ಮಡಿಕೇರಿ, ಜೂ. ೬: ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸತತ ಮೂರನೇ ಗೆಲುವು ಇದಾಗಿದೆ. ಈ ಹಿಂದಿನ ವರ್ಷಗಳಂತೆ ಕೊಡಗು ಜಿಲ್ಲೆ ಬಿಜೆಪಿಗೆ ಮತ್ತೆ ಲೀಡ್‌ಕೊಟ್ಟಿದೆ.

ಅಭ್ಯರ್ಥಿ ಯದುವೀರ್ ಅವರ ಗೆಲುವಿನ ಅಂತರ ೧,೩೯,೨೬೨ ಮತಗಳು. ಇದರಲ್ಲಿ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಂದ ದೊರೆತ ಲೀಡ್ ೭೩,೮೫೬ ಮತಗಳಾಗಿದ್ದು, ಬಿಜೆಪಿ ಗೆಲುವಿಗೆ ಇದು ದೊಡ್ಡಮಟ್ಟದ ಕೊಡುಗೆಯೇ ಆಗಿದೆ. ಕೊಡಗು - ಮೈಸೂರು ಕ್ಷೇತ್ರ ಒಟ್ಟು ೮ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಇದರಲ್ಲಿ ಈ ಬಾರಿ ಬಿಜೆಪಿಗೆ ೬ ರಲ್ಲಿ ಮುನ್ನಡೆ ಬಂದಿದೆ. ಕೊಡಗನ್ನು ಹೊರತುಪಡಿಸಿದರೆ, ಇತರ ವಿಧಾನಸಭಾ ಕ್ಷೇತ್ರಗಳಾದ ಹುಣಸೂರಿನಲ್ಲಿ ೩೦೬೮, ಚಾಮುಂಡೇಶ್ವರಿಯಲ್ಲಿ ೩೭,೨೪೪, ಕೃಷ್ಣರಾಜದಲ್ಲಿ ೫೪,೪೨೫, ಚಾಮರಾಜದಲ್ಲಿ ೫೬,೫೯೭ ಹೆಚ್ಚು ಮತಗಳು ಬಿಜೆಪಿಗೆ ಬಂದಿವೆ. ಈ ನಾಲ್ಕು ಕ್ಷೇತ್ರಗಳ ಮತಗಳ ಸಂಖ್ಯೆ ಒಟ್ಟು ೧,೫೧,೧೩೪ ರಷ್ಟಾಗುತ್ತವೆ.

ಕೊಡಗಿನ ಎರಡು ಕ್ಷೇತ್ರ ಹಾಗೂ ಮೈಸೂರು ಜಿಲ್ಲೆಯ ನಾಲ್ಕು ಕ್ಷೇತ್ರಗಳ ಮತ ಸೇರಿದರೆ, ಬಿಜೆಪಿಗೆ ಒಟ್ಟು ೨,೨೪,೯೯೩ ರಷ್ಟು ಅಂತರ ದೊರೆತಿದೆ. ಆದರೆ ನರಸಿಂಹರಾಜದಲ್ಲಿ ಬಿಜೆಪಿಗಿಂತ ಕಾಂಗ್ರೆಸ್‌ಗೆ ೭೬,೫೯೭ ರಷ್ಟು ಅಧಿಕ ಮತ ಹಾಗೂ ಪಿರಿಯಾಪಟ್ಟಣದಲ್ಲಿ ೧೧,೭೪೪ ರಷ್ಟು ಮತ ಅಧಿಕ ಮತ ಲಭ್ಯವಾಗಿದೆ. ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬಿಜೆಪಿಗಿಂತ ೮೮,೩೪೧ ರಷ್ಟು ಅಧಿಕ ಮತಗಳು ಬಿದ್ದಿವೆ.

ಒಟ್ಟಾರೆಯಾಗಿ ೬ ಕ್ಷೇತ್ರಗಳಲ್ಲಿ ಬಿಜೆಪಿಗೆ ದೊರೆತಿದ್ದ ೨,೨೪,೯೯೩ ಮತಗಳಲ್ಲಿ ಇನ್ನಿತರ ೨ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಡೆದಿರುವ ೮೮೩೪೧ ಅಧಿಕ ಮತಗಳನ್ನು ಕಳೆದರೆ, ಬಿಜೆಪಿಗೆ ಹೆಚ್ಚುವರಿಯಾಗಿ ಬರುವುದು ೧,೩೬,೬೪೯ ಮತಗಳು ಹಾಗೂ ಅಂಚೆಮತದಲ್ಲಿ ಹೆಚ್ಚುವರಿಯಾಗಿ ದೊರೆತ ೨೬೧೦ ಮತ ಸೇರಿ ಬಿಜೆಪಿ ಗೆಲುವಿನ ಅಂತರ ೧,೩೯,೨೬೨ ರಷ್ಟಾಗುತ್ತವೆ. ಇದರಲ್ಲಿ ಕೊಡಗಿನ ಮಡಿಕೇರಿ ಹಾಗೂ ವೀರಾಜಪೇಟೆ ಯಿಂದ ದೊರೆತ ೭೩,೮೫೬ ಮತಗಳು ಬಿಜೆಪಿಯ ಅಧಿಕ ಅಂತರದ ಗೆಲುವಿಗೆ ಮತ್ತೆ ಕಾರಣ ಎನ್ನಬಹುದು.

೨೦೧೯ರ ಚುನಾವಣೆಯಲ್ಲಿಯೂ ಕೊಡಗಿನಿಂದ ಬಿಜೆಪಿಗೆ ೮೫,೪೭೩ ಅಧಿಕ ಮತಗಳು ದೊರೆತಿತ್ತು. ಈ ಬಾರಿ ಕಳೆದ ಚುನಾವಣೆಗಿಂತ ೧೧,೬೧೭ ಮತಗಳು ಮಾತ್ರ ಬಿಜೆಪಿಗೆ ಕಡಿಮೆಯಾಗಿದೆ. - ಶಶಿ