ಮಡಿಕೇರಿ, ಜೂ. ೭ : ಓಡು ಹುಳದ ಬಣ್ಣ ಗಾಢ ಕಪ್ಪು. ನೋಡಲು ಗುಗ್ಗುರು ಹುಳದಂತಿದ್ದು, ಗಾತ್ರದಲ್ಲಿ ಗುಗ್ಗುರುಗಿಂತ ಸ್ವಲ್ಪ ದೊಡ್ಡದು. ಓಡು ಹುಳದ ಮೈಮೇಲಿನ ರೆಕ್ಕೆಗಳನ್ನು ಎರಡೆಳೆ ಗಟ್ಟಿ ಕವಚವು ಮುಚ್ಚಿಕೊಂಡಿದೆ. ಇದರ ಹಾರಾಟ ಕಮ್ಮಿ. ನೆಲ, ಗೋಡೆಯ ಮೇಲೆ ಹರಿದಾಟವೇ ಜಾಸ್ತಿ. ಮದೆನಾಡು, ಸಂಪಾಜೆ ಭಾಗಗಳಲ್ಲಿ ಈಗ ಓಡು ಹುಳದ ಹಾವಳಿ ತಾರಕಕ್ಕೇರಿದ್ದು, ಇಲ್ಲಿನ ನಿವಾಸಿಗಳಿಗೆ ಮನೆಯೊಳಗೆ ನೆಮ್ಮದಿಯಾಗಿರಲು ಆಗದಂಥ ಸ್ಥಿತಿ! ಇದರಿಂದಾಗಿ ಕೆಲವೆಡೆ ಹೈರಾಣಾದ ಜನರು ಮನೆಬಿಟ್ಟು ಬೇರೆಡೆ ತಮ್ಮ ವಸತಿಯನ್ನು ಬದಲಿಸಲು ಚಿಂತಿಸುತ್ತಿದ್ದಾರೆ.

ಮೇ ತಿಂಗಳಿನ ಅಂತ್ಯದಲ್ಲಿ ಮುಂಗಾರು ಆಗಮನದ ಸೂಚನೆ. ದಿನ ಬಿಟ್ಟು ದಿನ ಬೀಳುವ ಮಳೆ, ತೇವಗೊಳ್ಳುವ ಪರಿಸರ, ಆದರೂ ಕಡಿಮೆ ಯಾಗದ ಬಿಸಿಲಿನ ಉಷ್ಣ. ಈ ರೀತಿಯ ವಾಯುಗುಣ ಸಾಮಾನ್ಯವಾಗಿ ಜೂನ್ ಮೊದಲ ವಾರದ ತನಕ ಕಾಣಬಹುದು. ಇಂತಹ ವಾತಾವರಣದಲ್ಲಿ, ನಿರ್ದಿಷ್ಟವಾಗಿ ಸಾಯಂಕಾಲದ ವೇಳೆ ಓಡು ಹುಳಗಳು ರಾಶಿ ಸಂಖ್ಯೆಯಲ್ಲಿ ಆಗಸದಿಂದ ಜೇನು ನೊಣಗಳ ತರಹ ಸದ್ದು ಹೊಮ್ಮಿಸುತ್ತಾ ಹಳತಾದ ಹೆಂಚಿನ ಮಾಡು ಇರುವ ಮನೆಯನ್ನು ಪ್ರವೇಶಿಸುತ್ತವೆ. ಈ ಹುಳವು ಬದುಕುವ ನೋಟದಿಂದ ಕೇವಲ ಹೆಂಚಿನ ಮನೆಯನ್ನಷ್ಟೇ ಜೀವಿಸಲು ಆಯ್ಕೆ ಮಾಡಿಕೊಳ್ಳುತ್ತದೆ. ಸ್ಥಳೀಯ ಭಾಷೆಯಲ್ಲಿ ಹೆಂಚಿಗೆ ‘ಓಡು’ ಎಂದು ಕರೆಯುವ ಕಾರಣ ಇದಕ್ಕೆ ಓಡು ಹುಳವೆಂದು ಹೆಸರಿಸಿರಬಹುದು.

ಮನೆಯ ಹೆಂಚಿನ ಮಾಡಿನ ಸಂಧಿಯಲ್ಲಿ, ಮರದ ಪಕ್ಕಾಸು ರೀಪಿನ ಎಡೆಗಳಲ್ಲಿ, ಕಿಟಕಿಯ ಬಿರುಕಿನಲ್ಲಿ ಓಡು ಹುಳಗಳು ಸೇರಿಕೊಂಡರೆ ಮುಗೀತು! ಆ ಮನೆಮಂದಿಗೆ ಇದರ ಕಾಟ ತಪ್ಪಿದ್ದಲ್ಲ. ರಾತ್ರಿ ಆದೊಡನೆ ಓಡು ಹುಳ ಹೊಕ್ಕ ಮನೆಯ ಜನರಿಗೆ ದಿಗಿಲು ಹೆಚ್ಚಾಗ ತೊಡಗುತ್ತದೆ. ಲೈಟು ಬೆಳಕಿಗೆ ಆಕರ್ಷಣೆಗೊಂಡ ಈ ಹುಳಗಳು ಬೆಳಕೂ ಕೂಡ ಕಾಣದಂತೆ ಲೈಟು ಪೂರ್ತಿ ಆವರಿಕೊಂಡುಬಿಡುವವು.

(ಮೊದಲ ಪುಟದಿಂದ) ಊಟದ ಸಂದರ್ಭ; ಅನ್ನದ ತಟ್ಟೆಗೆ, ಸಾಂಬಾರು ಪಾತ್ರೆಯೊಳಕ್ಕೇ ಈ ಹುಳವು ಒಂದೊAದಾಗಿ ಉದುರತೊಡಗುತ್ತವೆ. ಹೀಗೆ ಮನುಷ್ಯರಿಗೆ ತಮ್ಮ ಆಹಾರ ತಿನ್ನಲೂ ರೇಜಿಗೆ ಹುಟ್ಟಿಸುವುದು. ತನ್ನ ಜೀವರಕ್ಷಣೆಗೆ ಓಡು ಹುಳಗಳು ಮನುಷ್ಯನಿಗೆ ಭೀತಿ ಮೂಡಿಸುವ ನೆಪದಿಂದ ತಲೆಕೂದಲ ಸುತ್ತ ಎರಗುತ್ತವೆ. ಆದರೆ ಈ ವಿಚಿತ್ರ ಜೀವಿ ಕಚ್ಚದು! ಹಾಗಂತ ಇದು ಪಾಪದ ಕೀಟವಲ್ಲ. ಮನುಷ್ಯರಿಗೆ ಕಚ್ಚದಿದ್ದರೂ ಇನ್ನೊಂದು ರೀತಿಯಲ್ಲಿ ಹಿಂಸೆ. ಧರಿಸಿದ ಬಟ್ಟೆಯೊಳಗೆ ಪ್ರವೇಶಿಸುವ ಓಡು ಹುಳವು ಮೈಮೇಲೆಲ್ಲಾ ಹರಿದಾಡಲು ಮೊದಲುಗೊಳ್ಳುತ್ತದೆ. ಆಗ ಕೈಹಾಕಿ ಈ ಹುಳವನ್ನು ಹಿಚುಕಿ ತೆಗೆದರೆ, ಆ ಭಾಗದ ಚರ್ಮದ ಮೇಲೆ ಸುಟ್ಟ ರೀತಿಯ ಕಲೆಗಳಾಗುತ್ತವೆ. ಹೀಗಾಗಲು ಕಾರಣ ಓಡುಹುಳದ ದೇಹದೊಳಗಿರುವ ಆಸಿಡ್ ರೀತಿಯ ಮೂರಿ ಭರಿತ ಅಂಶ.

ಮಳೆಗಾಲ ಮುಗಿಯುತ್ತಿದ್ದಂತೆ ಓಡು ಹುಳಗಳ ಸಂತಾನ ಓತಪ್ರೋತ ಹಿಗ್ಗಿರುತ್ತದೆ. ಮನೆಯ ಹೆಂಚಿನ ಸಂಧಿಯಲ್ಲೆಲ್ಲಾ ಜೊಂಕೆ ಜೊಂಕೆ ಹುಳಗಳು! ಉತ್ತರ ಕೊಡಗಿನ ವ್ಯಾಪ್ತಿಯ ನಿವಾಸಿಗಳಿಗೆ ಈ ಹುಳಗಳಿಂದ ಮುಕ್ತಿ ಬೇಕಿದೆ. ಸಂಪಾಜೆ-ಪೆರಾಜೆ ಭಾಗದಲ್ಲಿನ ಜನರು ಓಡು ಹುಳಗಳನ್ನು ಓಡಿಸಲು ದ್ರವರೂಪದ ಔಷಧಿಯನ್ನು ಅನೇಕ ಬಾರಿ ಸಿಂಪಡಿಸಿದ್ದಿದೆ. ಆದರೆ ಏನೂ ಪ್ರಯೋಜನವಾಗಿಲ್ಲ. ಅದೆಲ್ಲಿಂದಲೋ ಹಾರಿಬಂದ ಓಡು ಹುಳಗಳ ಮತ್ತೊಂದು ಪಡೆ ಪುನಃ ಮನೆಯೊಳಕ್ಕೆ ಪ್ರವೇಶಿಸಿರುತ್ತದೆ!

ಹೀಗೆ ಮಳೆಗಾಲ ಸಮೀಸುತ್ತಿದ್ದಂತೆ ಮದೆನಾಡಿನಿಂದ ಕೆಳಭಾಗ ಪೆರಾಜೆ ಗ್ರಾಮದ ತನಕದ ನಿವಾಸಿಗಳು ಓಡು ಹುಳಗಳ ನೆನೆಸಿಯೇ ಬೆಚ್ಚಿಬೀಳುವ ಪರಿಸ್ಥಿತಿ. ಕೊಡಗಿನಲ್ಲಿ ಒಂದೆಡೆ ಕೃಷಿಗೆ ಆನೆಗಳಿಂದ ಕಂಟಕ, ಇನ್ನೊಂದೆಡೆ ಮನೆಯೊಳಗೇ ಓಡು ಹುಳಗಳಿಂದ ಅವಾಂತರ! ಹೀಗಾದರೆ ಮನುಷ್ಯ ಬದುಕುವುದು ಹೇಗೆಂದು ಯೋಚಿಸುವಂತಾಗಿದೆ. ತಲತಲಾಂತರದಿAದ ಬಂದ ಹಳ್ಳಿಯ ಸಹಜ ಜೀವನಬಿಟ್ಟು ಎಲ್ಲರೂ ಪಟ್ಟಣದ ಕಡೆ ಗುಳೆ ಹೋಗಬೇಕಾ?! ಎಂಬ ಪ್ರಶ್ನೆ.

ಕಳೆದ ನಾಲ್ಕು ವರ್ಷಗಳಿಂದ ಈಚೆಗೆ ಓಡು ಹುಳಗಳ ಸಂತತಿ ವಿಪರೀತ ಏರಿಕೆಯಾಗಿರುವುದು ಇಲ್ಲಿನ ಗ್ರಾಮಸ್ಥರಿಗೆ ಅನುಭವಕ್ಕೆ ಬಂದಿದೆ. ಮನೆಮಂದಿ ಸ್ವಸ್ಥವಾಗಿ ನಿದ್ರಿಸುವುದು ಕಷ್ಟ ಎಂಬಾತಾಗಿದೆ. ಮಲಗುವ ಕೋಣೆಯ ಹಾಸಿಗೆಯನ್ನೂ ಬಿಡದೆ ಓಡು ಹುಳಗಳು ಸೇರಿಕೊಳ್ಳುವುದಿವೆ.

ಹೀಗಾಗಿ ಓಡು ಹುಳಗಳ ನಿರ್ಮೂಲನೆಗೆ ಜಿಲ್ಲಾಡಳಿತ ಶೀಘ್ರ ಕ್ರಮಕೈಗೊಳ್ಳುವುದು ಅವಶ್ಯಕವಾಗಿದೆ. -ಅಕ್ಷಯ ಕಾಂತಬೈಲು