ಮಡಿಕೇರಿ, ಜೂ.೩ : ಸಿದ್ದಾಪುರ ಕಾವೇರಿ ಜಲಾನಯನ ಪ್ರದೇಶದ ೨೪೦೦ ಎಕರೆ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಬೃಹತ್ ಭೂಪರಿವರ್ತನೆಗಳನ್ನು ತಡೆಯದಿದ್ದಲ್ಲಿ ಮುಂದೊAದು ದಿನ ಪವಿತ್ರ ಕಾವೇರಿಯ ತವರು ಕೊಡವ ಲ್ಯಾಂಡ್ ಮರೆಯಾಗಿ ಕೊಡವರು ಅಲೆಮಾರಿಗಳಾಗಬೇಕಾಗುತ್ತದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಭೂಪರಿವರ್ತನೆಯ ವಿರುದ್ಧ ಬಿರುನಾಣಿಯಲ್ಲಿ ಶಾಂತಿಯುತ ಮಾನವ ಸರಪಳಿ ನಿರ್ಮಿಸುವ ಮೂಲಕ ಸಿಎನ್ಸಿಯ ಜನಜಾಗೃತಿ ಕಾರ್ಯಕ್ರಮವನ್ನು ಆರಂಭಿಸಿದ ಅವರು, ಕೊಡವ ಲ್ಯಾಂಡ್ ನ್ನು ಉಳಿಸಿಕೊಳ್ಳಲು ಕೊಡವರೆಲ್ಲರು ಒಗ್ಗೂಡುವಂತೆ ಕರೆ ನೀಡಿದರು.
೨೪೦೦ ಎಕರೆ ಕಾಫಿ ತೋಟದ ಭೂಪರಿವರ್ತನೆಯಿಂದ ೨.೮೦ ಲಕ್ಷ ಮಂದಿ, ತಡಿಯಂಡಮೋಳ್ನ ಕೆಳಗೆ ೩೦೦ ಎಕರೆ ಕಾಫಿ ತೋಟಗಳ ಪರಿವರ್ತನೆಯಿಂದ ೩೦ ಸಾವಿರ ಮತ್ತು ಗಾಳಿಬೀಡಿನ ಹಸಿರು ಬೆಲ್ಟ್ ಪ್ರದೇಶದ ಭೂಪರಿವರ್ತನೆಯಿಂದ ೧೦ ಸಾವಿರ ಮಂದಿ ನೆಲೆಸುವ ಸಾಧ್ಯತೆ ಇದೆ. ಈ ಬೆಳವಣಿಗೆಯಿಂದ ಕೊಡಗಿನಲ್ಲಿ ಜನಸಂಖ್ಯಾ ಸ್ಫೋಟ ಸಂಭವಿಸಿ ಆದಿಮಸಂಜಾತ ಬುಡಕಟ್ಟು ಜನಾಂಗ ಮೂಲನಿವಾಸಿ ಕೊಡವರ ಅಸ್ತಿತ್ವಕ್ಕೆ ಧಕ್ಕೆ ಬರಬಹುದು ಎಂದು ಹೇಳಿದರು.
ಮೂಲನಿವಾಸಿಗಳು ವಾಸದ ಮನೆ ನಿರ್ಮಿಸಲು ಅನುಮತಿ ಕೋರಿದರೆ ಹಸಿರು ವಲಯ ಪ್ರದೇಶವೆಂದು ಅಡ್ಡಿ ಪಡಿಸುವ ಆಡಳಿತ ವ್ಯವಸ್ಥೆ ಭೂಮಾಫಿಯಾಗಳು ಸಾವಿರಾರು ಏಕರೆ ಹಸಿರು ಭೂಮಿಯನ್ನು ಪರಿವರ್ತನೆ ಮಾಡುತ್ತಿದ್ದರೆ ಮೌನಕ್ಕೆ ಶರಣಾಗಿದೆ ಮತ್ತು ಬೆಂಬಲ ನೀಡುತ್ತಿದೆ. ಸ್ಥಳೀಯ ಬೆಳೆಗಾರರು ಕೇವಲ ೧೫ ದಿನದ ಮಟ್ಟಿಗೆ ನದಿಯಿಂದ ತೋಟಗಳಿಗೆ ನೀರು ಬಳಸಿದರೆ ಇಲ್ಲದ ಕಾನೂನುಗಳನ್ನು ಹೇರಿ ನೀರು ಬಳಸದಂತೆ ಮಾಡುವ ಆಡಳಿತಗಾರರು, ಸಾವಿರಾರು ಎಕರೆ ಟೀ ಎಸ್ಟೇಟ್ಗೆ ಬಂಡವಾಳಶಾಹಿಗಳು ಕಕ್ಕಟ್ಟುಪೊಳೆಯಿಂದ ನೀರು ಬಳಸುತ್ತಿರುವಾಗ ಮೌನ ವಹಿಸಿರುವುದು ಏಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದಾಪುರದ ಕಾಫಿ ತೋಟದ ೨೪೦೦ ಎಕರೆ ತೋಟವನ್ನು ಪರಿವರ್ತಿಸುವ ಮೂಲಕ ದೈತ್ಯಾಕಾರದ ವಿಲ್ಲಾಗಳು, ಮೆಗಾ ಟೌನ್ಶಿಪ್ಗಳು ಮತ್ತು ಮನೆ ನಿವೇಶನಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.
ಯುನೆಸ್ಕೋದ ವಿಶ್ವಪರಂಪರೆಯ ತಾಣದ ಅಡಿಯಲ್ಲಿ ಬರುವ ತಡಿಯಂಡಮೋಳ್ನ ಕೆಳಗೆ ೩೦೦ ಎಕರೆ ಕಾಫಿ ತೋಟಗಳು ಪರಿವರ್ತನೆಯಾಗಿವೆ. ಮಕ್ಕಂದೂರಿನ ಪಶ್ಚಿಮ ಘಟ್ಟಗಳ ವಲಯದಲ್ಲಿ ಅಕ್ರಮವಾಗಿ ರೆಸಾರ್ಟ್ ಅನ್ನು ನಿರ್ಮಿಸಲಾಗಿದೆ. ಅಲ್ಲದೆ ಗಾಳಿಬೀಡಿನ ಹಸಿರು ಬೆಲ್ಟ್ ಪ್ರದೇಶದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಹೈದರಾಬಾದ್ನವರು ಹೌಸಿಂಗ್ ಕಾಲೋನಿಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಅರೆಕಾಡ್ನಲ್ಲಿ ಡಾಬರ್ ಟೌನ್ಶಿಪ್ಗಳು ತಲೆ ಎತ್ತುತ್ತಿವೆ ಎಂದು ನಾಚಪ್ಪ ಆರೋಪಿಸಿದರು.
ಜಿಲ್ಲೆಯಲ್ಲಿ ಬೃಹತ್ ಭೂಪರಿವರ್ತನೆಗಳು ನಿಲ್ಲುವಲ್ಲಿಯವರೆಗೆ ಸಿಎನ್ಸಿ ವತಿಯಿಂದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ. ತಾ.೧೦ ರಂದು ಬಾಳೆಲೆಯಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಮಾನವ ಸರಪಳಿಯಲ್ಲಿ ಬೊಟ್ಟಂಗಡ ಸವಿತಾ ಗಿರೀಶ್, ಕಳಕಂಡ ಗಂಗಮ್ಮ, ಬೊಟ್ಟಂಗಡ ಗಿರೀಶ್, ಬುಟ್ಟಿಯಂಡ ತಂಬಿ ನಾಣಯ್ಯ, ಕಾಳಿಮಾಡ ಸೋಮಯ್ಯ, ಚಟ್ಟಂಗಡ ಸೋಮಣ್ಣ, ಕುಪ್ಪಣಮಾಡ ಪ್ರೀತಂ, ಅಣ್ಣಳಮಾಡ ಸುರೇಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟೀರ ಲೋಕೇಶ್, ಕಿರಿಯಮಾಡ ಶೆರೀನ್, ಬೊಟ್ಟಂಗಡ ನಟರಾಜ್, ಮೂಕಳಮಾಡ ಈರಪ್ಪ, ಕಾಳಿಮಾಡ ಭೀಮಯ್ಯ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.