ಸೋಮವಾರಪೇಟೆ, ಜೂ. ೭: ಅರೇಬಿಕಾ ಕಾಫಿಯನ್ನು ಹೆಚ್ಚು ಬೆಳೆಯುವ ಉತ್ತರ ಕೊಡಗಿನ ಬೆಳೆಗಾರರಿಗೆ ಬಿಳಿಕಾಂಡಕೊರಕ ಕೀಟ ಕಳೆದ ಅನೇಕ ವರ್ಷಗಳಿಂದ ಕಂಟಕಪ್ರಾಯವಾಗಿ ಪರಿಣಮಿಸಿದೆ. ಫಸಲಿನ ಗಿಡಗಳನ್ನೇ ಗುರಿಯಾಗಿಸಿ ಕೊಂಡು ಈ ಕೀಟ ದಾಳಿ ನಡೆಸುವ ಹಿನ್ನೆಲೆ, ಬೆಳೆಗಾರ ವರ್ಗ ಪ್ರತಿ ವರ್ಷವೂ ಫಸಲಿನೊಂದಿಗೆ ಗಿಡಗಳನ್ನೂ ಕಳೆದುಕೊಳ್ಳಬೇಕಾದ ಸಂಕಷ್ಟಕ್ಕೆ ಒಳಗಾಗುತ್ತಿದೆ.

ಪ್ರಸಕ್ತ ವರ್ಷ ಬಿಸಿಲ ಧಗೆ ಹೆಚ್ಚಾಗಿದ್ದು, ಈಗಾಗಲೇ ಹಲವಷ್ಟು ಕಾಫಿ ಗಿಡಗಳು ಸುಟ್ಟು ಹೋಗಿವೆ. ಇದರೊಂದಿಗೆ ಅರೇಬಿಕಾ ಕಾಫಿ ತೋಟದಲ್ಲಿ ಬಿಳಿಕಾಂಡಕೊರಕ ಹಾವಳಿಯೂ ಮಿತಿಮೀರುತ್ತಿರುವ ಹಿನ್ನೆಲೆ ಬೆಳೆಗಾರರು ಅನ್ಯ ಮಾರ್ಗವಿಲ್ಲದೆ ರೋಗ ಪೀಡಿತ ಕಾಫಿ ಗಿಡಗಳನ್ನು ಕಿತ್ತು ಬೆಂಕಿ ಹಾಕುತ್ತಿದ್ದಾರೆ.

ಕಿತ್ತ ಕಾಫಿ ಬುಡಗಳನ್ನು ಕೆಲವರು ಬೆಂಕಿ ಹಾಕಿ ಸುಟ್ಟರೆ, ಇನ್ನು ಕೆಲವರು ತೋಟದ ಸಮೀಪವೇ ಹಾಕುತ್ತಿದ್ದಾರೆ. ಇಂತಹ ಬುಡದೊಳಗೆ ಇರುವ ಕೀಟ, ಹೊರ ಬಂದು ಮತ್ತೆ ತೋಟ ದೊಳಗಿನ ಆರೋಗ್ಯವಂತ ಗಿಡಕ್ಕೆ ಸೇರುತ್ತಿದೆ.

ಬೋರರ್‌ಗೆ ತುತ್ತಾದ ಕಾಫಿ ಗಿಡಗಳನ್ನು ಪ್ರತಿ ವರ್ಷವೂ ಕೀಳಲೇಬೇಕಾದ ಪರಿಸ್ಥಿತಿ ಇದೆ. ಪ್ರಸಕ್ತ ವರ್ಷ ಭಾರೀ ಬಿಸಿಲು ಇದ್ದಿದ್ದರಿಂದ ಬೋರರ್ ಹುಳಗಳ ಕಾಟ ಹೆಚ್ಚಾಗಿದೆ. ಶಾಂತಳ್ಳಿ, ಬೆಟ್ಟದಳ್ಳಿ, ಹರಗ, ಕಿರಗಂದೂರು, ತಾಕೇರಿ ವ್ಯಾಪ್ತಿಯಲ್ಲಿ ಏಕರೆಗೆ ೩೦ ರಿಂದ ೫೦ ಗಿಡಗಳು ಬೋರರ್ ಹುಳುಗಳಿಂದ ನಾಶವಾಗುತ್ತಿವೆ. ಶನಿವಾರಸಂತೆ, ಸೋಮವಾರಪೇಟೆ, ಗಣಗೂರು, ಮಸಗೋಡು, ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಗಿಡಗಳು ಬೋರರ್ ಹಾವಳಿಗೆ ಒಳಗಾಗುತ್ತಿವೆ.

ನಿರೀಕ್ಷಿತ ಸಮಯದಲ್ಲಿ ಮಳೆ ಬಾರದೇ, ಭಾರೀ ಬಿಸಿಲಿನ ವಾತಾವರಣ ಏರ್ಪಟ್ಟಿದ್ದರಿಂದ ಕಾಂಡಕೊರಕ ಕೀಟಗಳ ಸಂತಾ ನೋತ್ಪತಿಯೂ ಹೆಚ್ಚಾಗಿದೆ. ಕೆಲವೇ ದಿನಗಳಲ್ಲಿ ಕಾಫಿ ಗಿಡಗಳ ಕಾಂಡದೊಳಗೆ ಸೇರಿ, ಕೊರೆಯಲು ಪ್ರಾರಂಭಿಸುತ್ತವೆ. ಕ್ರಮೇಣ ಕಾಫಿ ಗಿಡಗಳಲ್ಲಿ ಫಸಲು ಕಡಿಮೆಯಾಗಿ ಇಡೀ ತೋಟವೇ ಕಾಂಡಕೊರಕ ಕೀಟಕ್ಕೆ ಬಲಿಯಾಗುತ್ತದೆ.

(ಮೊದಲ ಪುಟದಿಂದ) ಇದರಿಂದಾಗಿ ಭಾರೀ ಸಮಸ್ಯೆ ಎದುರಿ ಸುವಂತಾಗಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

ಬಿಳಿಕಾಂಡಕೊರಕಗಳು ಕಾಫಿ ಗಿಡದ ಕಾಂಡವನ್ನು ಕೊರೆದು ತಿನ್ನುತ್ತಿರುವುದರಿಂದ, ಫಸಲು ಕೊಡುತ್ತಿದ್ದ ಗಿಡಗಳು ಸಾಯುತ್ತಿವೆ. ಹತ್ತು ವರ್ಷಗಳ ಹಳೆಯದಾದ ಗಿಡಗಳು ಸಾಯುತ್ತಿರುವುದರಿಂದ ಆರ್ಥಿಕ ನಷ್ಟ ಅನುಭವಿಸಬೇಕಾಗಿದೆ. ಹೊಸದಾಗಿ ಕಾಫಿ ಗಿಡ ನೆಟ್ಟು ಫಸಲು ತೆಗೆಯಬೇಕಾದರೆ ನಾಲ್ಕರಿಂದ ೫ ವರ್ಷಗಳು ಬೇಕಾಗುತ್ತದೆ. ಕಾಫಿ ತೋಟಗಳಲ್ಲಿ ಫಸಲು ನೀಡುವ ಆರೋಗ್ಯವಂತ ಗಿಡಗಳು ನಾಶವಾಗುತ್ತಿರುವುದರಿಂದ ಕಾಫಿ ತೋಟದ ನಿರ್ವಹಣೆ ಅಸಾಧ್ಯ ಎಂದು ಹರಗ ಗ್ರಾಮದ ಬೆಳೆಗಾರ ಶರಣ್ ಅಭಿಪ್ರಾಯಿಸಿದ್ದಾರೆ.

ಅರೇಬಿಕಾ ತೋಟಗಳಲ್ಲಿ ಮಾತ್ರ ಬಿಳಿಕಾಂಡಕೊರಕ (ಕ್ಸೆöÊಲೋಟ್ರೀಕಸ್‌ಕ್ವಾಡ್ರಿಪಸ್) ಹಾವಳಿ ಹೆಚ್ಚಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಅತೀ ಹೆಚ್ಚು ಅರೇಬಿಕಾ ಬೆಳೆಯಲಾಗುತ್ತಿದೆ. ಒಟ್ಟು ೨೮,೫೪೦ ಹೆಕ್ಟರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ೨೨,೯೪೦ ಹೆಕ್ಟರ್‌ನಲ್ಲಿ ಅರೇಬಿಕಾ, ೫,೬೦೦ ಹೆಕ್ಟರ್‌ನಲ್ಲಿ ರೋಬಸ್ಟಾ ಬೆಳೆಯಲಾಗುತ್ತಿದೆ. ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ ಕಸಬಾ, ಸುಂಟಿಕೊಪ್ಪ, ಶಾಂತಳ್ಳಿ ಹೋಬಳಿಯಲ್ಲಿ ಹೆಚ್ಚು ಅರೇಬಿಕಾ ಬೆಳೆಯಲಾಗುತ್ತಿದ್ದು, ಇಲ್ಲಿ ಕೀಟಬಾಧೆ ಹೆಚ್ಚಾಗಿದೆ.

ಎಕರೆಯೊಂದರಲ್ಲಿ ೭೦೦ ರಿಂದ ೮೦೦ ಕಾಫಿ ಗಿಡಗಳು ಇದ್ದರೆ, ಅದರಲ್ಲಿ ಫಸಲು ಕೊಡುವ ನೂರು ಗಿಡಗಳು ಕಾಂಡಕೊರಕ ಕೀಟಬಾಧೆಗೆ ತುತ್ತಾಗಿವೆ. ಕಿತ್ತ ಗಿಡಗಳನ್ನು ಕೂಡಲೆ ಸುಟ್ಟು ನಾಶಪಡಿಸಬೇಕಾದ ಅನಿವಾರ್ಯತೆಯಿದೆ. ಇಲ್ಲದಿದ್ದರೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಲಿದೆ ಎಂದು ಗಣಗೂರಿನ ದುಷ್ಯಂತ್ ತಿಳಿಸಿದ್ದಾರೆ.

ಪ್ರತಿ ವರ್ಷ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಕೀಟ ಪೀಡಿತ ಗಿಡಗಳನ್ನು ತೆಗೆಯಬೇಕು. ಕ್ರಿಮಿನಾಶಕ ಸಿಂಪಡಿಸಬೇಕು. ಜುಲೈನಿಂದ, ಸೆಪ್ಟೆಂಬರ್ ಒಳಗೆ ತೋಟದಲ್ಲಿ ಹದವಾದ ನೆರಳು ನಿರ್ವಹಣೆ ಮಾಡಿಕೊಳ್ಳಬೇಕು. ನಂತರ ಅಕ್ಟೋಬರ್‌ನಿಂದ ಡಿಸೆಂಬರ್ ತನಕ ಕೀಟ ನಿಯಂತ್ರಣದ ಕೆಲಸದ ಪುನರಾವರ್ತನೆ ಮಾಡಬೇಕು ಎಂದು ಕೀಟತಜ್ಞರು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ.

ಬಿಳಿಕಾಂಡಕೊರಕ ಪೀಡಿತ ಕಾಫಿ ಗಿಡಗಳನ್ನು ಕಿತ್ತು ಕೂಡಲೇ ಸುಡಬೇಕು. ತೋಟದ ಬದಿಯಲ್ಲಿ ಸಂಗ್ರಹ ಮಾಡಬಾರದು. ಈ ಬಗ್ಗೆ ಎಲ್ಲಾ ಬೆಳೆಗಾರರಿಗೆ ತಿಳುವಳಿಕೆ ನೀಡಲಾಗಿದೆ. ಒಂದು ವೇಳೆ ತಕ್ಷಣಕ್ಕೆ ವಿಲೇವಾರಿ ಮಾಡಲು ಅಸಾಧ್ಯವಾದರೆ ಬುಡಗಳನ್ನು ೧೫ ದಿನಗಳ ಕಾಲ ನೀರಿನಲ್ಲಿ ಮುಳುಗಿಸಿಟ್ಟು, ನಂತರ ಮಾರಾಟ ಮಾಡಬಹುದು. ಈ ಕೆಲಸವನ್ನು ಎಲ್ಲಾ ಬೆಳೆಗಾರರು ಸಾಮೂಹಿಕವಾಗಿ ನಿಗದಿತ ಸಮಯದಲ್ಲಿ ಮಾಡಿದರೆ ಮಾತ್ರ ರೋಗಬಾಧೆ ಹತೋಟಿ ಸಾಧ್ಯ. ಇಲ್ಲವಾದರೆ ಬೋರರ್ ಕೀಟವನ್ನು ಬೆಳೆಗಾರರೇ ಪೋಷಿಸಿದಂತಾಗುತ್ತದೆ ಎಂದು ಕಾಫಿ ಮಂಡಳಿಯ ಹಿರಿಯ ಅಧಿಕಾರಿಗಳು ಎಚ್ಚರಿಕೆಯೊಂದಿಗೆ ಸಲಹೆ ನೀಡಿದ್ದಾರೆ.