ವೀರಾಜಪೇಟೆ, ಜೂ. ೭: ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ನೀಡುವ ಸೌಲಭ್ಯಗಳಿಗಾಗಿ ಕಲ್ಯಾಣ ಮಂಡಳಿಯಿAದ ಅರ್ಜಿಗಳನ್ನು ಸ್ವೀಕಾರ ಮಾಡಬೇಕು, ಶೈಕ್ಷಣಿಕ ಅರ್ಜಿಗಳ ಸ್ವೀಕಾರ ಅವಧಿಯನ್ನು ಆಗಸ್ಟ್ ೩೧ರ ವರೆಗೆ ವಿಸ್ತರಿಸಬೇಕು, ಹಾಗೂ ೨೦೨೩ರ ಆಧಿಸೂಚನೆಯನ್ನು ರದ್ದು ಮಾಡಿ ೨೦೨೧ರ ಅಧಿಸೂಚನೆ ಅನ್ವಯ ಶೈಕ್ಷಣಿಕ ಧನ ಸಹಾಯ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ [ಸಿಐಟಿಯು] ವತಿಯಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ವೀರಾಜಪೇಟೆ ಕಾರ್ಮಿಕ ನಿರೀಕ್ಷಕ ಪಿ.ಎಂ. ನಿಕಿಲ್ ಚಂದ್ರ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಎ.ಸಿ. ಸಾಬು ಮಾತನಾಡಿ, ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಸರಕಾರ ತಡೆಹಿಡಿದಿರುವ ಕಟ್ಟಡ ಕಾರ್ಮಿಕರ ಸೌಲಭ್ಯ ಗಳನ್ನು ಮತ್ತು ಕಾರ್ಮಿಕರ ಹೊಸ ಅರ್ಜಿ ಹಾಗೂ ನವೀಕರಣ ಕುರಿತು ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಬಗೆ ಹರಿಸಬೇಕು. ಸರಕಾರ ನಡೆಸುತ್ತಿರುವ ಮೆಡಿಕಲ್ ತಪಾಸಣೆಗೆ ಹೆಚ್ಚು ಅನುದಾನ ಖರ್ಚು ಮಾಡುತ್ತಿರುವುದನ್ನು ನಿಲ್ಲಿಸಿ, ಸರಿಯಾದ ರೀತಿಯಲ್ಲಿ ಅರ್ಜಿ ಹಾಕಿದವವರಿಗೆ ಮೆಡಿಕಲ್ ಖರ್ಚು ನೀಡುವಂತಾಗಬೇಕು ಸೇರಿದಂತೆ ಕಾರ್ಮಿಕರ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ಮನವಿ ಸಲ್ಲಿಸುವ ಸಂದರ್ಭ ಕಟ್ಟಡ ಕಾರ್ಮಿಕ ಜಿಲ್ಲಾ ಖಜಾಂಚಿ ಸಿ.ಎ. ಹಮೀದ್, ನಗರ ಅಧ್ಯಕ್ಷ ಕೆ.ಕೆ. ಹರಿದಾಸ್, ಜಿಲ್ಲಾ ಸಮಿತಿಯ ಖಾಸಿಂ, ಹಾಗೂ ಸದಸ್ಯರಾದ ಸುರೇಶ್, ಆಲಿ ಮತ್ತಿತರರು ಹಾಜರಿದ್ದರು.