ಮೈಸೂರು, ಜೂ. ೪: ಕೊಡಗು ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸದಲ್ಲಿದ್ದ ಈರ್ವರು ಬಿಜೆಪಿ ಶಾಸಕರ ಸೋಲಿನ ಆಘಾತ ಇನ್ನೂ ಮಾಸಿಲ್ಲ. ಮಾಜೀ ಶಾಸಕರುಗಳ ಸಹಿತ, ಭಾರತೀಯ ಜನತಾ ಪಾರ್ಟಿಯ ಮುಖಂಡರುಗಳಿಗೆ ಯದುವೀರ್ ಅವರ ಗೆಲುವು ಬೂಸ್ಟರ್ ಡೋಸ್ ನೀಡಿದಂತಾಗಿದೆ.

ಕೊಡಗಿನ ಎರಡೂ ವಿಧಾನ ಸಭಾ ಕ್ಷೇತ್ರಗಳಲ್ಲಿ ಈ ಬಾರಿಯೂ ಬಿಜೆಪಿಗೆ ಹೆಚ್ಚಿನ ಮತಗಳು ಲಭಿಸಿದ್ದು, ಪಕ್ಷ ಸಂಘಟನೆ ಹಾಗೂ ಮುಂದಿನ ರಾಜಕೀಯದ ದೃಷ್ಟಿಯಿಂದ ಯದುವೀರ್ ಅವರ ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.

ವಿಧಾನಸಭಾ ಚುನಾವಣೆಯಲ್ಲಿ ಈರ್ವರ ಸೋಲಿನ ನಂತರ ಅಂದಿನ ಸಂಸದ ಪ್ರತಾಪ್ ಸಿಂಹ ಅವರು ತಿಂಗಳಿಗೆ ಎರಡು ಬಾರಿ ಕೊಡಗಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಬೆರೆಯುವ, ಸಮಸ್ಯೆಗಳನ್ನು ಆಲಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ನಂತರದ ದಿನಗಳಲ್ಲಿ ನೀಡಿದ್ದ ಭರವಸೆ ಈಡೇರಿಸುವಲ್ಲಿ ಯಶ ಕಂಡಿರಲಿಲ್ಲ. ತದ ನಂತರದ ದಿಢೀರ್ ಬೆಳವಣಿಗೆಯಲ್ಲಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿ ಮೈಸೂರು ಅರಮನೆಯ ಮಹಾರಾಜ ಯದುವೀರ್ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದು ಈಗ ಇತಿಹಾಸ.

ಇದೀಗ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯ ಗೆಲುವು ಸಹಜವಾಗಿ ಕಾರ್ಯಕರ್ತರು ಮಾತ್ರವಲ್ಲದೆ ಜಿಲ್ಲೆಯ ಬಿಜೆಪಿ ಮುಖಂಡರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಅರಮನೆಯಲ್ಲಿದ್ದ ಮಹಾರಾಜ ಇದೀಗ ಜನ ಸೇವಕರಾಗಿ ಆಯ್ಕೆಯಾಗಿದ್ದು, ಚೊಚ್ಚಲ ರಾಜಕೀಯ ರಂಗ ಪ್ರವೇಶದಲ್ಲಿಯೇ ಗೆದ್ದು ಬೀಗಿದ್ದಾರೆ. ಇದು ಮುಂದಿನ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ. ಯದುವೀರ್ ಅವರು ಕಾರ್ಯಕರ್ತರೊಂದಿಗೆ ಯಾವ ರೀತಿ ಬೆರೆಯಲಿದ್ದಾರೆ. ಸಂಸದರಾಗಿ ಕೊಡಗಿನ ಅಭಿವೃದ್ಧಿಗೆ ಯಾವ ಕೊಡುಗೆ ನೀಡುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಮೂಡಿಸಿದೆ.