ಬೆಂಗಳೂರು, ಜೂ. ೬: ರಾಜ್ಯ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಬಹು ಕೋಟಿ ಹಗರಣದ ತನಿಖೆಯನ್ನು ಸಿಬಿಐ ಇದೀಗ ಕೈಗೆತ್ತಿಕೊಂಡಿದ್ದು, ಇದರ ಬೆನ್ನಲ್ಲೇ ರಾಜ್ಯ ಪರಿ ಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸ ಕಾವೇರಿಗೆ ತೆರಳಿದ ನಾಗೇಂದ್ರ ತಮ್ಮ ರಾಜೀನಾಮೆ ಪತ್ರವನ್ನು ಸಿಎಂಗೆ ಸಲ್ಲಿಸಿದ್ದಾರೆ. ಪ್ರಸಕ್ತ ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ರಾಜೀನಾಮೆ ಸಲ್ಲಿಸಿದ ಮೊದಲ ಸಚಿವರೆನಿಸಿದ್ದಾರೆ.

ಎಸ್ಟಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಬಳಿಕ ಸುಮಾರು ರೂ. ೯೪.೭೩ ಕೋಟಿ ಹಗರಣ ಬಯಲಿಗೆ ಬಂದಿದ್ದು, ಸಚಿವ ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಇದೀಗ ರಾಜೀನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದರು. ಈಗಾಗಲೇ ರಾಜ್ಯ ಸರಕಾರ ಎಸ್‌ಐಟಿಗೆ ತನಿಖೆಗೆ ವಹಿಸಿದ್ದು ಅನೇಕ ಅಧಿಕಾರಿಗಳು ಬಂಧನಕ್ಕೆ ಒಳಗಾಗಿದ್ದಾರೆ. ಅಲ್ಲದೆ, ನಿನ್ನೆ ದಿನ ಸಚಿವರ ಆಪ್ತರು ಗಳೆನ್ನಲಾದ ನಾಗರಾಜು ನೆಕ್ಕಂಟಿ ಹಾಗೂ ನಾಗೇಶ್ವರ್ ರಾವ್ ಎಂಬವರುಗಳನ್ನು ಎಸ್‌ಐಟಿ ಬಂಧಿಸಿತ್ತು.