ವೀರಾಜಪೇಟೆ, ಜೂ. ೪: ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಬಲ್ಲದು. ಶಿಕ್ಷಣ ಪಡೆದ ವ್ಯಕ್ತಿ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಬಲ್ಲ ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಡೊನೇರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಸುಣ್ಣದ ಬೀದಿ ಈದ್ಗಾ ಮೈದಾನದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ೧೦ ನೇ ವರ್ಷದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು ಪ್ರಪಂಚದಾದ್ಯAತ ಹಲವು ಹೆಸರಾಂತ ಉದ್ಯಮಿಗಳು ತಮ್ಮ ಅದಾಯವನ್ನು ಬಡ ಜನರ ಸೇವೆಗೆಂದು ಮುಡುಪಾಗಿಟ್ಟಿದ್ದಾರೆ. ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಎಲ್ಲಾ ಸೇವೆಗಳನ್ನು ನೀಡಲು ಶಕ್ತವಾಗಿರುವುದಿಲ್ಲ. ಅದರೇ ಸಂಘ ಸಂಸ್ಥೆಗಳು, ಕೆಲವು ವ್ಯಕ್ತಿಗಳು ಬಡ ಜನತೆಯ ಬಳಿ ತೆರಳಿ ಅವರ ಅಶೋತ್ತರಗಳನ್ನು ಪೂರೈಕೆ ಮಾಡಲು ಮುಂದಾಗುತ್ತದೆ. ಅದರಂತೆ ತಾನು ತನ್ನ ತಂದೆ ಮತ್ತು ತಾಯಿ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗಾಗಿ ಮೂರು ವರ್ಷದ ಅವಧಿಗೆ ವಿದ್ಯಾರ್ಥಿ ವೇತನ ನೀಡುತಿದ್ದೇನೆ ಎಂದರು.
ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ಉತ್ತಮ ಸಮಾಜಕ್ಕೆ ಶಿಕ್ಷಣ ಬಹು ಮುಖ್ಯ, ಬಡತನ ಒಂದು ಶಾಪವಲ್ಲ. ಶಿಕ್ಷಣ ಪಡೆದ ವ್ಯಕ್ತಿ ತಾನು ಅರಿತ ವಿದ್ಯೆಯಿಂದ ಗಳಿಕೆಯ ಮಾರ್ಗ ಕಂಡುಕೊAಡು ಸಿರಿವಂತನಾಗುತ್ತಾನೆ. ಸೇವೆಯು ಜೀವನದ ಒಂದು ಭಾಗವಾಗಬೇಕು ಎಂದರು.
ಸಂತ ಅನ್ನಮ್ಮ ದೇವಾಲಯದ ಧರ್ಮಗುರುಗಳಾದ ರೆ.ಫಾ. ಮೊದಲೈ ಮುತ್ತು ಮಾತನಾಡಿ ಶಿಕ್ಷಣಕ್ಕೆ ಮಹತ್ವ ನೀಡಿ ಉಚಿತ ನೋಟ್ ಪುಸ್ತಕ ವಿತರಣೆ ಮಾಡುತ್ತಿರುವುದು ಶ್ಲಾಘನೀಯ, ಉಚಿತವಾಗಿ ಪಡೆದ ನೋಟ್ ಪುಸ್ತಕ ಮತ್ತು ಇತರ ಪರಿಕರಗಳಿಂದ ಉತ್ತಮ ವಿದ್ಯಾಭ್ಯಾಸ ಪಡೆದು, ಸಮಾಜಕ್ಕೆ ಸೇವೆ ನೀಡುವಂತಾಗಬೇಕು ಎಂದು ಹೇಳಿದರು.
ವೀರಾಜಪೇಟೆ ಶಾಫಿ ಜುಮಾ ಮಸೀದಿ ಖತೀಬರಾದ ಹಾರಿಸ್ ಬಾಖವಿ ಮಾತನಾಡಿ, ಶಿಕ್ಷಣದ ಮಹತ್ವವನ್ನು ಅರಿತು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ನೀಡುತ್ತಿರುವ ಸಂಸ್ಥೆಯ ಸೇವೆಯು ನಿರಂತರವಾಗಿ ನಡೆಯಬೇಕು. ಜನಸಮಾನ್ಯರಿಗೆ ಮಾಡುವ ಸೇವೆಯಿಂದಲೇ ವ್ಯಕ್ತಿ ಉನ್ನತ್ತಿಯಾಗುತ್ತಾನೆ ಎಂದು ಹೇಳಿದರು. ಕಾರ್ಯಕ್ರಮ ಉದ್ದೇಶಿಸಿ ಲಿಟಲ್ ಸ್ಕಾರ್ಸ್ ಆಕಾಡೆಮಿಯ ಅಧ್ಯಕ್ಷರಾದ ಪೂಜ ರವೀಂದ್ರ, ಪುರಸಭೆಯ ಸದಸ್ಯ ಹೆಚ್.ಎಸ್. ಮತೀನ್, ಹಿರಿಯರಾದ ಮುಸ್ತಾಕ್ ಅಹಮ್ಮದ್ ಮಾತನಾಡಿದರು.
ಡೊನೇರ್ಸ್ ಚಾರಿಟೇಬಲ್ ಟ್ರಸ್ಟ್ನ ಗೌರವಾಧ್ಯಕ್ಷರು ಮತ್ತು ಪುರಸಭೆಯ ಸದಸ್ಯರಾದ ಮೊಹಮ್ಮದ್ ರಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು. ಡೊನೇರ್ಸ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಆಲೀರ ಪವಿಲ್ ಉಸ್ಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೀರಾಜಪೇಟೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು ೨೫೦ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳ ಕಿಟ್ ವಿತರಣೆ ಮಾಡಲಾಯಿತು. ಮುಸ್ತಾಕ್ ಅಹಮ್ಮದ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಾಫಿ ಜುಮಾ ಮಸೀದಿಯ ಅಧ್ಯಕ್ಷ ಕೆ.ಪಿ ರಶೀದ್ ಹಾಜಿ, ಆರ್.ಎಸ್.ಎಲ್ ಮಾಲೀಕರಾದ ರಶೀದ್, ಡಿ.ಸಿ.ಟಿ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ಫಾಯಿಝ್ ಎನ್.ಎಂ. ಉಪಸ್ಥಿತರಿದ್ದರು. ಡೊನೇರ್ಸ್ ಚಾರಿಟೇಬಲ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಇರ್ಷಾದ್ ಸ್ವಾಗತಿಸಿ, ಉಪಾಧ್ಯಕ್ಷ ಮೊಹಮ್ಮದ್ ರೆಜಿ ವಂದಿಸಿದರು. ಕಾರ್ಯಕ್ರಮದಲ್ಲಿ ಡೊನೇರ್ಸ್ ಚಾರಿಟೇಬಲ್ ಟ್ರಸ್ಟ್ನ ಪದಾಧಿಕಾರಿಗಳು. ಸದಸ್ಯರು, ವಿವಿಧ ಗ್ರಾಮ ಮತ್ತು ನಗರ ಪ್ರದೇಶಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.