ಮಡಿಕೇರಿ, ಜೂ.೮: ಪ್ರವಾಸೋದ್ಯಮದ ಉನ್ನತೀಕರಣ ಹಾಗೂ ಸಣ್ಣ ಮತು ಮಧ್ಯಮ ವರ್ಗದ ಉದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ದಕ್ಷಿಣ ಭಾರತ ಉತ್ಸವ ಏರ್ಪಡಿಸಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ತಾ. ೧೫ ಹಾಗೂ ೧೬ ರಂದು ಎರಡು ದಿನಗಳ ಕಾಲ ಉತ್ಸವ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಹಾಗೂ ಹೊಟೇಲ್ ಮತು ರೆಸ್ಟೋರೆಂಟ್ ಅಸೋಸಿಯೇಶನ್ ಅಧ್ಯಕ್ಷ ನಾಗೇಂದ್ರಪ್ರಸಾದ್ ಈ ಬಗ್ಗೆ ಮಾಹಿತಿ ನೀಡಿದರು. ಫೆಡರೇಶನ್ ಆಫ್ ಕರ್ನಾಟಕ ಚೇಂರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟಿç ವತಿಯಿಂದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ದಕ್ಷಿಣ ಭಾರತ ಉತ್ಸವ ಏರ್ಪಡಿಸಲಾಗಿದ್ದು, ಆಂಧ್ರ ಪ್ರದೇಶ, ಕೇರಳ, ಪುದುಚೇರಿ, ತಮಿಳುನಾಡು, ತೆಲಂಗಾಣ ಹಾಗೂ ಲಕ್ಷದ್ವೀಪದ ಪ್ರವಾಸೋದ್ಯಮ ಅವಲಂಬಿತರು, ಉದ್ಯಮಿಗಳು ಸೇರಿದಂತೆ ಅಂದಾಜು ಒಂದು ಲಕ್ಷಕ್ಕೂ ಅಧಿಕ ಮಂದಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಉತ್ಸವದಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆಯ ಬಂಡವಾಳ ಹೂಡಿಕೆದಾರರಿಗೆ ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿ ಕೊಡಲಾಗುತ್ತದೆ. ಪ್ರವಾಸಿ ತಾಣಗಳಲ್ಲಿ ರಸ್ತೆ, ಶೌಚಾಲಯ ಸರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವದರೊಂದಿಗೆ ತಾಣಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ ಸರಕಾರದ ಗಮನಕ್ಕೆ ತರಲಾಗುವದು. ಪ್ರವಾಸಿ ಜಿಲ್ಲೆಗಳಲ್ಲಿ ಏಕರೂಪದ ತೆರಿಗೆ ವ್ಯವಸ್ಥೆ ಜಾರಿ ಮಾಡುವದು, ತೆರಿಗೆಯಲ್ಲಿ ವಿನಾಯಿತಿ ನೀಡುವದು ಸೇರಿದಂತೆ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿ ಕುರಿತಂತೆ ಚರ್ಚೆ ಮಾಡಿ ಸರಕಾರದ ಗಮನ ಸೆಳೆಯಲಾಗುವದು ಎಂದು ತಿಳಿಸಿದರು.
ಸಣ್ಣ ಉದ್ಯಮದಲ್ಲಿ ತೊಡಗಿಸಿ ಕೊಳ್ಳುವವರು ದಾಖಲೆಗಳೊಂದಿಗೆ ಎಫ್ಕೆಸಿಸಿಐ ಗಮನಕ್ಕೆ ತಂದರೆ ಎಲ್ಲಾ ರೀತಿಯಲ್ಲಿಯೂ ಸಹಕಾರ ಮಾಡಲಾಗುವುದು. ಉತ್ಸವದಲ್ಲಿ ಪಾಲ್ಗೊಳ್ಳುವವರಿಗೆ ನಿಗದಿತ ಶುಲ್ಕ ವಿಧಿಸಿದ್ದು, ಕೊಡಗು ಜಿಲ್ಲೆಯಿಂದ ಪಾಲ್ಗೊಳ್ಳುವವರಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಹಾಗಾಗಿ ಜಿಲ್ಲೆಯ ಉದ್ಯಮಿಗಳು ಇದರ ಸದುಪಯೋಗಪಡೆದುಕೊಂಡು ಉತ್ಸವದಲ್ಲಿ ಪಾಲ್ಗೊಳ್ಳುವಂತೆ ನಾಗೇಂದ್ರಪ್ರಸಾದ್ ಮನವಿ ಮಾಡಿದರು.
(ಮೊದಲ ಪುಟದಿಂದ) ಉತ್ಸವವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಎಫ್ಕೆಸಿಸಿಐ ಅಧ್ಯಕ್ಷ ರಮೇಶ್ಚಂದ್ರ ಲಹೋಟಿ, ಪ್ರವಾಸೋದ್ಯಮ ಸಮಿತಿ ಅಧ್ಯಕ್ಷ ಶಿವ ಷಣ್ಮುಗಂ ಸೇರಿದಂತೆ ಇತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಹೊಸ ತಂಡ ಕಳೆದ ಒಂದು ತಿಂಗಳ ಹಿಂದೆಯಷ್ಟೇ ರಚನೆಗೊಂಡಿದ್ದು, ಎಲ್ಲ ಉದ್ಯಮಿಗಳು ಸದಸ್ಯತ್ವ ಪಡೆದುಕೊಳ್ಳಬೇಕು. ಉದ್ಯಮಿಗಳ ಯಾವುದೇ ರೀತಿಯ ಅನಾನುಕೂಲತೆಗಳಿದ್ದರೂ ಅದನ್ನು ಸರಿಪಡಿಸಲು ಸಂಸ್ಥೆ ಬದ್ದವಾಗಿರುತ್ತದೆ. ಮುಂದಿನ ದಿನಗಳಲ್ಲಿ ಉದ್ಯಮಿಗಳಿಗಾಗಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಸದಾ ಒತ್ತಡದಲ್ಲಿರುವ ಉದ್ಯಮಿಗಳ ಕುಟುಂಬದವರಿಗಾಗಿ ವರ್ತಕರ ದಿನಾಚರಣೆ ಹಮ್ಮಿಕೊಳ್ಳಲಾಗುವದು. ಈ ಹಿಂದೆ ಮಡಿಕೇರಿಯಲ್ಲಿ ಈ ಕಾರ್ಯಕ್ರಮ ನಡೆಸಲಾಗಿತ್ತು, ನಂತರದಲ್ಲಿ ನಡೆದಿಲ್ಲ. ಹಾಗಾಗಿ ಮುಂದಿನ ವರ್ಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಪ್ರಸಾದ್ ಹೇಳಿದರು. ಎಲ್ಲರನ್ನೂ ಒಟ್ಟು ಸೇರಿಸಿ ಕಾರ್ಯಾಗಾರ, ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳ ಲಾಗುವದೆಂದು ತಿಳಿಸಿದರು. ಎಫ್ಕೆಸಿಸಿಐ ನಿರ್ದೇಶಕ ಗಿರೀಶ್ ಗಣಪತಿ ಮಾತನಾಡಿ; ರಾಜ್ಯದ ಹಾಗೂ ಉದ್ಯಮದ ಅಭಿವೃದ್ಧಿಗೆ ಇದೊಂದು ದೊಡ್ಡ ಕಾರ್ಯಕ್ರಮವಾಗಿದೆ. ಇತ್ತೀಚೆಗೆ ಯುವಕರು ಕಾಫಿ ಸೇರಿದಂತೆ ಇತರ ಉದ್ಯಮಗಳಲ್ಲಿ ತೊಡಗಿಸಿಕೊಳ್ಳುತ್ತಿರುವದು ಶ್ಲಾಘನೀಯ. ಇಂತಹ ಉದ್ದಿಮೆದಾರರು ತಮ್ಮ ಉದ್ಯಮದ ಬಗ್ಗೆ ಉತ್ಸವದಲ್ಲಿ ಪ್ರಾತ್ಯಕ್ಷಿಕೆ ನೀಡಲು ಅವಕಾಶವಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದು ಹೇಳಿದರು.
ಗೋಷ್ಠಿಯಲ್ಲಿ ಚೇಂಬರ್ ಉಪಾಧ್ಯಕ್ಷ ಅಂಬೆಕಲ್ ನವೀನ್, ಪೂರ್ವಾಧ್ಯಕ್ಷ ಬಿ.ಎನ್. ಪ್ರಕಾಶ್, ಕಾರ್ಯದರ್ಶಿ ಮೋಂತಿ ಗಣೇಶ್, ಹೊಟೇಲ್ ಹಾಗೂ ರೆಸ್ಟೋರೆಂಟ್ ಅಸೋಸಿಯೇಶನ್ ಉಪಾಧ್ಯಕ್ಷ ಜಾಹೀರ್ ಅಹ್ಮದ್ ಇದ್ದರು.