ಮಡಿಕೇರಿ, ಜೂ. ೮: ಕೊಲೆ ಪ್ರಕರಣವೊಂದರಲ್ಲಿ ಆರೋಪಿ ಯಾಗಿ ಮೈಸೂರು ಜೈಲಿನಲ್ಲಿದ್ದ ವ್ಯಕ್ತಿಯೋರ್ವ ಪೊಲೀಸರಿಂದ ತಪ್ಪಿಸಿಕೊಂಡಿದ್ದು, ಈ ವ್ಯಕ್ತಿ ಕೊಡಗಿನಲ್ಲಿ ಸೇರಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತಗೊಂಡಿದೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಇಲಾಖೆಗೆ ತಿಳಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.
ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಹುಣಸೂರು ಹನಗೋಡಿನ ಜವರಯ್ಯ (೪೮) ಎಂಬಾತನನ್ನು ಚಿಕಿತ್ಸೆಗೆಂದು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಕರೆದೊಯ್ದಿದ್ದ ಸಂದರ್ಭ ಕೈಕೋಳ ಸಹಿತವಾಗಿ ಮೇ ೨೩ ರಂದು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ೩ ವರ್ಷದ ಹಿಂದೆ ಜವರಯ್ಯ ಐಸ್ ಕ್ರೀಂ ವ್ಯಾಪಾರ ನಡೆಸುತ್ತಿದ್ದು, ದ್ವಿಚಕ್ರ ವಾಹನದಲ್ಲಿ ಹುಣಸೂರು ಸೇರಿದಂತೆ ಕೊಡಗಿನ ವೀರಾಜಪೇಟೆ, ಗೋಣಿಕೊಪ್ಪ, ಭಾಗಮಂಡಲ, ನಾಪೋಕ್ಲು ಕಡೆಗಳಲ್ಲೂ ವ್ಯಾಪಾರ ನಡೆಸುತ್ತಿದ್ದನೆನ್ನಲಾಗಿದೆ. ಈ ವ್ಯಕ್ತಿ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿ ಮೊದಲು ಕೆ.ಆರ್. ನಗರ ಕಾರಾಗೃಹದಲ್ಲಿದ್ದ ಬಳಿಕ ಅನಾರೋಗ್ಯದ ಕಾರಣ ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊAಡು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿದ ವೇಳೆ ಪೊಲೀಸರಿಂದ ತಪ್ಪಿಸಿಕೊಂಡಿದ್ದಾನೆ.
ಪರಾರಿಯಾದ ಬಳಿಕ ಒಂದೆರಡು ದಿನದಲ್ಲಿ ಈತ ಭಾಗಮಂಡಲದಲ್ಲಿದ್ದ ಸುಳಿವು ಪೊಲೀಸರಿಗೆ ದೊರೆತಿದ್ದು, ನಂತರ ಅಲ್ಲಿಂದಲೂ ತಲೆಮರೆಸಿ ಕೊಂಡಿದ್ದಾನೆ. ಈ ವ್ಯಕ್ತಿ ಕೊಡಗಿನಲ್ಲಿ ಕಾರ್ಮಿಕನ ಸೋಗಿನಲ್ಲಿ ಎಲ್ಲಾದರೂ ಸೇರಿಕೊಂಡಿರುವ ಗುಮಾನಿ ಇದ್ದು, ಈ ಬಗ್ಗೆ ಸುಳಿವು ದೊರೆತಲ್ಲಿ ತಿಳಿಸುವಂತೆ ಮೈಸೂರಿನ ದೇವರಾಜ ಪೊಲೀಸ್ ಠಾಣೆಯ ಪ್ರಕಟಣೆ ಕೋರಿದೆ.
ಮಾಹಿತಿಯನ್ನು ದೇವರಾಜ ಪೊಲೀಸ್ ಠಾಣೆ (೦೮೨೧-೨೪೧೮೩೦೬) ಅಥವಾ ೯೪೮೦೮೦೨೨೩೧ ಸಂಖ್ಯೆಗೆ ತಿಳಿಸಬಹುದಾಗಿದೆ.