ಸಿದ್ದಾಪುರ, ಜೂ. ೪: ಅಭಿವೃದ್ಧಿ ಕಾಣದ ರಸ್ತೆಯಲ್ಲಿ ಸಂಕಷ್ಟದ ನಡಿಗೆಯೊಂದಿಗೆ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ತೆರಳಲು ಹರಸಹಾಸಪಡಬೇಕಾದ ಪರಿಸ್ಥಿತಿ ಇಲ್ಲಿನ ನಿವಾಸಿಗಳಿಗೆ ನಿತ್ಯ ಕಾಯಕವಾಗಿದೆ.

ಕಾಡುಪ್ರಾಣಿಗಳ ಭಯದ ನಡುವೆ ಬದುಕು ಸಾಗಿಸುತ್ತಿರುವ ಗ್ರಾಮೀಣ ಭಾಗದ ಜನರು ನಡೆದಾಡಲು ಸೂಕ್ತ ರಸ್ತೆಗಳು ಇಲ್ಲದೆ ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸುವAತಾಗಿದೆ. ಹಲವಾರು ವರ್ಷಗಳಿಂದಲೂ ರಸ್ತೆ ಅಭಿವೃದ್ಧಿ ಕಾಣದ ಕುಗ್ರಾಮಕ್ಕೆ ಯಾವುದೇ ಬಸ್ಸುಗಳ ಓಡಾಟವಿಲ್ಲದೆ ಖಾಸಗಿ ಬಾಡಿಗೆ ವಾಹನಗಳು ಗ್ರಾಮಕ್ಕೆ ಬರಲು ಭಯಪಡುತ್ತಾರೆ. ತುರ್ತು ಸಂದರ್ಭಗಳಲ್ಲಿ ದುಬಾರಿ ಹಣ ನೀಡಿ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಹಲವು ವರ್ಷಗಳಿಂದ ರಸ್ತೆ ಅಭಿವೃದ್ಧಿ ಕಾಣದ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಯ್ಯ ಶಾಲೆಯಿಂದ ಕಣ್ಣಂಗಾಲ ಸಂಪರ್ಕ ಸೇತುವೆ ರಸ್ತೆಯವರೆಗೆ ಗುಂಡಿಗಳಾಗಿ ಪರಿವರ್ತನೆಯಾಗಿದ್ದು, ರಸ್ತೆ ಡಾಮರೀಕರಣ ಕಾಣದೆ ಕಲ್ಲುಗಳು ಎದ್ದು ಹೋಗಿವೆ. ಇಳಿಜಾರಿನ ರಸ್ತೆಯಲ್ಲಿ ಸಾರ್ವಜನಿಕರು ವಾಹನ ಸವಾರರು ಸಂಚರಿಸಲು ಹರಸಹಾಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲ ಸಂದರ್ಭದಲ್ಲಿ ಈ ಭಾಗದ ರಸ್ತೆಗಳು ಜಲಾವೃತಗೊಳ್ಳುತ್ತವೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ಹರಿಯುವುದರಿಂದ ಸಂಚಾರಕ್ಕೆ ತೊಡಕು ಉಂಟಾಗುತ್ತದೆ.

ಚುನಾವಣೆ ಬಂದ ಸಂದರ್ಭದಲ್ಲಿ ಕಾಟಾಚಾರಕ್ಕೆ ರಸ್ತೆ ಅಭಿವೃದ್ಧಿ ಮಾಡಿದರೆ ಚುನಾವಣೆ ನಂತರ ರಸ್ತೆ ಕಳಪೆಯೊಂದಿಗೆ ಸಂಪೂರ್ಣ ಕಿತ್ತು ಹೋಗುತ್ತದೆ. ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಪಂಚಾಯಿತಿ ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾಡು ಪ್ರಾಣಿಗಳ ಭಯದ ನಡುವೆ ಬಸ್ ಸಂಚಾರವಿಲ್ಲದ ಗ್ರಾಮದಲ್ಲಿ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆದಷ್ಟು ಬೇಗ ರಸ್ತೆ ಅಭಿವೃದ್ಧಿಪಡಿಸಬೇಕೆಂದು ಸ್ಥಳೀಯರಾದ ವಿಜು, ಮುರಳಿ, ಬಂಗಾರು, ಪ್ರಕಾಶ್, ಮಣಿಕಂಠ, ಸುರೇಶ್, ವಸಂತ ಒತ್ತಾಯಿಸಿದ್ದಾರೆ. -ಎಸ್.ಎಂ ಮುಬಾರಕ್