ಮಡಿಕೇರಿ, ಜೂ. ೮: ಜಿಲ್ಲೆಯ ಮಾನವೀಯ ಸ್ನೇಹಿತರ ಒಕ್ಕೂಟದ ಆಶ್ರಯದಲ್ಲಿ ಇದೇ ಪ್ರಥಮ ಬಾರಿಗೆ ಮಡಿಕೇರಿಯಲ್ಲಿ ಸದಸ್ಯರ ಸಮ್ಮಿಲನ ನಡೆಯಿತು. ಒಕ್ಕೂಟದ ಅಡ್ಮಿನ್ ಎಂ.ಇ. ಮಹಮದ್ ಅಧ್ಯಕ್ಷತೆಯಲ್ಲಿ ಮಡಿಕೇರಿಯ ಕ್ರೆಸೆಂಟ್ ಶಾಲಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ನಿವೃತ್ತ ಸುಬೇದಾರ್ ಮೇಜರ್ ಡೇವಿಡ್ ವೇಗಸ್ ಉದ್ಘಾಟಿಸಿದರು. ಸಮಾರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಒಕ್ಕೂಟದ ಅಡ್ಮಿನ್ ಶಶಿಕುಮಾರ್, ನಮ್ಮ ಒಕ್ಕೂಟವೂ ಜಿಲ್ಲೆಯ ಕಡು ಬಡವರ ಸಂಕಷ್ಟಗಳಿಗೆ ಕೈಲಾದ ಸಹಾಯವನ್ನು ಮಾಡುತ್ತಾ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.

ಸಮಾಜ ಸೇವಕ ಮೈಕಲ್ ವೇಗಸ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಒಕ್ಕೂಟದ ಕಾರ್ಯ ಚಟುವಟಿಕೆಗಳ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಬಲ್ಲಮಾವಟಿ ನೇತಾಜಿ ಪ್ರೌಢಶಾಲೆಯ ಶಿಕ್ಷಕ ಮೆಹಬೂಬ್ ಸಾಬ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್, ಸಮಾಜ ಸೇವಕಿ ಗಾಯತ್ರಿ ನರಸಿಂಹ, ಸುಂಟಿಕೊಪ್ಪದ ಹಿರಿಯ ಸಾಫ್ಟ್ವೇರ್ ಇಂಜಿನಿಯರ್ ನಿಯಾಝ್ ಮುಂತಾ ದವರು ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಎಂ.ಇ. ಮಹಮ್ಮದ್ ರಚಿಸಿದ ಒಕ್ಕೂಟದ ಧ್ಯೇಯ ಗೀತೆಯನ್ನು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಹಾಗೂ ಒಕ್ಕೂಟದ ಪ್ರತಿನಿಧಿ, ಕಡ್ಲೇರ ತುಳಸಿ ಮೋಹನ್ ಹಾಡಿದರು. ಒಕ್ಕೂಟದ ಮತ್ತೋರ್ವ ಪ್ರತಿನಿಧಿ ಸಲೀನಾ ಅಶ್ರಫ್ ವರದಿ ವಾಚಿಸಿದರು. ಸಮ್ಮಿಲನದ ಪ್ರಯುಕ್ತ ಪುರುಷರಿಗೆ, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಒಕ್ಕೂಟದ ಪ್ರತಿನಿಧಿ ಸವಿತಾ ಕುಮಾರಿ ನಡೆಸಿಕೊಟ್ಟರು.

ಸ್ನೇಹಿತರ ಒಕ್ಕೂಟದ ನೂತನ ಪ್ರತಿನಿಧಿ ಪೊಡನೋಳನ ಪೂರ್ಣಿಮಾ ಗಿರೀಶ್ ಅವರ ಪುತ್ರಿ ಸಿಂಚನಾ ಅವರಿಂದ ನೃತ್ಯ ಕಾರ್ಯಕ್ರಮ ನೆರವೇರಿತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.

ಪತ್ರಕರ್ತ ರಂಜಿತ್ ಕವಲಪಾರ ಅವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಒಕ್ಕೂಟದ ಅಡ್ಮಿನ್ ಮನ್ಸೂರ್ ಪರ್ಝ್ ವಂದಿಸಿದರು. ಒಕ್ಕೂಟದ ಹಿರಿಯ ಅಡ್ಮಿನ್ ಎಂ.ಇ. ಮಹಮ್ಮದ್ ಅವರನ್ನು ಸಮಾರಂಭ ದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.