ಚೆಯ್ಯಂಡಾಣೆ, ಜೂ. ೪: ಯಾವುದೇ ಸಂಘ ಸಂಸ್ಥೆಗಳು ಬಲವರ್ಧನೆ ಆಗಬೇಕಾದರೆ ಸಂಘದಲ್ಲಿರುವ ಸರ್ವ ಸದಸ್ಯರ ಸಹಕಾರ ಅಗತ್ಯ ಎಂದು ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಕೆ.ಎಸ್. ರಮೇಶ್ ಹೇಳಿದರು. ನಾಪೋಕ್ಲುವಿನ ಹಿಂದೂ ಮಲಯಾಳಿ ಸಂಘದ ವತಿಯಿಂದ ಹಳೇ ತಾಲೂಕು ಶ್ರೀ ಭಗವತಿ ಸಮುದಾಯ ಭವನದಲ್ಲಿ ಆಯೋಜಿಸಲಾದ ವಿಶು ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ ೧೫ ಹಿಂದೂ ಮಲಯಾಳಿ ಸಂಘವನ್ನು ಸ್ಥಾಪಿಸಲಾಗಿದೆ. ಪ್ರಥಮ ಬಾರಿ ನಾಪೋಕ್ಲುವಿನಲ್ಲಿ ವಿಷು ಸಂಭ್ರಮಾಚರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.ನಮಗೆ ಅನ್ನ ನೀಡುತ್ತಿರುವ ಭಾಷೆ ಕನ್ನಡ, ನಮ್ಮ ಮಾತೃಭಾಷೆ ಮಲಯಾಳಂ ಆಗಿದೆ ಆದ್ದರಿಂದ ನಮ್ಮ ಮಾತೃಭಾಷೆಗೆ ನೀಡುವ ಗೌರವ, ಪ್ರಾಮುಖ್ಯತೆಯನ್ನು ಕನ್ನಡ ಭಾಷೆಗೂ ನೀಡಬೇಕು ಎಂದರು. ಹಿಂದೂ ಮಲಯಾಳಿ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಸುಮಿತ್ರ ವಿನೋದ್ ಮಾತನಾಡಿ, ಎಲ್ಲಾ ಸಂಘ ಸಂಸ್ಥೆಯಲ್ಲೂ ಭಿನ್ನಾಭಿಪ್ರಾಯ ಅಪಪ್ರಚಾರ ಸಹಜ ಅದಕ್ಕೆಲ್ಲ ಸದಸ್ಯರು ಕಿವಿಗೊಡದೆ ಎಲ್ಲರೂ ಕೂಡ ಸಂಘದ ಬೆಳವಣಿಗೆಗೆ ಶ್ರಮಿಸಬೇಕು ಎಂದರು.

ಎಸ್.ಎನ್.ಡಿ.ಪಿ ಸಂಘಟನೆ ಅಧ್ಯಕ್ಷ ಟಿ.ಆರ್.ವಾಸುದೇವ್ ಮಾತನಾಡಿ ಸಂಘದಲ್ಲಿ ಪುರುಷರಿಗೂ ಮಹಿಳೆಯರಿಗೂ ಕೂಡ ಸಮಾನ ಅವಕಾಶ ನೀಡಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ನಾಫೋಕ್ಲು ಗ್ರಾಮ ಪಂಚಾಯತಿ ಸದಸ್ಯ ಬಿ.ಎಂ. ಪ್ರತೀಪ್, ನಾಪೋಕ್ಲು ಶೌರ್ಯ ತಂಡದ ಅಧ್ಯಕ್ಷೆ ಬಾಳೆಯಡ ದಿವ್ಯ ಮಂದಪ್ಪ,ನಾಪೋಕ್ಲು ಶ್ರೀಪೊನ್ನು ಮುತ್ತಪ್ಪ ದೇವಾಲಯದ ಅಧ್ಯಕ್ಷ ಎ.ಕೆ. ಚಂದ್ರನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಅನಿಲ್ ಮಾತನಾಡಿ ನಮ್ಮ ಸಮಾಜದ ಆಚಾರ ವಿಚಾರಗಳು ಉಳಿಯಬೇಕಾದರೆ ಈ ರೀತಿಯ ಕಾರ್ಯಕ್ರಮಗಳು ನಡೆಯಬೇಕು ಎಂದರು. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯ ಮಹಿಳೆಯರಿಂದ ತಿರುವಾದಿರ ನೃತ್ಯ, ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಸ್ನೇಹ ಮತ್ತು ದೀಕ್ಷಾ ಹಾಗೂ ನಾಪೋಕ್ಲು ಶೌರ್ಯ ವಿಪತ್ತು ತಂಡದ ಸದಸ್ಯರನ್ನು ಹಿಂದೂ ಮಲಯಾಳಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಅಭಿಲಾಷ್, ಮಹಿಳಾ ಉಪಾಧ್ಯಕ್ಷೆ ಅಂಬಿಕಾ, ಸಂಘಟನಾ ಕಾರ್ಯದರ್ಶಿ ಚೇತನ್, ಶ್ರೀ ಪೂನ್ನು ಮುತ್ತಪ್ಪ ದೇವಾಲಯದ ಸಹ ಕಾರ್ಯದರ್ಶಿ ತಂಗ, ಮಹಿಳಾ ಸಂಘಟನೆ ಕಾರ್ಯದರ್ಶಿ ಗೀತಾ, ಖಜಾಂಜಿ ರಾಮೇಂದ್ರ, ಕಾರ್ಯದರ್ಶಿ ಸುಧಾ ಬಾಲಕೃಷ್ಣ, ಸಹ ಕಾರ್ಯದರ್ಶಿ ಪ್ರಸಾದ್,ಮಹಿಳಾ ಸಹ ಕಾರ್ಯದರ್ಶಿ ಪ್ರಮೀಳಾ, ಸೇರಿದಂತೆ ಮತ್ತಿತರ ಪ್ರಮುಖರು, ಸದಸ್ಯರು ಮತ್ತಿತರರು ಹಾಜರಿದ್ದರು. ಗೀತಾ ರಿತೇಶ್ ನಿರೂಪಿಸಿದರು.ಶೈಲಜಾ ಚಂದ್ರ ಸ್ವಾಗತಿಸಿ, ಪ್ರಸಾದ್ ವಂದಿಸಿದರು.