ಸಿದ್ದಾಪುರ, ಜೂ. ೬: ಯುವತಿಯೋರ್ವಳ ಖಾಸಗಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪ್ರೀತಿಸುವಂತೆ ಒತ್ತಾಯಿಸಿದ್ದ ಯುವಕನನ್ನು ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ನೆಲ್ಯಹುದಿಕೇರಿ ನಿವಾಸಿ ಅಶ್ರಪ್ ಎಂಬುವವರ ಪುತ್ರ ಅಫ್ರೀದಿ ಎಂಬಾತ ನೆಲ್ಯಹುದಿಕೇರಿಯ ಅನ್ಯಕೋಮಿನ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ತದ ನಂತರ ಯುವತಿಯು ಯುವಕನ ಪ್ರೀತಿಯನ್ನು ನಿರಾಕರಿಸಿದ್ದಳು. ನಂತರ ಯುವಕ ತನ್ನನ್ನು ಪ್ರೀತಿಸುವಂತೆ ಯುವತಿಯನ್ನು ಒತ್ತಾಯಿಸುತ್ತಾ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಈ ನಡುವೆ ಯುವಕ ಕಳೆದ ಆರು ತಿಂಗಳ ಹಿಂದೆ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದನು. ವಿದೇಶದಿಂದಲೇ ಅಫ್ರೀದಿ ತಾನು ಪ್ರೀತಿಸುತ್ತಿದ್ದ ಯುವತಿಯೊಂದಿಗಿನ ಖಾಸಗಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಯುವತಿಯನ್ನು ಬೆದರಿಸಿದ್ದಾನೆ. ಯುವಕನ ಬೆದರಿಕೆಗೆ ಯುವತಿ ಬಗ್ಗದ ಹಿನ್ನೆಲೆಯಲ್ಲಿ ಆತ ಯುವತಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಈ ಕುರಿತು ಯುವತಿಯು ಕಳೆದ ಡಿಸೆಂಬರ್ ತಿಂಗಳಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.

ಮುಂಬೈಯಲ್ಲಿ ಬಂಧನ

ವಿದೇಶದಲ್ಲಿದ್ದು ಕೃತ್ಯವೆಸಗಿದ ಆರೋಪಿ ಅಫ್ರೀದಿಯನ್ನು ಆರು ತಿಂಗಳ ನಂತರ ಸಿದ್ದಾಪುರ ಪೊಲೀಸರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆರೋಪಿಯ ವಿರುದ್ದ ವಿವಿಧ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ತಲೆಮರೆಸಿಕೊಳ್ಳುವ ಯತ್ನದಲ್ಲಿದ್ದ ಆರೋಪಿಯು ವಿದೇಶದಿಂದ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ತೆರಳಿದ ಸಿದ್ದಾಪುರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಆತ್ಮಹತ್ಯೆಗೆ ಯತ್ನ

ಯುವತಿಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಆರೋಪದಲ್ಲಿ ಮುಂಬೈನಲ್ಲಿ ಬಂಧಿತನಾದ ಆರೋಪಿ ಅಫ್ರೀದಿ ಪೊಲೀಸರ ಎದುರು ಸ್ಥಳದಲ್ಲಿದ್ದ ವಸ್ತುವಿನಿಂದ ತನ್ನ ಕೈಗೆ ಗಾಯ ಮಾಡಿ ಆತ್ಮ ಹತ್ಯೆಗೆ ಯತ್ನಿಸಿದ್ದ. ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಮುಂಬಯಿ ಪೊಲೀಸರು ಹಾಗೂ ಸಿದ್ದಾಪುರ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾರ್ಗದರ್ಶನದಲ್ಲಿ ಮಡಿಕೇರಿ ವೃತ್ತ ನಿರೀಕ್ಷಕ ರಾಜು ನೇತೃತ್ವದಲ್ಲಿ ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳಾದ ಬಸವರಾಜ್, ಕಿರಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- ವಾಸು