ಮಡಿಕೇರಿ, ಜೂ. ೭: ಬದುಕು ಪರಿಪೂರ್ಣಗೊಳ್ಳಬೇಕಾದರೆ ಮನುಷ್ಯರಲ್ಲಿ ಶ್ರದ್ಧೆ, ದೃಢತೆ, ವಿಶ್ವಾಸ ಅತಿಮುಖ್ಯ ಎಂದು ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅಭಿಮತ ವ್ಯಕ್ತಪಡಿಸಿದರು.

೨ನೇ ಮೊಣ್ಣಂಗೇರಿಯ ಕುಡಿಯಹಾರಿದ ಕಲ್ಲು ಎಂಬಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತಮ ಪರಿಸರದಲ್ಲಿ ಭಾವನಾತ್ಮಕ ವಿಚಾರಧಾರೆ ತುಂಬುವ ಹಾಗೂ ಭಗವಂತನ ಸಾನಿಧ್ಯಕ್ಕೆ ಹತ್ತಿರವಾಗುವಂತಹ ಭಜನಾ ಮಂದಿರ ಗ್ರಾಮಸ್ಥರ ಶ್ರಮದಿಂದ ನಿರ್ಮಾಣವಾಗಿರುವುದು ಶ್ಲಾಘನೀಯ. ಧಾರ್ಮಿಕ ಪ್ರಜ್ಞೆ ಮೈಗೂಡಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವುದು ಮಾತ್ರವಲ್ಲದೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಯುವಪೀಳಿಗೆ ಧಾರ್ಮಿಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು. ಧರ್ಮವನ್ನು ಹೀಯಾಳಿಸುವುದು ಸರಿಯಲ್ಲ. ಭಾವನೆಗಳಿಗೆ ಧಕ್ಕೆ ತರದೆ ಪರಸ್ಪರ ಗೌರವದ ಮೂಲಕ ಸ್ವಾಸ್ಥö್ಯ ಕಾಪಾಡಬೇಕೆಂದು ಕರೆ ನೀಡಿದರು.

ಹಿಂದೂ ಧರ್ಮ ವಿಶಾಲ ಸಾಗರದಂತೆ. ಇದರ ಬಗ್ಗೆ ಅಧ್ಯಯನ ನಡೆಸಿ ಅರ್ಥೈಸಿಕೊಂಡರೆ ಮಾತ್ರ ಧರ್ಮದ ವ್ಯಾಪ್ತಿ ತಿಳಿಯುತ್ತದೆ. ಪ್ರತಿಯೊಬ್ಬರು ರಾಮಾಯಣ, ಮಹಾಭಾರತದಂತಹ ಧರ್ಮಗ್ರಂಥಗಳನ್ನು ಓದಿ ಅದರಲ್ಲಿರುವ ಉತ್ತಮ ಅಂಶಗಳನ್ನು ಅಳವಡಿಸಿಕೊಂಡರೆ ಜೀವನ ಸಕಾರಾತ್ಮಕವಾಗಿ ಮುನ್ನಡೆಸಬಹುದು. ಧ್ಯಾನ, ಪ್ರಾಣಾಯಾಮ, ಭಜನೆಗಳಿಂದ ದೇವರಲ್ಲಿ ಬಹಿರಂಗ ಶರಣಾಗತಿ ಸಾಧ್ಯ. ಜೊತೆಗೆ ಮಾನಸಿಕ ಆತ್ಮಶಕ್ತಿ ಜಾಗೃತಿಗೊಳ್ಳುತ್ತದೆ. ನಕಾರಾತ್ಮಕ ಚಿಂತನೆಗಳು ದೂರವಾಗುತ್ತವೆ ಎಂದ ಅವರು, ನಾನು ಎಂಬ ಅಹಂ ತೊರೆದು ಬದುಕಬೇಕು. ಹಣ-ಆಸ್ತಿ ಸಂಪಾದನೆಯೇ ಇಂದು ಧ್ಯೇಯವಾಗಿದ್ದು, ದಾನದ ಮೂಲಕ ಬದುಕಿಗೆ ಅರ್ಥ ನೀಡಬೇಕು. ವ್ಯವಹಾರದ ಬದುಕಿನೊಂದಿಗೆ ಧಾರ್ಮಿಕ ಮನೋಭಾವ ರೂಪಿಸಿಕೊಳ್ಳಬೇಕು. ರಾಜಕೀಯ ವ್ಯವಸ್ಥೆಯಡಿ ಧರ್ಮ ತಂದು ಗೊಂದಲ ಸೃಷ್ಟಿಸುವ ಕೆಲಸವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

(ಮೊದಲ ಪುಟದಿಂದ) ಸೇವಾ ಭಾರತಿ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ, ಸಮರ್ಪಣಾ ಮನೋಭಾವ, ವಿಶ್ವಾಸ, ಗುರಿ ಇದ್ದಲ್ಲಿ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ವಾಸ ಮಾಡಲು ಸಾಧ್ಯ. ದೇವಾಲಯಗಳಿಂದ ಧಾರ್ಮಿಕ ಶ್ರದ್ಧೆ ಉಳಿಸಿಕೊಳ್ಳಬಹುದು. ಕೊಡಗು ಜಿಲ್ಲೆಯಲ್ಲಿ ಭಜನೆಗಾಗಿಯೇ ಪ್ರತ್ಯೇಕ ಮಂದಿರ ನಿರ್ಮಿಸಿರುವದು ಕುಡಿಯ ಹಾರಿದ ಕಲ್ಲು ಗ್ರಾಮದಲ್ಲಿ ಮಾತ್ರ. ಭಜನೆಯಿಂದ ಸಂತೃಪ್ತಿ, ಶಾಂತತೆ ಭಾವ ಮೂಡುತ್ತದೆ. ಬದುಕಿಗೆ ಊಟ, ಬಟ್ಟೆ, ನೀರು ಹೇಗೆ ಮುಖ್ಯವೋ ಅದೇ ರೀತಿ ನಂಬಿಕೆಯೂ ಮುಖ್ಯ. ಭಜನೆಯಿಂದ ಸಾತ್ವಿಕ ಸಂಘಟನೆ ಸಾಧ್ಯ ಎಂದು ಪ್ರತಿಪಾದಿಸಿದರು.

ಭಜನಾ ಮಂಡಳಿ ಗೌರವ ಕಾರ್ಯದರ್ಶಿ ಧನಂಜಯ್ ಅಗೋಳಿಕಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಡಿಕೇರಿ ರಾಜ ಮುದ್ದುರಾಜರ ಕಾಲದಲ್ಲಿ ೨ನೇ ಮೊಣ್ಣಂಗೇರಿ ಈ ಗ್ರಾಮದಲ್ಲಿ ಕುಡಿಯರ ಸಂಖ್ಯೆ ಹೆಚ್ಚಿತ್ತು. ದನಮೇಯಿಸುವುದು, ಅರಣ್ಯ ಉತ್ಪನ್ನ ಸಂಗ್ರಹಿಸುವುದು ಅವರ ಕಸುಬಾಗಿತ್ತು. ಮುದ್ದುರಾಜನಿಗೆ ಗಂಡು ಮಗು ಹುಟ್ಟಿದ ಸಮಯದಲ್ಲಿ ಕುಡಿಯ ಜನಾಂಗದ ಒಬ್ಬ ವ್ಯಕ್ತಿ ಖುಷಿಯಿಂದ ೩೨ ಅಡಿ ಕುಪ್ಪಳಿಸಿ ಹಾರಿದ ಹಿನ್ನೆಲೆ ಇಲ್ಲಿ ಕಲ್ಲನ್ನು ನಿರ್ಮಿಸಲಾಯಿತು. ಹೀಗಾಗಿ ಈ ಊರಿಗೆ ಕುಡಿಯ ಹಾರಿದ ಕಲ್ಲು ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ ಎಂದು ಸ್ಮರಿಸಿದ ಅವರು, ೨೦೦೭ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಚಪ್ಪರ ನಿರ್ಮಿಸಿಕೊಂಡು ಸ್ಥಳೀಯರು ಭಜನೆಯಲ್ಲಿ ತೊಡಗಿಸಿಕೊಂಡರು. ಶಾಶ್ವತ ಕಟ್ಟಡ ನಿರ್ಮಿಸಬೇಕೆಂಬ ಬಹುವರ್ಷದ ಆಸೆ ಈಡೇರುತ್ತಿರಲಿಲ್ಲ. ಹೀಗೆ ಕೆಲವು ವರ್ಷಗಳ ಹಿಂದೆ ಪ್ರಶ್ನೆಯಿಟ್ಟ ಸಂದರ್ಭ ಕೆಲವೊಂದು ಆರಾಧನೆ ಮಾಡದ ಹಿನ್ನೆಲೆ ನಿರ್ಮಾಣ ಸಾಧ್ಯ ವಾಗುತ್ತಿಲ್ಲ ಎಂದು ಜ್ಯೋತಿಷಿಗಳು ಸೂಚಿಸಿದ್ದರು. ಅದರನ್ವಯ ಎಲ್ಲವನ್ನೂ ಸರಿಪಡಿಸಿ ಕೊಂಡು ನಿರ್ಮಾಣಕ್ಕೆ ಮುಂದಾಗಿ ಕೇವಲ ೫ ತಿಂಗಳ ಅವಧಿಯಲ್ಲಿ ಗ್ರಾಮಸ್ಥರ ಅವಿರತ ಶ್ರಮದಿಂದ ಭಜನಾ ಮಂದಿರ ನಿರ್ಮಾಣ ಸಾಧ್ಯವಾಯಿತು ಎಂದು ತಿಳಿಸಿದರು.

ಇದೇ ಸಂದರ್ಭ ಮಂದಿರ ನಿರ್ಮಾಣಕ್ಕೆ ಸಹಕರಿಸಿದ ಗೌರವ ಉಪಾಧ್ಯಕ್ಷ ಶಿವರಾವ್ ಅವರನ್ನು ಮಂಡಳಿ ವತಿಯಿಂದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಭಜನಾ ಮಂಡಳಿ ಅಧ್ಯಕ್ಷ ಎಂ.ಎನ್. ಈರಪ್ಪ ಗೌಡ ಹಾಜರಿದ್ದರು. ಧನಂಜಯ ಸ್ವಾಗತಿಸಿ, ಭರತ್ ನಿರೂಪಿಸಿ, ಹೂವಮ್ಮ ವಂದಿಸಿದರು.

ಧಾರ್ಮಿಕ ಕಾರ್ಯಗಳು

ಸಭಾ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ಮಂದಿರದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ನವಕ ಕಲಶ, ಗಣಪತಿ ಹವನ, ಶ್ರೀ ದುರ್ಗಾ ಹವನ, ಲಲಿತಾ ಸಹಸ್ರನಾಮಾರ್ಚನೆ ನಡೆಯಿತು. ಸಂಜೆ ೨ನೇ ಮೊಣ್ಣಂಗೇರಿಯ ಶ್ರೀ ರಾಜರಾಜೇಶ್ವರಿ, ದೇವರಕೊಲ್ಲಿಯ ಚಾಮುಂಡೇಶ್ವರಿ, ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ತಂಡಗಳಿAಡ ಭಜನಾ ಕಾರ್ಯಕ್ರಮ ನಡೆಯಿತು.