(ಸರ್ಕಾರ ರಚನೆಗೂ ಮುನ್ನವೇ ಕಿರಿಕ್ ಪಾರ್ಟಿ - ಹೊಸ ಹೊಸ ಬೇಡಿಕೆಗಳ ತಲೆನೋವು - ಬಿಜೆಪಿ ಪ್ರಣಾಳಿಕೆಯಲ್ಲಿನ ಅನೇಕ ಯೋಜನೆ ಜಾರಿಗೆ ಕಡಿವಾಣದ ಆತಂಕ)

ವಿಶ್ಲೇಷಣೆ - ಅನಿಲ್ ಎಚ್.ಟಿ.

ಭಾರತದ ರಾಜಧಾನಿ ನವದೆಹಲಿಯಲ್ಲಿ ಈಗ ೪೫ ಡಿಗ್ರಿ ಸೆಲ್ಸಿಶಿಯಸ್ ತಾಪಮಾನವಿದೆ, ದೆಹಲಿಯ ನಂಬರ್ ೬, ದೀನ್ ದಯಾಳ್ ಉಪಾಧ್ಯಾಯ್ ಮಾರ್ಗದಲ್ಲಿನ ೭೦ ವಿಶಾಲ ಕೋಣೆಗಳಿರುವ ರಾಷ್ಟಿçÃಯ ಬಿಜೆಪಿ ಕಚೇರಿಯಲ್ಲಿ ಎಸಿ ವ್ಯವಸ್ಥೆಯಿದ್ದರೂ ಸದ್ಯದ ಸ್ಥಿತಿಯಲ್ಲಿ ಬಿಜೆಪಿ ಕಚೇರಿಯೊಳಗೆ ಬಿಸಿ ತಣ್ಣಗಾಗುತ್ತಿಲ್ಲ,

‘‘ನೀ ನನಗಾದರೆ ನಾ ನಿನಗೆ’’ ಎಂಬAತೆ ಮಿತ್ರ ಪಕ್ಷಗಳ ಸಹಕಾರದಿಂದಲೇ ಕೇಂದ್ರ ಸರ್ಕಾರ ರಚಿಸಬೇಕಾದ ಅನಿವಾರ್ಯತೆಯಲ್ಲಿರುವ ಬಿಜೆಪಿಗೆ ಸದ್ಯಕ್ಕಂತೂ ಮಿತ್ರರಿಂದಲೇ ತಲೆ ನೋವು ಹೆಚ್ಚಾಗುತ್ತಿದೆ.

ಬಿಜೆಪಿಯೊಂದೇ ಅಧಿಕಾರಕ್ಕೆ ಬರುವಷ್ಟು ಸಂಸದರನ್ನು ಹೊಂದಿಲ್ಲ ಎಂಬುದನ್ನೇ ಕಾರಣವಾಗಿಸಿಕೊಂಡ ಮಿತ್ರ ಪಕ್ಷಗಳು ಮೈತ್ರಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಂದಿಡುತ್ತಿರುವ ಬೇಡಿಕೆಗಳ ಪಟ್ಟಿ ಬೆಳೆಯುತ್ತಲೇ ಇದೆ, ಹೀಗಾಗಿ ಬಿಜೆಪಿಗೆ ಈ ಸಲ ಸರ್ಕಾರ ರಚಿಸಿದರೂ ನೆಮ್ಮದಿ ಎಂಬುದು ದೂರವಾಗುವ ಎಲ್ಲಾ ಸಾಧ್ಯತೆಗಳು ಪ್ರಾರಂಭದಲ್ಲಿಯೇ ಕಂಡು ಬರುತ್ತಿದೆ.

ಬಿಜೆಪಿ ಪಾಲಿಗೆ ಫಲಿತಾಂಶ ಪ್ರಕಟವಾಗಿ ಎರಡೇ ದಿನಗಳಲ್ಲಿ ಮಿತ್ರ ಪಕ್ಷಗಳು ಕಿರಿಕ್ ಪಾರ್ಟಿಗಳಾಗಿ ಕಂಡು ಬರುತ್ತಿರುವುದು, ಹೊಸ ಹೊಸ ಬೇಡಿಕೆ ಮುಂದಿರಿಸುತ್ತಿರುವುದು ಸದ್ಯಕ್ಕೆ ಬಗೆಹರಿಸಲೇಬೇಕಾದ ಸವಾಲಾಗಿದೆ, ಅದರಲ್ಲಿಯೂ ತೆಲಗು ದೇಶಂನ ಚಂದ್ರಬಾಬು ನಾಯ್ಡು, ಸಂಯುಕ್ತ ಜನತಾದಳದ ನಿತೀಶ್ ಕುಮಾರ್ ತಮ್ಮ ರಾಜ್ಯದಲ್ಲಿ ಚುನಾವಣಾ ಸಂದರ್ಭ ನೀಡಿದ್ದ ಭರವಸೆಗಳನ್ನೆಲ್ಲಾ ಈಡೇರಿಸಿ ಎಂದು ಬಿಜೆಪಿ ಮೇಲೆ ಒತ್ತಡ ಹೇರುತ್ತಿದ್ದಾರೆ, ಮಹಾರಾಷ್ಟçದ ಶಿವಸೇನೆಯ ಏಕ್‌ನಾಥ್ ಶಿಂಧೆ ಕೂಡ ಮಂತ್ರಿಗಿರಿಗಾಗಿ ಪಟ್ಟಿ ತಯಾರಿಕೆಯಲ್ಲಿ ತೊಡಗಿದ್ದಾರೆ,

ಇಂಥ ಬೇಡಿಕೆ ಈಡೇರಿಸಲು ಬಿಜೆಪಿ ಮುಂದಾದರೆ, ಬಿಜೆಪಿ ಚುನಾವಣಾ ಪೂರ್ವದಲ್ಲಿ ದೇಶದಾದ್ಯಂತ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗದೇ ಕೈ ಕಟ್ಟಿ ಹಾಕುವ ದುಸ್ಥಿತಿಗೆ ಬರಲಿದೆ.

ಮುಖ್ಯವಾಗಿ, ಮೂರನೇ ಅವಧಿಗೆ ಅಧಿಕಾರ ಬಂದರೆ ದೇಶದಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುತ್ತೇವೆ, ಎಲ್ಲ ಜನರಿಗೂ ಏಕ ರೀತಿಯ ಕಾನೂನು ವ್ಯವಸ್ಥೆ ಇದಾಗಲಿದೆ ಎಂದು ಬಿಜೆಪಿ ಪ್ರಚಾರ ಮಾಡಿತ್ತು, ಆದರೆ ಈ ಬಗ್ಗೆ ಟಿಡಿಪಿ ಮತ್ತು ಜೆಡಿಯು ಪ್ರಾರಂಭದಿAದಲೇ ಪ್ರಬಲ ವಿರೋಧ ವ್ಯಕ್ತಪಡಿಸಿದ್ದವು, ಮುಸ್ಲಿಂ ಸಮುದಾಯಕ್ಕೆ ಧಕ್ಕೆ ಉಂಟು ಮಾಡುವ ಇಂಥ ಯಾವುದೇ ನೀತಿ ನಿಯಮಗಳ ಜಾರಿಗೆ ಮಿತ್ರ ಪಕ್ಷಗಳು ಬಿಜೆಪಿಗೆ ಅವಕಾಶ ಮಾಡಿಕೊಡುತ್ತವೆ ಎಂದು ನಂಬುವುದು ಕಷ್ಟ, ಇದೇ ರೀತಿ ಒಂದು ದೇಶ - ಒಂದು ಚುನಾವಣೆ ಎಂಬ ಮೋದಿಯವರ ವಿನೂತನ ಕಲ್ಪನೆಯನ್ನೂ ಈಗ ಮಿತ್ರರಾಗಿರುವ ಪಕ್ಷಗಳ ಪ್ರಮುಖರು ವಿರೋಧಿಸುತ್ತಲೇ ಬಂದಿದ್ದಾರೆ, ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆಯ ಬಿಜೆಪಿ ಪ್ರಯತ್ನಕ್ಕೂ ಮಿತ್ರ ಪಕ್ಷಗಳು ಅವಕಾಶ ನೀಡುವುದು ಸಂಶಯವೇ, ಈವರೆಗೆ ಮೋದಿಯವರ ಪ್ರಧಾನಿ ಕಾರ್ಯಾಲಯವೇ ಎಲ್ಲಾ ತೀರ್ಮಾನಗಳನ್ನು ಸಿದ್ಧಪಡಿಸಿ ಸಚಿವ ಸಂಪುಟ ಸಭೆಯಲ್ಲಿ ಇಡುತ್ತಿತ್ತು, ಇದಕ್ಕೆ ಸಚಿವರು ಸಮ್ಮತಿಯನ್ನು ಸೂಚಿಸುತ್ತಿದ್ದರು, ಎರಡೂ ಅವಧಿಯಲ್ಲಿಯೂ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸಚಿವರು ಮಾತನಾಡಿದ್ದೇ ಕಡಿಮೆ, ಮಾತನಾಡುವ ಅವಕಾಶ ಸಿಕ್ಕಿದ್ದೇ ಕಡಮೆ ಎಂಬAಥ ಪರಿಸ್ಥಿತಿಯಿತ್ತು, ಇದೀಗ ಮಿತ್ರ ಪಕ್ಷಗಳ ಅನುಮತಿ ಮುಖ್ಯವಾಗಿರುವುದರಿಂದಾಗಿ ಸರ್ಕಾರದ ತೀರ್ಮಾನಗಳೂ ಮೊದಲಿನಂತೆ ಏಕಪಕ್ಷೀಯವಾಗಿರುವುದಿಲ್ಲ, ಟಿಡಿಪಿ ಪಡೆದದ್ದು ೧೬, ಜೆಡಿಯು ಗಳಿಸಿದ್ದು ೧೨ ಸ್ಥಾನಗಳೇ ಆದರೂ ಬಿಜೆಪಿ ಎಂಬ ಅತ್ಯಧಿಕ ಸಂಸದರನ್ನು ಆಯ್ಕೆ ಮಾಡಿದ ಪಕ್ಷವೂ ಈ ಸಂಖ್ಯೆ ಮುಂದೆ ತಲೆ ಬಾಗಿ ಸರ್ಕಾರ ನಡೆಸಲೇ ಬೇಕಾದ ಅನಿವಾರ್ಯತೆಯ ಸುಳಿಯಲ್ಲಿ ಸಿಲುಕಿದ್ದು ರಾಜಕೀಯ ವಿಪರ್ಯಾಸ,

ಬಿಜೆಪಿ ಎರಡು ವರ್ಷಗಳ ಹಿಂದೆ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಜಾರಿಗೊಳಿಸಿದ ಅಗ್ನಿವೀರ್‌ಗೂ ಹಿನ್ನಡೆಯಾಗುವ ಸಾಧ್ಯತೆ ಇದೆ, ಜೆಡಿಯು ಸೇರಿದಂತೆ ರಾಮ್ ವಿನಾಸ್ ಪಾಸ್ವಾನ್ ನೇತೃತ್ವದ ಲೋಕಜನಶಕ್ತಿ ಪಕ್ಷ ಅಗ್ನಿವೀರ್ ಯೋಜನೆ ಮರು ಪರಿಶೀಲನೆಯಾಗಬೇಕೆಂದು ಒತ್ತಾಯಿಸಿದೆ, ದೇಶದ ೫೦ ಸಾವಿರ ಯುವಕ, ಯುವತಿಯರು ಈಗಾಗಲೇ ಅಗ್ನಿವೀರ್ ಯೋಜನೆಯಡಿ ಸೇನೆಗೆ ಸೇರ್ಪಡೆಯಾಗಿದ್ದು ಇದೀಗ ಅವರಲ್ಲಿಯೂ ಆತಂಕ ಕಂಡು ಬಂದಿದೆ, ದೇಶದಾದ್ಯಂತ ಜಾತಿ ಗಣತಿ ಮಾಡಿ ಎಂಬ ಬೇಡಿಕೆಯನ್ನೂ ಜೆಡಿಯು ಮುಂದಿಡುವ ಸಾಧ್ಯತೆ ಹೆಚ್ಚಾಗಿದೆ.

ವಿಶೇಷ ಸ್ಥಾನ ಮಾನದ ಬೇಡಿಕೆ

ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷ ಸ್ಥಾನಮಾನದ ಸೌಲಭ್ಯ ಈಗ ರಚನೆಯಾಗಲಿರುವ ಎನ್‌ಡಿಎ ನೇತೃತ್ವದ ಸರ್ಕಾರದಲ್ಲಿ ದೊರಕುವ ಎಲ್ಲಾ ಸಾಧ್ಯತೆಗಳಿದೆ.

ಎನ್‌ಡಿಎ ಸರ್ಕಾರದ ಪ್ರಮುಖ ಮೈತ್ರಿಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಹಲವಾರು ವರ್ಷಗಳ ಹಿಂದೆಯೇ ತಮ್ಮ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರವನ್ನು ಸಾಕಷ್ಟು ಬಾರಿ ಗೋಗರೆದು ವಿಫಲವಾಗಿದ್ದವು, ಆದರೆ ಇದೀಗ ಕೇಂದ್ರ ಸರ್ಕಾರದಲ್ಲಿ ಈ ನಾಯಕರೇ ಪ್ರಮುಖರಾಗಿರುವುದರಿಂದಾಗಿ ವಿಶೇಷ ಸ್ಥಾನಮಾನದ ಬೇಡಿಕೆಗೆ ಮನ್ನಣೆ ದೊರಕುವ ಸಂಭವವಿದೆ.

ಭೌಗೋಳಿಕ ಸಮಸ್ಯೆ, ಆದಿವಾಸಿ ಜನಾಂಗವಿರುವ ರಾಜ್ಯಗಳು, ಕಡಿಮೆ ಜನಸಂಖ್ಯೆಯುಳ್ಳ ಪ್ರಾಂತ್ಯಗಳು, ಆರ್ಥಿಕವಾಗಿ ಹಿಂದುಳಿದಿರುವ ರಾಜ್ಯಗಳಿಗೆ ಇಂಥ ಸ್ಥಾನ ನೀಡುವ ಮೂಲಕ ರಾಜ್ಯಗಳ ಶ್ರೇಯೋಭಿವೃದ್ಧಿಗೆ ಅವಕಾಶ ನೀಡುವ ಪ್ರಸ್ತಾಪ ಇದಾಗಿತ್ತು, ಆದರೆ ೧೪ ನೇ ಹಣಕಾಸು ಆಯೋಗವು ಆರ್ಥಿಕ ಸಂಕಷ್ಟ ತಲೆದೋರುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಶೇಷ ಸ್ಥಾನ ಮಾನದ ಪ್ರಸ್ತಾವನೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಿಲ್ಲ.

ಕೆಲವು ವರ್ಷಗಳ ಹಿಂದೆ ಅಖಂಡ ಆಂಧ್ರಪ್ರದೇಶವನ್ನು ಇಬ್ಬಾಗ ಮಾಡಿ ಆಂಧ್ರ ಮತ್ತು ತೆಲಂಗಾಣ ಎಂದು ವಿಭಜಿಸಿದ ಪರಿಣಾಮ, ಆಂಧ್ರ ಪ್ರಗತಿಯಲ್ಲಿ ಹಿಂದುಳಿದಿತ್ತು, ಈ ಸಂದರ್ಭ ಎನ್‌ಡಿಎ ಮಿತ್ರಪಕ್ಷದ ನಾಯಕರಾಗಿದ್ದ ಚಂದ್ರಬಾಬು ನಾಯ್ಡು ಹಲವಾರು ಬಾರಿ ದೆಹಲಿಗೆ ತೆರಳಿ ವಿಶೇಷ ಸ್ಥಾನಮಾನ ನೀಡಿ ಎಂದು ಬೇಡಿಕೆ ಮಂಡಿಸಿದರು ವಿಪರ್ಯಾಸ ಎಂದರೆ ನಾಯ್ಡು ಈ ರೀತಿ ದೆಹಲಿಗೆ ತೆರಳಿದಾಗಲೆಲ್ಲಾ ಅವರಿಗೆ ಸೂಕ್ತ ಸ್ಪಂದನ ದೊರಕುವುದು ಹೋಗಲಿ, ಬಿಜೆಪಿ ನಾಯಕರು ಅವರನ್ನು ಮಾತೇ ಆಡಿಸಲು ಸಮಯ ನೀಡುತ್ತಿರಲಿಲ್ಲ, ಇದು ನಾಯ್ಡು ಅವರಿಗೆ ಆಂಧ್ರದಲ್ಲಿ ತೀವ್ರ ಮುಖಭಂಗಕ್ಕೂ ಕಾರಣವಾಗಿ ಮೋದಿ ವಿರುದ್ಧ ಟೀಕಾಸ್ತçಕ್ಕೆ ಕಾರಣವೂ ಆಗಿತ್ತು.

೨೦೧೫ ರಲ್ಲಿ ಕೇಂದ್ರದ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ, ೨೦೨೩ ರಲ್ಲಿ ಮಂತ್ರಿಯಾಗಿದ್ದ ನಿರ್ಮಲಾ ಸೀತಾರಾಮ್ ಕೂಡ ಈ ಬೇಡಿಕೆಗೆ ಮನ್ನಣೆ ನೀಡಲಿಲ್ಲ,

ಬಿಹಾರದಲ್ಲಿ ಕೂಡ ಇದೇ ಸೌಲಭ್ಯಕ್ಕೆ ಬೇಡಿಕೆ ತೀವ್ರವಾಗಿತ್ತು, ೨೦೦೮ ಮತ್ತು ೨೦೦೯ ರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್, ಯಾವ ಸರ್ಕಾರ ಬಿಹಾರಕ್ಕೆ ವಿಶೇಷ ಸ್ಥಾನ ನೀಡುತ್ತದೆಯೋ ಅಂಥ ಸರ್ಕಾರಕ್ಕೆ ತಮ್ಮ ಬೆಂಬಲ ಎಂದು ಘೋಷಿಸಿದ್ದರು, ಆದರೆ ಯಾವ ಸರ್ಕಾರಗಳೂ ಈವರೆಗೂ ಬಿಹಾರಕ್ಕೆ ಕೇಳಿದ್ದ ಬೇಡಿಕೆ ಈಡೇರಿಸುವ ಗೋಜಿಗೇ ಹೋಗಿರಲಿಲ್ಲ.

ಪ್ರಸ್ತುತ, ಆಂಧ್ರ ಸರ್ಕಾರ ತೀವ್ರ ರೀತಿಯಲ್ಲಿ ಆರ್ಥಿಕ ಮುಗ್ಗಟ್ಟಿನಲ್ಲಿದೆ, ಈ ಸರ್ಕಾರದ ಸಾಲವೇ ೩,೦೫ ಲಕ್ಷ ಕೋಟಿ ರೂಪಾಯಿಗಳಷ್ಟಿದೆ, ಇಬ್ಬಾಗದಿಂದಾಗಿ ಆಂಧ್ರಕ್ಕೆ ಅನ್ಯಾಯವಾಗಿದೆ ಎಂದೂ ಅಲ್ಲಿನವರು ವಾದ ಮಂಡಿಸುತ್ತಿದ್ದಾರೆ,

೨೦೧೮ ರಲ್ಲಿ ಮೋದಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಟಿಡಿಪಿಯ ಗಜಪತಿ ರಾಜು ಮತ್ತು ಸತ್ಯನಾರಾಯಣ ಚೌಧುರಿ ಅವರನ್ನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದ ನಾಯ್ಡು ಕೇಂದ್ರ ಸರ್ಕಾರದ ತಾರತಮ್ಯದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ೨೦೧೯ ರ ವಿಧಾನಸಭಾ ಚುನಾವಣೆಯಲ್ಲಿ ಇದೇ ಚಂದ್ರಬಾಬು ನಾಯ್ಡು, ಬಿಜೆಪಿಯ ಮೋದಿ ವಿರುದ್ದ ತೀವ್ರ ಟೀಕೆಗಳ ಪ್ರಚಾರ ಕೈಗೊಂಡಿದ್ದರು.

ಆದರೆ ಬದಲಾದ ಪರಿಸ್ಥಿತಿಯಲ್ಲಿ ೫ ವರ್ಷಗಳ ಬಳಿಕ ಆಂಧ್ರದಲ್ಲಿ ಸಾಕಷ್ಟು ನೀರು ಹರಿದಿದೆ, ನಾಯ್ಡು ಮತ್ತು ಮೋದಿ ಈಗ ಸ್ನೇಹಿತರಾಗಿದ್ದಾರೆ ಹೀಗಾಗಿ ಕೊನೆಗೂ ವಿಶೇಷ ಸ್ಥಾನಮಾನದ ಬೇಡಿಕೆ ಈಡೇರಲಿದೆ ಎಂಬ ಆಶಾಭಾವನೆಯಲ್ಲಿ ಆಂಧ್ರದ ಜನರಿದ್ದಾರೆ.

ಆಂಧ್ರಕ್ಕೆ ಏನಾದರೂ ವಿಶೇಷ ಸ್ಥಾನಮಾನದ ಸೌಲಭ್ಯ ದೊರಕಿದ್ದೇ ಆದಲ್ಲಿ ಕೇಂದ್ರದಿAದ ವಾರ್ಷಿಕ ಸುಮಾರು ೬ ಸಾವಿರ ಕೋಟಿ ರೂಪಾಯಿ ಈ ರಾಜ್ಯಕ್ಕೆ ಪಾವತಿಯಾಗಲಿದೆ, ತೆರಿಗೆ ವಿನಾಯಿತಿ, ಎಕ್ಸ್ಸೈಸ್ ತೆರಿಗೆಯಲ್ಲಿಯೂ ವಿನಾಯಿತಿ, ಜಿಎಸ್‌ಟಿ ರಹಿತ ಸೇವೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ತೆರಿಗೆಗಳಿಂದ ಮುಕ್ತಿ ಇತ್ಯಾದಿ ಮಹತ್ವದ ವಿನಾಯಿತಿ ಸೌಲಭ್ಯಗಳು ಆಂಧ್ರದ ಜನತೆಗೆ ಲಭಿಸಲಿದೆ, ಹೊಸ ಕೈಗಾರಿಕೆಗಳು, ಹೆದ್ದಾರಿಗಳು, ಉದ್ಯಮಗಳು ಆಂಧ್ರದಲ್ಲಿ ತಲೆ ಎತ್ತಲು ಈ ಸೌಲಭ್ಯ ಕಾರಣವಾಗಲಿದೆ, ಇಂಥ ಅವಕಾಶವನ್ನು ಈ ಸಂದರ್ಭ ನಾಯ್ಡು ಬಿಟ್ಟಾರೆಯೇ? ಇದೇನಾದರೂ ಜಾರಿಯಾದರೆ ಆಂಧ್ರದಲ್ಲಿ ಹಲವಾರು ವರ್ಷಗಳ ಕಾಲ ನಾಯ್ಡು ಅವರೇ ಪ್ರಶ್ನಾತೀತ ನಾಯಕರಾಗಿ ಮುಂದುವರೆಯಲಿದ್ದಾರೆ.

ಹಳೇ ಮಂತ್ರಿಗಳಿಗೆ ಕೊಕ್?

ಕಳೆದ ಅವಧಿಯಲ್ಲಿ ಕೇಂದ್ರದಲ್ಲಿದ್ದ ಹಲವಾರು ಮಂದಿ ಮತ್ತೆ ಮೂರನೇ ಅವಧಿಯ ಸರ್ಕಾರದಲ್ಲಿ ಮಂತ್ರಿಯಾಗುವುದು ಸಂಶಯವಿದೆ, ಸ್ಮತಿ ಇರಾನಿ, ರಾಜೀವ್ ಚಂದ್ರಶೇಖರ್, ಅರ್ಜುನ್ ಮುಂಡಾ ಸೇರಿದಂತೆ ಕಳೆದ ಸಲ ಮಂತ್ರಿಗಳಾಗಿದ್ದ ೧೯ ಮಂದಿ ಚುನಾವಣೆಯಲ್ಲಿ ಸೋತಿದ್ದಾರೆ, ಮೂರನೇ ಅವಧಿಯಲ್ಲಿ ಬಿಜೆಪಿಯಿಂದ ಅನೇಕ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆ ನಿಚ್ಚಳವಾಗಿದೆ, ಸೋಲು ಕಂಡ ಹಿರಿಯರಿಗೆ ರಾಜ್ಯಸಭಾ ಸ್ಥಾನ ನೀಡುವ ಚಿಂತನೆಯೂ ಇದೆ, ರಾಜ್ಯಗಳು, ಜಾತಿಗಳ ಆಧಾರದಲ್ಲಿ ಹೊಸ ಮಂತ್ರಿ ಮಂಡಲ ರಚನೆಯಾಗಲಿದೆ ಎಂದು ಕೇಂದ್ರ ನಾಯಕರು ತಿಳಿಸಿದ್ದಾರೆ,

ರೇಲ್ವೇ, ಕೃಷಿ, ಕೈಗಾರಿಕೆ, ವಾಣಿಜ್ಯ, ರಸ್ತೆ ಅಭಿವೃದ್ಧಿ ಮುಂತಾದ ಪ್ರಮುಖ ಖಾತೆಗಳಿಗೆ ಮಿತ್ರ ಪಕ್ಷಗಳು ಪಟ್ಟು ಹಿಡಿಯುವ ನಿರೀಕ್ಷೆಯಿದೆ, ಕರ್ನಾಟಕದಿಂದ ಜೆಡಿಎಸ್‌ನ ಕುಮಾರಸ್ವಾಮಿ ಮಂತ್ರಿಯಾಗುವ ಎಲ್ಲಾ ಸಾಧ್ಯತೆಗಳಿದ್ದು, ಕೃಷಿ ಖಾತೆ ಕೊಟ್ಟರೆ ಉತ್ತಮ ಎಂದು ಕುಮಾರಸ್ವಾಮಿ ಹೇಳಿದ್ದಾರೆ, ವಾಣಿಜ್ಯ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಕೂಡ ಕರ್ನಾಟಕ ಮತ್ತು ಬ್ರಾಹ್ಮಣ ಕೋಟದಡಿ ಸಚಿವರಾಗಲಿದ್ದಾರೆ,

ನೆನಪಿರಲಿ, ೫೪೩ ಸಂಸದರ ನೂತನ ಲೋಕಸಭೆಯಲ್ಲಿ ಈ ಬಾರಿ ೨೮೦ ಸಂಸದರು ಅಂದರೆ ಶೇ. ೫೫ ರಷ್ಟು ಹೊಸ ಮುಖ ಕಾಣಲಿದೆ, ಹೀಗಾಗಿ ನವಚಿಂತನೆ, ಹೊಸ ಯೋಜನೆಗಳನ್ನೂ ೧೮ನೇ ಲೋಕಸಭೆಯಲ್ಲಿ ನಿರೀಕ್ಷೆ ಮಾಡಬಹುದಾಗಿದೆ,

ಇದೇ ಭಾನುವಾರ ಮೂರನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಮಿತ್ರ ಪಕ್ಷಗಳಿಗೂ ಅಚ್ಚೇ ದಿನ್ ಅಂದಿನಿAದ ಪ್ರಾರಂಭವಾಗಲಿದೆ! ಸದ್ಯಕ್ಕಂತೂ ನಮ್ಮದೇನೂ ಹೊಸ ಬೇಡಿಕೆಗಳಿಲ್ಲ ಎಂದು ಹೇಳಿಕೊಂಡರೂ, ಮೈತ್ರಿ ಅಂದ ಮೇಲೆ ಕೊಡು - ಕೊಳ್ಳು ಲೆಕ್ಕಾಚಾರ ಇರುವುದಿಲ್ಲ ಎಂಬುದನ್ನು ನಂಬದಷ್ಟು ಮುಗ್ದರು...., ಭಾರತೀಯರೇನಲ್ಲ!