ಆಂಧ್ರಪ್ರದೇಶದಲ್ಲಿ ಟಿ.ಡಿ.ಪಿ.ಗೆ ಅಧಿಕ ಸ್ಥಾನ
ಆಂಧ್ರಪ್ರದೇಶ, ಜೂ. ೪: ಆಂಧ್ರಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಟಿ.ಡಿ.ಪಿ. ಅಧಿಕ ಸ್ಥಾನಗಳಿಸಿದೆ. ಒಟ್ಟು ೧೭೫ ಕ್ಷೇತ್ರಗಳಲ್ಲಿ ಟಿ.ಡಿ.ಪಿ. ೧೪೪ ಸ್ಥಾನಗಳಿಸಿದ್ದು, ಆಡಳಿತದಲ್ಲಿದ್ದ ವೈ.ಎಸ್.ಆರ್.ಪಿ. ಕೇವಲ ೧೦ ಸ್ಥಾನಗಳೊಂದಿಗೆ ನೆಲಕಚ್ಚಿದೆ. ಜೆಎಸ್ಪಿ ೨೧ ಸ್ಥಾನಗಳಲ್ಲಿ ಜಯಗಳಿಸಿದ್ದು, ಕಾಂಗ್ರೆಸ್ಗೆ ಒಂದು ಸ್ಥಾನವೂ ಲಭ್ಯವಾಗಿಲ್ಲ.
ತಲೆಕೆಳಗಾದ ಸಮೀಕ್ಷೆ-ಕಣ್ಣೀರಿಟ್ಟ ಮುಖ್ಯಸ್ಥ ಪ್ರದೀಪ್ ಗುಪ್ತಾ
ನವದೆಹಲಿ, ಜೂ. ೪: ಹಾಲಿ ಲೋಕಸಭಾ ಚುನಾವಣೆಯ ಫಲಿ ತಾಂಶದಲ್ಲಿ ಎಲ್ಲ ಎಕ್ಸಿಟ್ ಪೋಲ್ಗಳ ಸಮೀಕ್ಷಾ ವರದಿ ತಲೆಕೆಳಗಾಗಿದ್ದು, ಇದೇ ವಿಚಾರವಾಗಿ ಆಕ್ಸಿಸ್ ಮೈ ಇಂಡಿಯಾ ಮುಖ್ಯಸ್ಥ ಪ್ರದೀಪ್ ಗುಪ್ತಾ ಲೈವ್ನಲ್ಲೇ ಕಣ್ಣೀರು ಹಾಕಿದ್ದಾರೆ. ಹಾಲಿ ಲೋಕಸಭಾ ಚುನಾವಣಾ ಫಲಿತಾಂಶ ಬಹುತೇಕ ಎಲ್ಲ ಎಕ್ಸಿಟ್ ಪೋಲ್ ಸಮೀಕ್ಷೆಗಳ ವರದಿಗಳನ್ನು ತಲೆಕೆಳಗಾಗುವಂತೆ ಮಾಡಿದ್ದು, ಎನ್ಡಿಎ ಮೈತ್ರಿಕೂಟಕ್ಕೆ ಭರ್ಜರಿ ಬಹುಮತ ನೀಡಿದ್ದ ಸಮೀಕ್ಷಾ ಸಂಸ್ಥೆಗಳು ಇದೀಗ ತಲೆ ಮೇಲೆ ಕೈಹೊತ್ತು ಕುಳಿತಿವೆ. ಇದೇ ವಿಚಾರವಾಗಿ ಇದೀಗ ಆಕ್ಸಿಸ್ ಮೈ ಇಂಡಿಯಾ ಮುಖ್ಯಸ್ಥ ಪ್ರದೀಪ್ ಗುಪ್ತಾ ಲೈವ್ನಲ್ಲೇ ಕಣ್ಣೀರು ಹಾಕಿದ್ದಾರೆ. ತಮ್ಮ ಸಂಸ್ಥೆ ನೀಡಿದ್ದ ಎಕ್ಸಿಟ್ ಪೋಲ್ ಸಮೀಕ್ಷಾ ವರದಿಗೂ ಹಾಲಿ ಚುನಾವಣಾ ಫಲಿತಾಂಶಕ್ಕೂ ಅಜಗಜಾಂತರ ವ್ಯತ್ಯಾಸ ತೋರಿಸುತ್ತಿದ್ದು, ಇದರಿಂದ ಭಾವೋದ್ವೇಗಕ್ಕೆ ಒಳಗಾದ ಪ್ರದೀಪ್ ಗುಪ್ತಾ ಟಿವಿ ಚಾನೆಲ್ ಲೈವ್ ನಲ್ಲೇ ಕಣ್ಣೀರು ಹಾಕಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾ ತರೇಹವಾರಿ ಸಾಲುಗಳೊಂದಿಗೆ ವೈರಲ್ ಆಗುತ್ತಿದೆ. ಆಕ್ಸಿಸ್ ಮೈ ಇಂಡಿಯಾ ತನ್ನ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿತ್ತು. ಎನ್ಡಿಎ ೩೬೧-೪೦೧ ಸ್ಥಾನ ಮತ್ತು ಇಂಡಿಯಾ ಬ್ಲಾಕ್ ೧೩೧-೧೬೬ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಯಿದೆ. ಇತರರು ೮ ರಿಂದ ೨೦ ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ ಎಂದು ಹೇಳಿತ್ತು.
ಇಸ್ರೇಲ್ ಪಾಸ್ಪೋರ್ಟ್ ಹೊಂದಿರುವವರಿಗೆ ಮಾಲ್ಡೀವ್ಸ್ ನಿರ್ಬಂಧ!
ಮಾಲ್ಡೀವ್ಸ್, ಜೂ. ೪: ಇಸ್ರೇಲ್ ಪಾಸ್ಪೋರ್ಟ್ಗೆ ಮಾಲ್ಡೀವ್ಸ್ನಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಈ ಪಾಸ್ಪೋರ್ಟ್ಗಳನ್ನು ಹೊಂದಿದವರಿಗೆ ಮಾಲ್ಡೀವ್ಸ್ ಪ್ರವೇಶ ಸಾಧ್ಯವಾಗುವುದಿಲ್ಲ. ಗಾಜಾದಲ್ಲಿ ಇಸ್ರೇಲ್- ಹಮಾಸ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆಯುತ್ತಿದ್ದು, ಇಸ್ರೇಲ್ ವಿರುದ್ಧ ಹಲವೆಡೆ ತೀವ್ರ ಅಸಮಾಧಾನ ವ್ಯಕ್ತವಾಗತೊಡಗಿದೆ. ಮಾಲ್ಡೀವ್ಸ್ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಜು, ಕ್ಯಾಬಿನೆಟ್ನ ಶಿಫಾರಸನ್ನು ಆಧರಿಸಿ ಇಸ್ರೇಲ್ ಪಾಸ್ಪೋರ್ಟ್ಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅಧ್ಯಕ್ಷರ ಕಚೇರಿ ಹೇಳಿಕೆಯ ಮೂಲಕ ತಿಳಿದುಬಂದಿದೆ. ಆದರೆ ಈವರೆಗೂ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಇಸ್ರೇಲಿ ಪಾಸ್ಪೋರ್ಟ್ ಹೊಂದಿರುವವರು ದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಅಗತ್ಯ ಕಾನೂನುಗಳನ್ನು ತಿದ್ದುಪಡಿ ಮಾಡಲು ಮತ್ತು ಈ ಪ್ರಯತ್ನಗಳ ಮೇಲ್ವಿಚಾರಣೆಗೆ ಉಪಸಮಿತಿಯನ್ನು ಸ್ಥಾಪಿಸಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ. ಮುಯಿಝು ಪ್ಯಾಲೆಸ್ಟೀನಿಯನ್ನರನ್ನು ಬೆಂಬಲಿಸಲು ಮತ್ತು "ಪ್ಯಾಲೆಸ್ತೀನ್ನೊಂದಿಗೆ ಐಕಮತ್ಯದಲ್ಲಿ ಮಾಲ್ಡೀವಿಯನ್ಸ್" ಎಂಬ ರಾಷ್ಟçವ್ಯಾಪಿ ರ್ಯಾಲಿಯನ್ನು ನಡೆಸಲು ರಾಷ್ಟ್ರೀಯ ನಿಧಿಸಂಗ್ರಹಣೆ ಅಭಿಯಾನವನ್ನು ಘೋಷಿಸಿದ್ದಾರೆ. ಇಸ್ರೇಲಿ ಪಾಸ್ಪೋರ್ಟ್ ಹೊಂದಿರುವವರನ್ನು ನಿಷೇಧಿಸುವ ನಿರ್ಧಾರ ಗಾಜಾದಲ್ಲಿ ಇಸ್ರೇಲ್ನ ನಡೆಯುತ್ತಿರುವ ಯುದ್ಧದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿದ್ದು, ವಿರೋಧ ಪಕ್ಷಗಳು ಮತ್ತು ಸರ್ಕಾರದಲ್ಲಿರುವ ಅವರ ಮಿತ್ರಪಕ್ಷಗಳಿಂದ ಅಧ್ಯಕ್ಷ ಮುಯಿಝು ಅವರ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ ಮಾಲ್ಡೀವ್ಸ್ ಸರ್ಕಾರದ ಮುಖ್ಯಸ್ಥರು ಈ ರೀತಿಯ ನಿರ್ಧಾರ ಕೈಗೊಂಡಿದ್ದಾರೆ. ಒಂದು ವಾರದ ಹಿಂದೆ ರಾಫಾದಲ್ಲಿನ ಟೆಂಟ್ ಕ್ಯಾಂಪ್ನಲ್ಲಿ ೪೫ ಜನರನ್ನು ಕೊಂದ ಇಸ್ರೇಲಿ ವೈಮಾನಿಕ ದಾಳಿಯನ್ನು ಮುಯಿಝು ಖಂಡಿಸಿದ ಕೆಲವೇ ದಿನಗಳ ನಂತರ ಈ ನಿಷೇಧದ ನಿರ್ಧಾರ ಪ್ರಕಟಿಸಿದ್ದಾರೆ. ಈ ನಡುವೆ ನಿಷೇಧದ ನಂತರ, ಇಸ್ರೇಲಿ ವಿದೇಶಾಂಗ ಸಚಿವಾಲಯ ತನ್ನ ನಾಗರಿಕರಿಗೆ ಮಾಲ್ಡೀವ್ಸ್ಗೆ ಪ್ರಯಾಣಿಸದಂತೆ ಶಿಫಾರಸು ಮಾಡಿದೆ.
೧೭ ಜಿಲ್ಲೆಗಳಿಗೆ ಭರ್ಜರಿ ಮಳೆ, ‘ಯೆಲ್ಲೋ ಅಲರ್ಟ್'
ಬೆಂಗಳೂರು, ಜೂ. ೪: ಕರ್ನಾಟಕ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶವಾಗಿದೆ. ಇದರ ಬೆನ್ನಲ್ಲೇ ಭರ್ಜರಿ ಮಳೆ ಸುರಿಯುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯು ಮುಂದಿನ ೫ ದಿನಗಳ ಕಾಲ ಭಾರೀ ಮಳೆ ಬರುವ ೧೭ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್' ಎಚ್ಚರಿಕೆ ಘೋಷಿಸಿದೆ. ಮೇ ಅಂತ್ಯಕ್ಕೆ ಕೇರಳ ಪ್ರವೇಶಿದ ಮುಂಗಾರು ಕರ್ನಾಟಕ ರಾಜ್ಯಾದ್ಯಂತ ಪಸರಿಸಿದ ಕಾರಣ, ಒಣ ಹವೆಯ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಧಾರಾಕಾರ ಮಳೆ ನಿರೀಕ್ಷೆ ಇದೆ. ಮುಂದಿನ ಐದು ದಿನಗಳ ಕಾಲ ಬಹುತೇಕ ಅರ್ಧ ರಾಜ್ಯಕಿಂತಲೂ ಹೆಚ್ಚಿನ ಭಾಗದಲ್ಲಿ ಭಾರೀ ಮಳೆ ಅಂದರೆ ೬ ಸೆಂಟಿಮೀಟರ್ನಿAದ ೧೧ ಸೆಂಟಿಮೀಟರ್ವರೆಗೆ ಮಳೆ ಆಗಲಿದೆ. ಕೆಲವು ಜಿಲ್ಲೆಗಳಲ್ಲಿ ನಿರಂತರ ಐದು ದಿನ ಮಳೆ ಬರದೆ, ದಿನ ಬಿಟ್ಟು ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕ ಕರಾವಳಿ ಭಾಗದಲ್ಲಿ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ, ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ವಿಜಯಪುರ, ಹಾವೇರಿ, ಗದಗ, ಕೊಪ್ಪಳ, ಬೀದರ್, ರಾಯಚೂರು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಗುಡುಗು, ಮಿಂಚು ಸಮೇತ ಅತ್ಯಧಿಕ ಮಳೆ ಆಗಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ ಐದು ದಿನ ‘ಹಳದಿ ಎಚ್ಚರಿಕೆ' ಕೊಡಲಾಗಿದೆ. ಇನ್ನೂ ೧೭ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ೧೩ ಜಿಲ್ಲೆಗಳಲ್ಲಿ ಆಗಾಗ ಹಗುರದಿಂದ ಸಾಧಾರಣವಾಗಿ ಮಳೆ ಬರುವ ಸಾಧ್ಯತೆಗಳು ಇವೆ. ಇನ್ನೂ ಕೆಲವೆಡೆ ತುಂತುರು ಮಳೆ ಬರಬಹುದು. ಈ ಮೂಲಕ ರಾಜ್ಯವ್ಯಾಪಿ ಮುಂಗಾರು ಮಳೆಯ ಸಿಂಚನವಾಗಲಿದೆ.