ಕುಶಾಲನಗರ, ಜೂ. ೩: ದುರ್ಬಲ ಮನಸ್ಸು ಮತ್ತು ವ್ಯಕ್ತಿತ್ವ ಮನುಷ್ಯನಲ್ಲಿ ದುಶ್ಚಟ ಬೆಳೆಯಲು ಪ್ರಮುಖ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಫಾಯಸ್ ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ.

ವಿಶ್ವ ತಂಬಾಕು ವಿರೋಧಿ ದಿನಾಚರಣೆ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಚಿಕ್ಕ ಅಳುವಾರದ ಕೊಡಗು ವಿಶ್ಚವಿದ್ಯಾಲಯ ಕ್ಯಾಂಪಸ್ ನಲ್ಲಿ ಏರ್ಪಡಿಸಿದ್ದ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳನ್ನು ಬೆಳೆಸುವುದು ಸೂಕ್ಷ್ಮ ಕಲೆಯಾಗಿದೆ. ಮನೆಯಿಂದ ಸಂಸ್ಕಾರ ಪ್ರಾರಂಭವಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಮನೆಯ ವಾತಾವರಣವೇ ಬದಲಾಗಿದೆ.

ಮನೆಯ ವಾತಾವರಣ ಸರಿ ಇಲ್ಲದಾಗ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ಮಾದಕ ವಸ್ತುಗಳು ಸಿಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ವಿ.ವಿ. ಕುಲಸಚಿವ ಡಾ. ಸೀನಪ್ಪ ಮಾತನಾಡಿ ಮಕ್ಕಳನ್ನು ಸುಂಸ್ಕೃತರನ್ನಾಗಿ ಮಾಡಲು ಒಳ್ಳೆಯ ಮನೆ ವಾತಾವರಣ, ಉತ್ತಮ ಶಿಕ್ಷಣ ಕೇಂದ್ರ ಇದ್ದರೆ ಸಾಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಂ ಬಿ ಅಭಿಮನ್ಯು ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವ ಜನಾಂಗದಿAದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಮಾನಸಿಕ ಪರಿವರ್ತನೆ ಮೂಲಕ ಮಾದಕ ವಸ್ತುಗಳ ನಿಯಂತ್ರಣ ಸಾಧ್ಯ ಎಂದ ಅವರು ತಾತ್ಕಾಲಿಕ ಮೋಜಿಗೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು. ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ಹರೀಶ್ ಆಚಾರ್ಯ, ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಲೀಲಾವತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ. ಟ್ರಸ್ಟ್ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಹೆಚ್. ರೋಹಿತ್, ಶನಿವಾರಸಂತೆ ವಲಯ ಮೇಲ್ವಿಚಾರಕ ನಾಗರಾಜ್, ಪತ್ರಕರ್ತ ಸಂಘದ ಪದಾಧಿಕಾರಿಗಳಾದ ಸುನಿಲ್ ಪೊನ್ನೆಟ್ಟಿ, ಕುಡೆಕಲ್ ಗಣೇಶ್, ವನಿತಾ ಚಂದ್ರಮೋಹನ್, ಟಿ. ಆರ್. ಪ್ರಭುದೇವ್, ಕೆ. ಎಸ್. ಷಂಶುದ್ದೀನ್, ಸದಸ್ಯರು ಇದ್ದರು. ವಿದ್ಯಾರ್ಥಿಗಳಾದ ಅಮೃತ್ ರಾಜ್ ಮತ್ತು ತಂಡ ಪ್ರಾರ್ಥಿಸಿ, ಯೋಜನಾಧಿಕಾರಿ ಹೆಚ್, ರೋಹಿತ್ ಸ್ವಾಗತಿಸಿದರು. ಉಪನ್ಯಾಸಕ ಡಾ. ಜಮೀರ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಡಾ. ರಮೇಶ್ ಬಿ. ಆರ್. ವಂದಿಸಿದರು.