡಿರುವ ವರದಿಯೇ ಈ ಬಾರಿಯ ಫಲಿತಾಂಶವಾಗಲಿದೆಯೇ ಅಥವಾ ಇಂಡಿಯಾ ಒಕ್ಕೂಟದ ನಿರೀಕ್ಷೆಗಳು ಈಡೇರಲಿದೆಯೇ ಎಂಬ ಕೌತುಕ ಜನತೆಯಲ್ಲಿದೆಯಾದರೂ ಬಹುತೇಕರ ಅಭಿಪ್ರಾಯ ಈಗಿನ ಸಮೀಕ್ಷಾ ವರದಿಗಳೇ ಅಂತಿಮ ಎಂಬAತಿರುವುದು ಸಹಜವಾಗಿದೆ.

ದೇಶದಾದ್ಯಂತ ಇರುವ ಒಟ್ಟು ೫೪೩ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಒಟ್ಟು ೮೩೬೦ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.

(ಮೊದಲ ಪುಟದಿಂದ) ಈ ಬಾರಿಯ ಚುನಾವಣೆಯಲ್ಲಿ ಒಟ್ಟಾರೆಯಾಗಿ ಮತದಾನದ ಪ್ರಮಾಣ ಶೇ.೬೫ರಷ್ಟಿದೆ. ಒಟ್ಟು ೪೪ ದಿನಗಳ ಅವಧಿಯಲ್ಲಿ ೭ ಹಂತಗಳಲ್ಲಿ ಚುನಾವಣೆ ನಡೆದಿದ್ದು, ದೇಶಾದ್ಯಂತ ೭೫೧ ರಾಜಕೀಯ ಪಕ್ಷಗಳು ಸ್ಪರ್ಧೆಯಲ್ಲಿವೆ.

ಎನ್.ಡಿ.ಎ. ಹಾಗೂ ಇಂಡಿಯಾ ಒಕ್ಕೂಟ ಈ ಎರಡು ಮೈತ್ರಿ ಕೂಟದ ನಡುವಿನ ಜಿದ್ದಾಜಿದ್ದಿನ ಹೋರಾಟದಲ್ಲಿ ಮತದಾರರು ಯಾರ ಬಗ್ಗೆ ಒಲವು ತೋರಿದ್ದಾರೆ ಎಂಬ ಭಾರತೀಯರ ಕುತೂಹಲಕ್ಕೆ ಉತ್ತರ ಸಿಗಲು ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದೆ.