ಮಡಿಕೇರಿ, ಜೂ. ೮: ರಾತ್ರಿಯ ವೇಳೆಯಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ದನಗಳಿಗೆ ಅಮಲು ಇಂಜೆಕ್ಷನ್ ನೀಡಿ ಕಿಡಿಗೇಡಿಗಳು ಸ್ಕಾರ್ಪಿಯೋ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡಿದ ಘಟನೆ ಸಂಪಾಜೆ ಗ್ರಾಮದ ಗಡಿಕಲ್ಲಿನಲ್ಲಿ ತಾ.೭ರಂದು ರಾತ್ರಿ ನಡೆದಿದ್ದು, ಸ್ಥಳೀಯ ವ್ಯಕ್ತಿಯೊಬ್ಬರ ಮನೆಯ ಸಿಸಿ ಕ್ಯಾಮರಾದಲ್ಲಿ ದೃಶ್ಯ ಕಂಡು ಬಂದಿದೆ.

ಗಡಿಕಲ್ಲು ಮಸೀದಿಯ ಪಕ್ಕದಲ್ಲಿ ಪ್ರತಿ ನಿತ್ಯ ಹತ್ತಕ್ಕೂ ಹೆಚ್ಚು ದನಗಳು ರಾತ್ರಿ ವೇಳೆ ಮುಖ್ಯ ರಸ್ತೆ ಪಕ್ಕದಲ್ಲಿ ಮಲಗುತ್ತಿದ್ದು, ತಾ.೭ರಂದು ಮಧ್ಯರಾತ್ರಿ ೧ ಗಂಟೆ ವೇಳೆ ಸುಳ್ಯ ಭಾಗದಿಂದ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಕಿಡಿಗೇಡಿಗಳು ಈ ದನಗಳ ಪೈಕಿ ಎರಡು ದನಗಳಿಗೆ ಅಮಲು ಬರುವ ಇಂಜೆಕ್ಷನ್ ಕೊಟ್ಟು ಬಳಿಕ ತಮ್ಮ ಸ್ಕಾರ್ಪಿಯೋ ವಾಹನದಲ್ಲಿ ತುಂಬಿಸಿಕೊAಡು ಸುಳ್ಯ ಭಾಗಕ್ಕೆ ತೆರಳಿರುವುದಾಗಿ ತಿಳಿದುಬಂದಿದೆ.

ಗಡಿಕಲ್ಲು ಮಸೀದಿಯ ಬಳಿ ಮುಖ್ಯರಸ್ತೆ ಬದಿಯಲ್ಲಿ ಎರಡು ಲಾರಿಗಳು ನಿಂತಿದ್ದು, ಸ್ಕಾರ್ಪಿಯೋ ವಾಹನದಲ್ಲಿ ಬಂದವರು ತಮ್ಮ ಸ್ಕಾರ್ಪಿಯೋ ವಾಹನವನ್ನು ಎರಡು ಲಾರಿಯ ಮಧ್ಯಭಾಗದಲ್ಲಿ ನಿಲ್ಲಿಸಿ, ದನಗಳನ್ನು ತುಂಬಿಸಿ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಮಸೀದಿಯ ಬಳಿ ಇರುವ ಅನ್ವರ್ ಎಂಬವರ ಮನೆಯ ಸಿ.ಸಿ. ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.