*ಗೋಣಿಕೊಪ್ಪ, ಜೂ. ೮: ಹೆಲ್ಮೆಟ್ ಧರಿಸದೆ, ದಾಖಲೆಗಳಿಲ್ಲದೆ ವಾಹನ ಚಲಾಯಿಸುತ್ತಿದ್ದ ಚಾಲಕರ ಮೇಲೆ ಗೋಣಿಕೊಪ್ಪ ಪೊಲೀಸರು ವಾಹನ ಚಾಲನೆ ನಿಯಮ ಉಲ್ಲಂಘನೆಯಡಿ ಕ್ರಮ ಕೈಗೊಂಡರು.
ಶನಿವಾರ ಬೆಳಗ್ಗಿನ ಜಾವವೆ ಕಾರ್ಯಾಚರಣೆ ಕೈಗೊಂಡ ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ರೂಪದೇವಿ ಬಿರಾದರ್ ಠಾಣೆಯ ತಿರುವಿನ ರಸ್ತೆಯಲ್ಲಿ ತಪಾಸಣೆ ಮುಂದಾಗಿ ದ್ವಿಚಕ್ರ ಸವಾರರು ಅಪಾಯದ ಅರಿವಿಲ್ಲದೆ, ಹೆಲ್ಮೆಟ್ ಧರಿಸದೆ ದ್ವಿಚಕ್ರ ಚಾಲನೆ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದಂಡ ವಿಧಿಸಿದರು.
ಸೀಟ್ ಬೆಲ್ಟ್ ಧರಿಸದೆ ಚಾಲನೆ ಮಾಡುತ್ತಿದ್ದ ಚಾಲಕರಿಗೂ ಎಚ್ಚರಿಕೆಯನ್ನು ನೀಡಲಾಯಿತು. ಹೆಲ್ಮೆಟ್ ಧರಿಸುವುದು ಮತ್ತು ಸೀಟ್ ಬೆಲ್ಟ್ ಧರಿಸಿ ಚಾಲನೆ ಮಾಡುವುದರ ಉಪಯೋಗದ ಬಗ್ಗೆ ತಿಳಿಸಿ ಜಾಗೃತಿ ಮೂಡಿಸಲಾಯಿತು.
ವಾಹನಗಳ ದಾಖಲೆ ಪರಿಶೀಲಿಸಿ ದಂಡ ವಿಧಿಸಲಾಯಿತು. ಗೋಣಿಕೊಪ್ಪ ಪಟ್ಟಣದಲ್ಲಿ ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು ಜೊತೆಗೆ ಅತಿ ವೇಗದಲ್ಲಿ ಸಂಚರಿಸುವುದು ಅಪಘಾತಗಳಿಗೆ ಕಾರಣವಾಗುತ್ತಿತ್ತು.
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ಪೊಲೀಸರಿಗೆ ಒತ್ತಾಯದ ಮನವಿ ಸಲ್ಲಿಕೆಯಾದ ಕಾರಣ ಪೊಲೀಸರು ತಪಾಸಣೆಯ ಕ್ರಮ ಕೈಗೊಂಡು ಜಾಗೃತಿ ಮೂಡಿಸಿದರು.
ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ವಾಹನ ಚಾಲನೆ ಸಂದರ್ಭ ಟ್ರಾಫಿಕ್ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಅರಿವು ಮೂಡಿಸಲಾಯಿತು.