ಮಡಿಕೇರಿ, ಜೂ. ೩: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯದಲ್ಲಿ ಜಿಲ್ಲೆಗಳ ಉಸ್ತುವಾರಿ ಸಚಿವರುಗಳನ್ನು ಬದಲಾವಣೆ ಮಾಡುವ ಸಾಧ್ಯತೆಗಳಿವೆ.

ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರ ಬದಲಾವಣೆ ಪಟ್ಟಿಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಬೋಸರಾಜ್ ಅವರ ಹೆಸರು ಕೂಡ ಕೇಳಿ ಬರುತ್ತಿವೆ.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಚ್ಚರಿಯಾಗಿ ಸಚಿವ ಸ್ಥಾನ ಗಿಟ್ಟಿಸಿದ ಎನ್. ಎಸ್. ಬೋಸರಾಜ್ ಅವರು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು. ನಂತರ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದರು.

ವಿಧಾನಪರಿಷತ್ ಸಭಾ ನಾಯಕರಾಗಿ ಕೂಡ ನೇಮಕವಾಗಿದ್ದರು. ಎನ್. ಎಸ್. ಬೋಸರಾಜ್ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನದ ಅವಧಿ ಜೂನ್ ೧೭ಕ್ಕೆ ಮುಕ್ತಾಯಗೊಳ್ಳಲಿದೆ. ಇದೀಗ ಅವರು ಮತ್ತೆ ಸ್ಪರ್ಧಿಸಲು ಕಾಂಗ್ರೆಸ್‌ನಿAದ ಆಯ್ಕೆಗೊಂಡಿದ್ದಾರೆ.

ಜೂನ್ ೧೩ರಂದು ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಎನ್.ಎನ್. ಬೋಸರಾಜ್ ಅವರು ಆಯ್ಕೆಯಾಗುವುದು ನಿಶ್ಚಿತ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತಾತ್ಮಕ ಯಂತ್ರಕ್ಕೆ ಚುರುಕು ನೀಡಲು ಹಾಗೂ ಕೆಲವು ಉಸ್ತುವಾರಿ ಸಚಿವರ ಕಾರ್ಯವೈಖರಿಯನ್ನು ಗಮನಿಸಿ ಉಸ್ತುವಾರಿ ಸಚಿವರ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಎನ್. ಎಸ್. ಬೋಸರಾಜ್ ಮೂಲತಃ ರಾಯಚೂರು ಜಿಲ್ಲೆಯವರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಬಹುತೇಕ ಸಚಿವರುಗಳು ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನವನ್ನು ವಹಿಸಿಕೊಳ್ಳಲು ಹಿಂದೇಟು ಹಾಕಿದ್ದರು.

ಎನ್. ಎಸ್. ಬೋಸರಾಜ್ ಅವರು ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ ಅಚ್ಚರಿ ಎಂಬAತೆ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಳೆದ ವರ್ಷ ನೇಮಕಗೊಂಡಿದ್ದರು. ಆದರೆ ಆರಂಭದಲ್ಲಿ ಅವರು ಕೊಡಗು ಜಿಲ್ಲೆಯಲ್ಲಿ ಆ್ಯಕ್ಟೀವ್ ಕಂಡರೂ ಕೂಡ ನಂತರದಲ್ಲಿ ಬೆಂಗಳೂರಿನಲ್ಲಿ ಕುಳಿತು ಪತ್ರಿಕಾ ಪ್ರಕಟಣೆ ಹಾಗೂ ಕೊಡಗು ಜಿಲ್ಲೆಯಲ್ಲಿ ಕೆಡಿಪಿ ಸಭೆಗೆ ಮಾತ್ರ ಸೀಮಿತಗೊಂಡಿದ್ದಾರೆ.

ರಾಯಚೂರು ಜಿಲ್ಲೆಯ ರಾಜಕೀಯದಲ್ಲಿ ಬಹಳ ಹಿಡಿತವಿರುವ ಎನ್. ಎಸ್. ಬೋಸರಾಜ್ ಅವರು, ಅದೇ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಲು ಆಸಕ್ತಿ ತೋರಿದ್ದಾರೆ.

ಕಾಂಗ್ರೆಸ್ ಶಾಸಕರೇ ಇರುವುದರಿಂದ ಹಿಂದೇಟು !

ಕೊಡಗು ಜಿಲ್ಲೆಯಲ್ಲಿ ಎರಡೂವರೆ ದಶಕಗಳ ಬಳಿಕ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದಾರೆ. ಅದಲ್ಲದೆ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿರುವ ಅವಧಿಯಲ್ಲಿಯೇ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಬಂದಿದೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನವನ್ನು ನೀಡಿ, ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಹಲವು ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ಕಾಂಗ್ರೆಸ್ ಸಚಿವ ಸ್ಥಾನಕ್ಕೆ ಮಣೆ ಹಾಕಿರುವುದರಿಂದ ಎ.ಎಸ್. ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ಕೈ ತಪ್ಪಿತ್ತು.

ಪ್ರಸ್ತುತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ, ಚಾಮರಾಜನಗರ ಉಸ್ತುವಾರಿ ಸಚಿವ ಹೆಚ್. ವೆಂಕಟೇಶ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರುಗಳನ್ನು ಬದಲಾಯಿಸುವ ಸಾಧ್ಯತೆಗಳಿವೆ.

ಎನ್. ಎಸ್. ಬೋಸರಾಜ್ ಅವರನ್ನು ಕೊಡಗು ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಬದಲಾಯಿಸಿದರೆ, ಕೊಡಗಿನ ಉಸ್ತುವಾರಿ ಸ್ಥಾನ ಯಾರ ಪಾಲಾಗಲಿದೆ ಎಂಬುದು ಸದ್ಯಕ್ಕೆ ಅನಿರ್ಧರಿತ !

-ಕೆ. ಎಂ. ಇಸ್ಮಾಯಿಲ್ ಕಂಡಕರೆ