೯ ಚಾರಣಿಗರ ದುರ್ಮರಣ:ಇಂದು ಬೆಂಗಳೂರಿಗೆ ಮೃತದೇಹ

ಬೆಂಗಳೂರು, ಜೂ. ೬: ಹವಾಮಾನ ವೈಪರೀತ್ಯದಿಂದಾಗಿ ಉತ್ತರಾಖಂಡದಲ್ಲಿ ಪ್ರಾಣ ಕಳೆದುಕೊಂಡ ಕರ್ನಾಟಕದ ಒಂಬತ್ತು ಚಾರಣಿಗರ ಮೃತದೇಹಗಳನ್ನು ಶುಕ್ರವಾರ ದೆಹಲಿ ಮೂಲಕ ಬೆಂಗಳೂರಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇ ೨೯ ರಂದು ಉತ್ತರಕಾಶಿಯಿಂದ ೩೫ ಕಿ.ಮೀ. ದೂರದ ಚಾರಣಕ್ಕೆ ೨೨ ಸದಸ್ಯರ ಟ್ರೆಕ್ಕಿಂಗ್ ತಂಡವನ್ನು ಮನೇರಿಯ ಹಿಮಾಲಯನ್ ವ್ಯೂ ಟ್ರೆಕ್ಕಿಂಗ್ ಏಜೆನ್ಸಿಯಿಂದ ಕಳುಹಿಸಲಾಗಿತ್ತು. ಈ ತಂಡದಲ್ಲಿ ಕರ್ನಾಟಕದ ೧೮ ಚಾರಣಿಗರು ಮತ್ತು ಮಹಾರಾಷ್ಟçದ ಓರ್ವರ ಜೊತೆಗೆ ಮೂವರು ಸ್ಥಳೀಯ ಮಾರ್ಗದರ್ಶಕರಿದ್ದರು. ಈ ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಡೆಹ್ರಾಡೂನ್ ವಿಮಾನ ನಿಲ್ದಾಣದಿಂದ ಎಲ್ಲಾ ಒಂಬತ್ತು ಮೃತದೇಹಗಳನ್ನು ಎಂಬಾಮಿAಗ್ ಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಎಂಬಾಮ್ ಮಾಡಿದ ನಂತರ ಮೃತ ದೇಹಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಆ್ಯಂಬ್ಯುಲೆನ್ಸ್ಗಳಲ್ಲಿ ಸಾಗಿಸ ಲಾಗುವುದು. ತಾ. ೭ ರಂದು ಬೆಳಿಗ್ಗೆ ದೆಹಲಿ-ಬೆಂಗಳೂರು ವಿಮಾನ ಗಳಲ್ಲಿ ಜಾಗವನ್ನು ಕಾಯ್ದಿರಿಸಲಾಗಿದೆ. ಮೃತರ ವಿವರಗಳನ್ನು ತಿಳಿಸುತ್ತೇವೆ ಎಂದು ತಿಳಿಸಿದ್ದಾರೆ. ಮಹಿಳೆಯರೂ ಸೇರಿದಂತೆ ಎಂಟು ಚಾರಣಿಗರನ್ನು ಬುಧವಾರ ರಕ್ಷಿಸಿ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ. ರಕ್ಷಿಸಲ್ಪಟ್ಟ ಐವರು ಚಾರಣಿಗರನ್ನು ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ಏರ್‌ಲಿಫ್ಟ್ ಮಾಡಲಾಗಿದೆ. ಬುಧವಾರ ಐವರು ಚಾರಣಿಗರ ಮೃತದೇಹಗಳನ್ನು ವಿಮಾನದಲ್ಲಿ ಉತ್ತರಕಾಶಿಗೆ ರವಾನಿಸಲಾಗಿದ್ದು, ಇಂದು ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ ಇನ್ನೂ ನಾಲ್ಕು ಮೃತದೇಹಗಳನ್ನು ಹೊರತೆಗೆದು ಉತ್ತರಕಾಶಿಗೆ ವಿಮಾನದ ಮೂಲಕ ರವಾನಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಕಸ್ಟಡಿ ಜೂ. ೧೦ ರವರೆಗೆ ವಿಸ್ತರಣೆ

ಬೆಂಗಳೂರು, ಜೂ. ೬: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅದನ್ನು ವೀಡಿಯೋ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಎಸ್‌ಐಟಿ ಕಸ್ಟಡಿ ಅವಧಿಯನ್ನು ಗುರುವಾರ ಕೋರ್ಟ್ ಜೂನ್ ೧೦ ರವರೆಗೆ ವಿಸ್ತರಿಸಿ ಆದೇಶಿಸಿದೆ. ಪ್ರಜ್ವಲ್ ರೇವಣ್ಣ ಅವರ ಕಸ್ಟಡಿ ಅವಧಿ ಇಂದು ಅಂತ್ಯಗೊAಡ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಆರೋಪಿ ಯನ್ನು ಇಂದು ಮಧ್ಯಾಹ್ನ ೩ ಗಂಟೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಇನ್ನಷ್ಟು ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಎಸ್‌ಐಟಿ ಪರ ವಕೀಲ ಅಶೋಕ್ ನಾಯಕ್ ಅವರು ಆರೋಪಿಯ ಕಸ್ಟಡಿ ವಿಸ್ತರಿಸುವಂತೆ ಮಾಡಿದ ಮನವಿ ಯನ್ನು ಪುರಸ್ಕರಿಸಿದ ಎಸಿಎಂಎA ೪೨ನೇ ನ್ಯಾಯಾಲಯದ ನಾಯಾಧೀಶ ಕೆ.ಎಂ. ಶಿವಕುಮಾರ್ ಅವರು ಪ್ರಜ್ವಲ್ ರೇವಣ್ಣ ಎಸ್‌ಐಟಿ ಕಸ್ಟಡಿ ಅವಧಿಯನ್ನು ತಾ. ೧೦ ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದರು.

ನಿಯಮಿತ ಆರೋಗ್ಯ ತಪಾಸಣೆ ಅತ್ಯಗತ್ಯ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜೂ. ೬: ದೈಹಿಕವಾಗಿ ಚಟುವಟಿಕೆ ಇಲ್ಲದೆ ಕುಳಿತವರಿಗೆ ಅನಾರೋಗ್ಯ ಹೆಚ್ಚು. ದೈಹಿಕ ಮತ್ತು ಮಾನಸಿಕ ಚಟುವಟಿಕೆ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಜೀವನಶೈಲಿ ಮತ್ತು ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ರಾಜ್ಯ ಸರ್ಕಾರ ಎಲ್ಲಾ ಜನ ವರ್ಗಕ್ಕೆ ಆರೋಗ್ಯ ಮತ್ತು ಅಗತ್ಯ ಚಿಕಿತ್ಸೆಗೆ ಒದಗಿಸಲು ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸಿ, ಜಾರಿ ಮಾಡುತ್ತಿದೆ ಎಂದರು. ಹಿಂದಿನವರ ಆರೋಗ್ಯ ಪದ್ಧತಿ ಮತ್ತು ಶ್ರಮಾಧಾರಿತ ಜೀವನ ಶೈಲಿ ಅವರನ್ನು ಗಟ್ಟಿಮುಟ್ಟಾಗಿ ಸದೃಢವಾಗಿ ಇಟ್ಟಿತ್ತು. ಕ್ಯಾನ್ಸರ್‌ನಂತಹ ಮಾರಕ ರೋಗವನ್ನೂ ಗುಣಪಡಿಸುವುದು ಸಾಧ್ಯವಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರೆ ದೀರ್ಘಕಾಲ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯವಿದೆ ಎಂದರು. ಇಂತಹ ಆರೋಗ್ಯ ತಪಾಸಣಾ ಶಿಬಿರಗಳು ಮೇಲಿಂದ ಮೇಲೆ ಆಗಬೇಕು. ರಾಜ್ಯದ ಮೂಲೆ ಮೂಲೆಗಳಲ್ಲೂ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ತುಂಬಾ ವಯಸ್ಸಾದ ಮೇಲೆ ಬರುವ ಆರೋಗ್ಯ ಸಮಸ್ಯೆಗಳು ಬರದಂತೆ ವಯಸ್ಸಿದ್ದಾಗಲೇ ಪ್ರಯತ್ನಿಸಿ ಎಂದು ಕರೆ ನೀಡಿದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.

ಮೋದಿ ೩.೦ಗೆ ಷೇರು ಮಾರುಕಟ್ಟೆ ಪುಳಕ: ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕ ಏರಿಕೆ

ನವದೆಹಲಿ, ಜೂ. ೬: ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ನಾಯಕರು ಬುಧವಾರ ದೆಹಲಿಯಲ್ಲಿ ನರೇಂದ್ರ ಮೋದಿ ಅವರನ್ನು ತಮ್ಮ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ನಂತರ, ಷೇರುಪೇಟೆ ಮಾರುಕಟ್ಟೆ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಇಂದು ಪುಟಿದೆದ್ದಿವೆ. ಮಂಗಳವಾರ ಲೋಕಸಭೆ ಚುನಾವಣೆ ಫಲಿತಾಂಶ ದಿನ ಸೆನ್ಸೆಕ್ಸ್ ಪಾತಾಳಕ್ಕೆ ಕುಸಿದಿತ್ತು. ೩೦-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಇಂದು ಬೆಳಗಿನ ಆರಂಭಿಕ ವಹಿವಾಟಿನಲ್ಲಿ ೬೯೬.೪೬ ಪಾಯಿಂಟ್‌ಗಳು ಜಿಗಿದು ೭೫,೦೭೮.೭೦ ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ ೧೭೯.೧೫ ಪಾಯಿಂಟ್ ಏರಿಕೆ ಕಂಡು ೨೨,೭೯೯.೫೦ಕ್ಕೆ ತಲುಪಿದೆ. ಹಿಂದುಸ್ತಾನ್ ಯೂನಿಲಿವರ್, ನೆಸ್ಲೆ, ಸನ್ ಫಾರ್ಮಾ ಮತ್ತು ಏಷ್ಯನ್ ಪೇಂಟ್ಸ್ ಹಿಂದುಳಿದವು. ಎನ್‌ಡಿಎ ನಾಯಕರು ನರೇಂದ್ರ ಮೋದಿ ಅವರನ್ನು ತಮ್ಮ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ೨೯೩ ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ಮೋದಿ ಸಜ್ಜಾಗಿದ್ದಾರೆ.