ಶನಿವಾರಸಂತೆ, ಜೂ. ೭: ಸಮೀಪದ ಬಾಗೇರಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀರಾಮೇಶ್ವರ ಸ್ವಾಮಿ ದೇವಾಲಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಶ್ರದ್ಧಾಭಕ್ತಿಯಿಂದ ನಡೆಯಿತು.

ಭಾನುವಾರ ರಾತ್ರಿ ದೇವಾಲಯದ ಪುರೋಹಿತ ಶಂಕರನಾರಾಯಣ ಭಟ್ ಅವರ ನೇತೃತ್ವದಲ್ಲಿ ಅರ್ಚಕರಾದ ರಾಮಮೂರ್ತಿ, ನಾಗೇಶ್ ಭಟ್, ರವಿಭಟ್ ಹಾಗೂ ತಂಡದವರು ಮಹಾಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ನವಗ್ರಹ, ಮೃತ್ಯುಂಜಯ, ಅಷ್ಟದಿಕ್ಪಾಲಕರು, ವಾಸ್ತುಪೂಜೆ, ಮತ್ತು ಹೋಮವಿಧಿ ದಿಕ್ ಬಲಿ ಪ್ರಧಾನ ಸೂತ್ರ ಪರಿವೇಷ್ಟನೆ ಪೂಜೆ ನೆರವೇರಿಸಿದರು.

ಸೋಮವಾರ ಪ್ರಾತಃಕಾಲ ೫-೩೦ ರಿಂದ ಗಂಗಾಪೂಜೆ ನಡೆಯಿತು. ನಂತರ ಗ್ರಾಮ ದ್ವಾರದಿಂದ ಕಲಶಹೊತ್ತ ಮಹಿಳೆಯರು, ವೀರಗಾಸೆ, ಕೊಂಬು, ಕಹಳೆ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ನಡೆಯಿತು. ನಂತರ ದೇವಾಲಯದಲ್ಲಿ ಬ್ರಹ್ಮಕಲಶ ಪೂಜೆ, ದೇವಾಲಯ ಪ್ರವೇಶ, ಬ್ರಹ್ಮಕಲಶ ಸ್ಥಾಪನೆ, ಸ್ವಾಮಿಗೆ ಫಲ ಪಂಚಾಮೃತ ಪೂರ್ವಕ ಏಕದಶÀ ರುದ್ರಾಭಿಷೇಕ, ಅಲಂಕಾರ ಸೇವೆ, ರುದ್ರ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನಡೆದು ತೀರ್ಥಪ್ರಸಾದ ವಿನಿಯೋಗವಾಯಿತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಜೀರ್ಣೋದ್ಧಾರ ಹಾಗೂ ಉದ್ಘಾಟನಾ ಸಮಾರಂಭದ ರೂವಾರಿ ದಾನಿ ಹಾಗೂ ಉದ್ಯಮಿ ಮಧು, ಪ್ರಥಮ ದರ್ಜೆ ಗುತ್ತಿಗೆದಾರ ಟಿ.ಆರ್. ಪುರುಷೋತ್ತಮ್, ಶ್ರೀರಾಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸತೀಶ್, ಪದಾಧಿಕಾರಿಗಳಾದ ಬಿ. ರಾಜು, ಬಿ.ಡಿ. ರಾಜು, ಇತರರು ಹಾಜರಿದ್ದರು.

ಸಭಾ ಕಾರ್ಯಕ್ರಮ: ಮಧ್ಯಾಹ್ನ ದೇವಸ್ಥಾನ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.

ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಗ್ರಾಮದಲ್ಲಿ ಶಾಲೆಯೊಂದು ನಿರ್ಮಾಣವಾದರೆ ಅದು ಜ್ಞಾನ ದೇಗುಲವೆನಿಸುತ್ತದೆ. ದೇವಾಲಯ ನಿರ್ಮಾಣವಾದರೆ ಪ್ರಾರ್ಥನೆಯಿಂದ ಶಾಂತಿ-ನೆಮ್ಮದಿ ನೆಲೆಸುವ ತಾಣವಾಗುತ್ತದೆ. ದೇವರ ಆಶೀರ್ವಾದವಿದ್ದರೆ ಜೀವನದಲ್ಲಿ ಎಲ್ಲವನ್ನೂ ಸಾಧಿಸಬಹುದು ಎಂದರು.

ಹಾಸನ ಎ.ವಿ. ಕಾಂತಮ್ಮ ಕಾಲೇಜಿನ ಪ್ರಾಂಶುಪಾಲ ಹಾಗೂ ಸಾಹಿತಿ ಡಾ. ಸಿ.ಚ. ಯತೀಶ್ವರ್ ಧರ್ಮ ಪ್ರವಚನ ನೀಡಿ, ಭಾರತೀಯ ಸಂಸ್ಕೃತಿ ಜಗತ್ತಿನಲ್ಲೆ ಶ್ರೇಷ್ಠ ಪರಂಪರೆಯ ಸಂಸ್ಕೃತಿಯೆನಿಸಿದೆ. ಭರತ ಖಂಡಕ್ಕೆ ವಿಶ್ವದಲ್ಲೆ ಒಂದು ಉನ್ನತ ಸ್ಥಾನವಿದೆ. ಮಾನಸಿಕ ನೆಮ್ಮದಿ ನೀಡುವ ತಾಣ ದೇವಾಲಯವಾಗಿದ್ದು ಬದುಕಿಗೆ ಬಲ ತಂದು ಕೊಡುವ ಸಂಕೇತವಾಗಿದೆ. ಭಾರತೀಯ ದೇಗುಲಗಳಿಗೆ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವ ಶಕ್ತಿಯಿದೆ. ದ್ವೇಷ, ಕ್ರೋಧ, ಅಸಹನೆ ಬಿಟ್ಟಾಗ ಮನುಷ್ಯನ ವ್ಯಕ್ತಿತ್ವ ಸುಂದರವಾಗುತ್ತದೆ ಎಂದರು.

ಶನಿವಾರಸAತೆ ವಲಯ ಅರಣ್ಯಾಧಿಕಾರಿ ಗಾನಶ್ರೀ ಮಧುಸೂದನ್ ಮಾತನಾಡಿ, ಧಾರ್ಮಿಕತೆಯಲ್ಲಿ ವಿಶೇಷತೆ ಇರುವಂತೆ ಓಂ ಉದ್ಘಾರದಲ್ಲಿ ದೈವೀಕತೆಯಿದೆ. ಮಕ್ಕಳಲ್ಲಿ ದೇವರು, ಪೂಜೆ, ಆಚಾರ-ವಿಚಾರಗಳ ಅರಿವು ಮೂಡಿಸಬೇಕು. ಮಕ್ಕಳಿಗೆ ಯಾಂತ್ರಿಕ ಶಿಕ್ಷಣದ ಬದಲು ದೇವಾಲಯದ ದೈವೀಕ್ರಿಯೆಯ ಅರಿವು ಮೂಡಿಸಬೇಕು ಎಂದರು.

ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಭಾರತೀಯ ಧಾರ್ಮಿಕತೆ ಮತ್ತು ಸಂಸ್ಕೃತಿಯನ್ನು ಉಳಿಸುವುದು ಎಲ್ಲರ ಕರ್ತವ್ಯ.ರಾಮೇಶ್ವರ ದೇವಾಲಯ ಜೀರ್ಣೋದ್ಧಾರಕ್ಕಾಗಿ ಶ್ರಮಿಸಿದವರ ಪರಿಶ್ರಮವನ್ನು ಗೌರವಿಸುವುದು ಮುಖ್ಯವಾಗಿದೆ ಎಂದರು.

ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಕೂಡಿ ಬಾಳುವುದೇ ಜೀವನ ಎಂದರು.

ಕಾರ್ಯಕ್ರಮದಲ್ಲಿ ವೀರಗಾಸೆ ಕಲಾವಿದರಾದ ಹುದ್ದೂರು ರವಿ ಮತ್ತು ನೀರುಗುಂದ ಶಿವರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಮ್ಯಾ ಸಹೋದರಿಯರು ಗೀತೆಗಳನ್ನು ಹಾಡಿದರು. ವೇದಿಕೆಯಲ್ಲಿದ್ದ ದಾನಿಗಳು, ಸಭಾ ಗಣ್ಯರು ಹಾಗೂ ಕಾರ್ಯಕರ್ತರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ದಾನಿ ಬಾಗೇರಿ ಮಧು, ಉದ್ಯಮಿಗಳಾದ ಸಂತೋಷ್, ಯತೀಶ್, ಪ್ರವೀಣ್ ಕುಮಾರ್, ಪ್ರಥಮ ದರ್ಜೆ ಗುತ್ತಿಗೆದಾರ ಟಿ.ಆರ್. ಪುರುಷೋತ್ತಮ್, ಪ್ರಮುಖರಾದ ಜಾಗೇನಳ್ಳಿ ಮಾಲತೇಶ್, ಟಿ.ಎಸ್. ಮಂಜುನಾಥ್, ಆನಂದ್ ಕುಮಾರ್, ಕಾಂತರಾಜ್, ಕೇಶವ ಮೂರ್ತಿ, ಶಿಕ್ಷಕರಾದ ಕೆ.ಪಿ. ಜಯ ಕುಮಾರ್, ಬಾಗೇರಿ ಶಶಿಕಾಂತ್, ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಧಾ, ಸದಸ್ಯೆ ಸುವರ್ಣ, ಬೆಳೆಗಾರ ಹೆಚ್.ಪಿ. ಮೋಹನ್, ದೇವಸ್ಥಾನ ಸಮಿತಿ ಅಧ್ಯಕ್ಷ ಸತೀಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಘ್ನೇಶ್ವರ ಬಾಲಕಿಯರ ಶಾಲಾ ಶಿಕ್ಷಕ ಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಕೃಪಶ್ರೀ ಮತ್ತು ತಂಡದವರು ಪ್ರಾರ್ಥಿಸಿದರು.