ನಾಪೋಕ್ಲು, ಜೂ. ೯: ವಾಹನ ಚಾಲನಾ ಪರವಾನಗಿ, ಸೂಕ್ತ ದಾಖಲೆಗಳು ಇಲ್ಲದೆ ವಾಹನ ಚಲಾಯಿಸಬಾರದು ಎಂದು ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಹೇಳಿದರು. ಸಮೀಪದ ಚೆರಿಯಪರಂಬುವಿನ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಸ್ಥಳೀಯ ಯುವಕರಿಗೆ ಹಾಗೂ ವಾಹನ ಸವಾರರಿಗೆ ತಿಳಿಹೇಳಿದ ಅವರು, ಜೀವ ಅಮೂಲ್ಯವಾದುದು. ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಿ ಕಾನೂನನ್ನು ಗೌರವಿಸಬೇಕು ಎಂದರು.

ವಾಹನ ಸವಾರರನ್ನು ತಪಾಸಣೆ ಮಾಡಿ ಹೆಲ್ಮೆಟ್ ಹಾಕದೆ ಚಲಾಯಿಸಿದವರಿಗೆ, ವಿಮೆ ಇಲ್ಲದ, ಸೀಟ್ ಬೆಲ್ಟ್ ಇಲ್ಲದೆ ಚಾಲನೆ ಮಾಡಿದವರಿಗೆ, ಬೈಕ್‌ಗಳಲ್ಲಿ ಎರಡಕ್ಕಿಂತ ಹೆಚ್ಚು ಮಂದಿ ಕುಳಿತು ಸಾಗಿದವರಿಗೆ ಜಾಗೃತಿ ಮೂಡಿಸಿ, ಎಚ್ಚರಿಕೆ ನೀಡಲಾಯಿತು. ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು, ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿ ಸಂಚಾರಿ ವಾಹನಗಳಿಗೆ ಜನಸಾಮಾನ್ಯರಿಗೆ ಅಡ್ಡಿಪಡಿಸುವುದು, ಅಪ್ರಾಪ್ತ ಯುವಕರು ವಾಹನ ಚಾಲನೆ ಮಾಡುವುದು ಕಂಡುಬAದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂದರ್ಭ ಎಚ್ಚರಿಕೆ ನೀಡಿದರು.