ನ್ಯಾಯಾಧೀಶರಾದ ಎಸ್. ಸುಜಾತ
ವೀರಾಜಪೇಟೆ, ಜೂ. ೪: ಯುವಜನತೆ ದುಶ್ಚಟಗಳನ್ನು ದೂರ ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ೨ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶೆ ಎಸ್. ಸುಜಾತ ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಶಾ ಕಾರ್ಯಕರ್ತೆಯರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ನ್ಯಾಯಾಲಯದ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ದುಶ್ಚಟಗಳಿಗೆ ಮಕ್ಕಳು ಬಲಿಯಾಗದಂತೆ ಅಂಗಡಿ ಮಳಿಗೆಗಳಲ್ಲಿಯೂ ತಂಬಾಕು ದುಷ್ಪರಿಣಾಮಗಳ ಬಗ್ಗೆ ನಾಮಫಲಕ ಅಳವಡಿಸಲಾಗಿದೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ನ್ಯಾಯಾಲಯದಿAದ ಹೊರಟ ಜಾಥಾ ಕಾರು ನಿಲ್ದಾಣ ಗಡಿಯಾರ ಕಂಬದ ಮೂಲಕ ಮೂರ್ನಾಡು ರಸ್ತೆಗಾಗಿ, ದೊಡ್ಡಟ್ಟಿ ಚೌಕಿ ನಂತರ ಖಾಸಗಿ ಬಸ್ ನಿಲ್ದಾಣಕ್ಕೆ ತಲುಪಿತು. ಅಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂತೋಷ ಕೊಠಾರಿ ಅವರು ಮಾತನಾಡಿ, ತಂಬಾಕು ಸೇವನೆಯಿಂದ ಯುವಕರು ತಮ್ಮ ಜೀವವನ್ನು ಹಾಳು ಮಾಡಿಕೊಳ್ಳಬಾರದು. ಮಕ್ಕಳು ತಂಬಾಕು ಸೇವನೆಯಿಂದ ದೂರವಿದ್ದು, ಉತ್ತಮ ಜೀವನವನ್ನು ರೂಪಿಸಿಕೊಳ್ಳುವಂತಾಗಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಯತಿರಾಜ್ ಮಾತನಾಡಿ, ತಂಬಾಕು ದುಷ್ಪರಿಣಾಮದ ಬಗ್ಗೆ ೧೯೮೭ರಿಂದ ಕ್ರಮ ಕೈಗೊಂಡು ಪ್ರತಿ ವರ್ಷ ಮೇ,೩೧ ರಂದು ತಂಬಾಕು ರಹಿತ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಜಾಥಾ ಕಾರ್ಯಕ್ರಮದಲ್ಲಿ ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಕೊಕ್ಕಂಡ ಅಪ್ಪಣ್ಣ, ಅಪರ ಸಿವಿಲ್ ನ್ಯಾಯಾಧೀಶ ಪ್ರದೀಪ ಪೋತದಾರ್, ಸರಕಾರಿ ಆಸ್ಪತ್ರೆಯ ದಂತ ವೈದ್ಯ ಸುನೀಲ್ ಹಾಗೂ ನ್ಯಾಯಾಲಯದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.