ವರದಿ : ವಾಸು
ಸಿದ್ದಾಪುರ, ಜೂ. ೩: ಗುಹ್ಯ ಹಾಗೂ ಇಂಜಿಲಗೆರೆ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಮನೆಗಳ ಸುತ್ತಲು ಓಡಾಡುತ್ತಿದ್ದು, ಆತಂಕ ಸೃಷ್ಟಿಸಿವೆ. ಗುಹ್ಯ ಹಾಗೂ ಇಂಜಿಲಗೆರೆಯ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಿಂಡು ಬೀಡುಬಿಟ್ಟು ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ.
ಇತ್ತೀಚೆಗೆ ಇಂಜಿಲಗೆರೆಯ ನಿವಾಸಿ ಬೆಳೆಗಾರ ಮಂಡೇಪAಡ ಪ್ರವೀಣ್ ಬೋಪಯ್ಯ ಎಂಬವರ ಕಾಫಿ ತೋಟದೊಳಗೆ ಬೀಡು ಬಿಟ್ಟಿದ್ದ, ಕಾಡಾನೆಗಳನ್ನು ಕಾಡಿಗಟ್ಟುವ ಸಂದರ್ಭದಲ್ಲಿ ಹೆಣ್ಣಾನೆಯೊಂದು ಕಾರ್ಯಾಚರಣೆ ತಂಡದ ಆನೆ ಕಾರ್ಯಪಡೆಯ ಸಿಬ್ಬಂದಿ ಮರುಗನ್ ಹಾಗೂ ಬೆಳೆಗಾರ ಪ್ರವೀಣ್ ಮೇಲೆ ದಾಳಿ ನಡೆಸಿತ್ತು. ಕಾಡಾನೆ ದಾಳಿಗೆ ಸಿಲುಕಿ ಆನೆ ಕಾರ್ಯಪಡೆಯ ಸಿಬ್ಬಂದಿ ಮುರುಗನ್ ಕಾಲಿಗೆ ಗಂಭೀರ ಗಾಯವಾಗಿತ್ತು. ಇನ್ನೋರ್ವ ಸಿಬ್ಬಂದಿ ಮೇಲೆ ದಾಳಿ ನಡೆಸುವುದನ್ನು ತಪ್ಪಿಸಲು ಹೋಗಿದ್ದ ಬೆಳೆಗಾರ ಪ್ರವೀಣ್ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ. ಇದೀಗ ಗಾಯಗೊಂಡ ಈರ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಡಾನೆ ದಾಳಿ ಸಂಬAಧ ಸಿದ್ದಾಪುರದ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿರುತ್ತದೆ. ಆದರೆ ಕಾಡಾನೆಗಳ ಹಿಂಡು ಇಂಜಿಲಗೆರೆ ಗ್ರಾಮ ಹಾಗೂ ಗುಹ್ಯ ಗ್ರಾಮದ ಕಾಫಿ ತೋಟಗಳಲ್ಲಿ ಮರಿಯಾನೆಗಳೊಂದಿಗೆ ಸುತ್ತಾಡುತ್ತಿದೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಮಾಡಲು ಮಳೆಯಿಂದಾಗಿ ಸಮಸ್ಯೆ ಆಗುತ್ತಿದೆ ಎನ್ನಲಾಗಿದೆ. ಮಳೆಯಿಂದ ತೋಟ ಗಳಲ್ಲಿ ಕೆಸರಿನಿಂದ ಕಾರ್ಯಾಚರಣೆ ತಂಡ ಹರಸಾಹಸ ಪಡುತ್ತಿದೆ.
ಮನೆ ಸುತ್ತಲು ಕಾಡಾನೆಗಳ ಘೀಳು!
ಇಂಜಿಲಗೆರೆಯ ನಿವಾಸಿ ಪ್ರವೀಣ್ ಬೋಪಯ್ಯ ಅವರ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ರಾತ್ರಿ ಪೂರ್ತಿ ಅವರ ಮನೆ ಅಂಗಳಲ್ಲಿ ಓಡಾಡುತ್ತಿವೆ ಎಂದು ಪ್ರವೀಣ್ ತಿಳಿಸಿದ್ದಾರೆ. ಈ ಕಾಡಾನೆಗಳು ಮನೆಯ ಬಳಿ ಬಂದು ಜೋರಾಗಿ ಘೀಳಿಡುತ್ತಿದ್ದು, ಇದರ ಶಬ್ದಕ್ಕೆ ರಾತ್ರಿ ಭಯದಿಂದ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆತಂಕದಿAದ ತಿಳಿಸಿದರು. ಕಾಡಾನೆಗಳ ಹಿಂಡಿನಲ್ಲಿದ್ದ ಕೆಲವು ಕಾಡಾನೆಗಳು ರಾತ್ರಿ ಪರಸ್ಪರ ಕಾದಾಟ ನಡೆಸುತ್ತಾ ಘೀಳಿಡುವ ಶಬ್ದ ಬರುತ್ತಿದೆ. ಮನೆಯಿಂದ ಸಂಜೆ ಸಮಯದಲ್ಲಿ ಹೊರ ಬರದಂತೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಹಿತಿ ನೀಡಿದರು. ಕಾಡಾನೆ ಹಾವಳಿ ತಡೆಗೆ ಸರ್ಕಾರ ಹಾಗೂ ಅರಣ್ಯ ಇಲಾಖಾಧಿಕಾರಿಗಳು ಶಾಶ್ವತ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು. ಕಾಡಾನೆಗಳು ಕೋಪಗೊಂಡು ದಾಳಿ ನಡೆಸಲು ಮುಂದಾಗುತ್ತಿದೆ ಎಂದರು.
ಸಿಬ್ಬAದಿಗಳಿಗೆ ಭದ್ರತೆ ನೀಡಬೇಕು
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿ ಇದ್ದು ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಸಂದರ್ಭದಲ್ಲಿ ಕಾಡಾನೆಗಳು ಕೋಪಗೊಂಡು ಕಾರ್ಯಪಡೆ ತಂಡದ ಸಿಬ್ಬಂದಿಗಳನ್ನು ಅಟ್ಟಾಡಿಸಿಕೊಂಡು ಬಂದು ದಾಳಿ ನಡೆಸುತ್ತಿದೆ. ದಾಳಿಗೆ ಸಿಲುಕಿ ಸಿಬ್ಬಂದಿಗಳು ಗಾಯಗೊಂಡ ಘಟನೆಗಳು ನಡೆದಿವೆ. ಆದರೆ ಇವರಿಗೆ ಸೂಕ್ತ ರೀತಿಯ ಮಾಸಿಕ ವೇತನ ಹಾಗೂ ಇನ್ನಿತರ ಹೆಚ್ಚಿನ ಸೌಲಭ್ಯಗಳು ಇಲ್ಲ ಎನ್ನಲಾಗಿದೆ. ತಮ್ಮ ಜೀವದ ಹಂಗು ತೊರೆದು ಕಾಫಿ ತೋಟಗಳ ಮಧ್ಯೆ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ, ಅರಣ್ಯಕ್ಕೆ ಅಟ್ಟಲು ಶತಾಯಗತಾಯ ಪ್ರಯತ್ನ ಪರಿಶ್ರಮ ಪಡುತ್ತಿದ್ದಾರೆ. ಇವರಿಗೆ ಉತ್ತಮ ಸೌಲಭ್ಯ ನೀಡಬೇಕೆಂಬ ಅಭಿಪ್ರಾಯ ಕೇಳಿ ಬಂದಿದೆ.