ಸಿದ್ದಾಪುರ, ಜೂ. ೭: ಒಂಟಿ ಸಲಗ ಜನವಸತಿ ಪ್ರದೇಶದಲ್ಲಿ ದಾಂಧಲೆ ನಡೆಸುತ್ತಿದ್ದು, ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದ ಸರ್ಕಾರಿ ಶಾಲೆಯ ಸಮೀಪ ಕಂಡು ಬಂದಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಒಂಟಿ ಸಲಗ ರಾತ್ರಿ ಸಮಯದಲ್ಲಿ ಜನವಸತಿ ಪ್ರದೇಶಗಳಲ್ಲಿ ಸುತ್ತಾಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮನೆಗಳ ಸಮೀಪವಿರುವ ತೆಂಗು ಹಾಗೂ ಬಾಳೆ ಗಿಡ ಹಾಗೂ ಅಡಿಕೆ ಮರಗಳನ್ನು ಎಳೆದು ಹಾಕಿ ಧ್ವಂಸಗೊಳಿಸುತ್ತಿದೆ. ಕಾಫಿ ಗಿಡಗಳನ್ನು ಕೂಡ ತುಳಿದು ಹಾನಿಗೊಳಿಸುತ್ತಿದೆ. ಶಾಲೆ ರಸ್ತೆಯ ಸುತ್ತಮುತ್ತಲಿನ ಮನೆಗಳ ಬಳಿ ಒಂಟಿ ಸಲಗ ಕಾಣಿಸಿಕೊಂಡಿದ್ದು, ಬೃಹತ್ ಗಾತ್ರದ ಸಲಗವನ್ನು ಕಂಡ ಸ್ಥಳೀಯರು ಭಯಭೀತರಾಗಿದ್ದಾರೆ. ಸಲಗದ ಉಪಟಳದಿಂದಾಗಿ ಸಂಜೆ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ನಿವಾಸಿ ರವೀಂದ್ರ ಭಟ್ ತಿಳಿಸಿದ್ದಾರೆ. ಒಂಟಿ ಸಲಗ ಕಳೆದ ಕೆಲವು ದಿನಗಳಿಂದ ನೆಲ್ಯ ಹುದಿಕೇರಿ ಗ್ರಾಮದ ಅತ್ತಿಮಂಗಲ ಬರಡಿ ಅಭ್ಯತ್ ಮಂಗಲ ಗ್ರಾಮಗಳ ಕಾಫಿ ತೋಟಗಳಲ್ಲಿ ರಾಜಾರೋಷವಾಗಿ ಸುತ್ತಾಡುತ್ತಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಒಂಟಿ ಸಲಗದ ಚಲನವಲನವನ್ನು ಕಂಡುಹಿಡಿದಿದ್ದಾರೆ. ಇದರ ಇರುವಿಕೆ ಬಗ್ಗೆ ಗುರುತಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಒಂಟಿ ಸಲಗದ ಸೆರೆಗೆ ಮುಂದಾಗಿದ್ದಾರೆ. ಮುಂದಿನ ವಾರ ಕಾರ್ಯಾಚರಣೆ ನಡೆಸಿ ಸಲಗವನ್ನು ಸೆರೆಹಿಡಿದು ಸ್ಥಳಾಂತರ ಮಾಡಲು ಯೋಜನೆ ರೂಪಿಸಿದ್ದಾರೆ.